ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೊಳಚೆ ಹರಿಬಿಡುವ ತಾಣವಾದ ಕೆರೆಗಳು

ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ, ಕೆರೆಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ಸ್ಥಳೀಯರ ಆಗ್ರಹ
Last Updated 21 ನವೆಂಬರ್ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಮಳೆನೀರು ಸಂಗ್ರಹವಾಗುವುದಕ್ಕೆ ನಿರ್ಮಾಣವಾದ ಕೆರೆಗಳು ಈಗ ಕೊಳಚೆ ಸಂಗ್ರಹ ತಾಣಗಳಾಗಿ ಬದಲಾಗಿವೆ.

ನಗರದ ಮಧ್ಯಭಾಗದ ಕೆರೆಗಳಲ್ಲಿ ಕೊಳಚೆ ಸಂಗ್ರಹವಾಗಿ ಅನಾರೋಗ್ಯ ಹರಡುತ್ತಿದ್ದರೂ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಕೆರೆಗಳ ಸಂರಕ್ಷಣೆ ಆಗದಿದ್ದರೂ ಸ್ವಚ್ಛತೆ ಕಾಪಾಡುವುದಕ್ಕೂ ಸಾಧ್ಯವಾಗುತ್ತಿಲ್ಲ.

ಕೆರೆ ಸುತ್ತಮುತ್ತಲೂ ಮುಳ್ಳಿನ ಗಿಡಗಳು ಬೆಳೆದಿದ್ದು, ಬಹಿರ್ದೆಸೆಗೆ ಇಂಬು ನೀಡಿವೆ. ಒಳಚರಂಡಿ ಕಲ್ಮಶವನ್ನು ಕೆರೆಗಳಿಗೆ ಹರಿಸಲಾಗುತ್ತಿದ್ದು, ಕೆರೆಯಿಂದ ದುರ್ನಾತ ಹರಡುತ್ತಿದೆ.

ರಾಯಚೂರು ಎಪಿಎಂಸಿಗೆ ಹೊಂದಿಕೊಂಡಿರುವ ನೀರಭಾವಿ ಕುಂಟಾ ಕೆರೆಯು ಹಲವು ಸಮಸ್ಯೆಗಳ ತಾಣವಾಗಿ ಬದಲಾಗಿದೆ. ಅಂತರ್ಜಲ ವೃದ್ಧಿ ಹಾಗೂ ಪ್ರಾಣಿ, ಪಕ್ಷಿಗಳಿಗೆ ಆಶ್ರಯವಾಗಿದ್ದ ಕೆರೆಗೆ ಸುತ್ತಮುತ್ತಲಿನ ಬಡಾವಣೆಗಳಿಂದ ಕೊಳಚೆ ನೀರು ಹರಿಬಿಡಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಹಾಗೂ ಹೂಳು ಭರ್ತಿಯಾಗಿದ್ದು, ಈಗ ಮಳೆನೀರು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕೆರೆ ಭಾಗದಿಂದ ನೀರು ಹರಿದುಹೋಗಿ ಹಲವು ಬಡಾವಣೆಗಳು ಜಲಾವೃತವಾಗುತ್ತಿವೆ.

‘ಮೊದಲಿನಿಂದಲೂ ನೀರಭಾವಿ ಕುಂಟೆ ಅಭಿವೃದ್ಧಿ ನಿರ್ಲಕ್ಷ್ಯ ಮಾಡಲಾಗಿದೆ. ಕನಿಷ್ಠಪಕ್ಷ ಕೆರೆ ಸುತ್ತಲೂ ತಂತಿಬೇಲಿ ನಿರ್ಮಾಣ ಮಾಡುವ ಕೆಲಸವೂ ಮಾಡಿಲ್ಲ. ಜನರು ಕಸ ತಂದು ಹಾಕುತ್ತಿದ್ದಾರೆ. ಬಹಿರ್ದೆಸೆಗೆ ಕೆರೆಯು ಬಳಕೆ ಆಗುತ್ತಿದೆ. ವರ್ಷದುದ್ದಕ್ಕೂ ಕೊಳಚೆ ನೀರು ಸಂಗ್ರಹವಾಗಿ, ಗಬ್ಬುವಾಸನೆ ಹರಡಿಕೊಳ್ಳುತ್ತಿದೆ. ಕೆರೆಯಲ್ಲಿ ಸುತ್ತಲಿನ ಜನರಿಂದಲೇ ಸಮಸ್ಯೆಯಾಗಿದ್ದು, ಈಗ ಅವರೇ ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರಸಭೆಯು ಕೆರೆ ಅಭಿವೃದ್ಧಿ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಕೆರೆ ಪಕ್ಕದ ಮುನ್ನೂರುವಾಡಿ ಕಿರಾಣಿ ವ್ಯಾಪಾರಿ ವೆಂಕಟೇಶಯ್ಯ ಅವರು ಹೇಳುತ್ತಾರೆ.

ರಾಯಚೂರು ನಗರ ಮಧ್ಯೆ ವಿಶಾಲವಾಗಿರುವ ಮಾವಿನಕೆರೆ (ಆಮ್‌ತಾಲಾಬ್‌) ಅಭಿವೃದ್ಧಿ ವಿಷಯವು ಪ್ರಚಾರಕ್ಕೆ ಸೀಮಿತವಾಗುತ್ತಾ ಬರುತ್ತಿದೆ. ಕೆರೆ ಅತಿಕ್ರಮಣ ತಡೆಯುವುದು, ಕೊಳಚೆ ಹರಿಬಿಡುವುದನ್ನು ನಿಲ್ಲಿಸುವುದಕ್ಕೆ ಯಾರಿಂದಲೂ ಇಂದಿಗೂ ಸಾಧ್ಯವಾಗಿಲ್ಲ. ಹಲವು ಬಡಾವಣೆಗಳಿಗೆ ಕೆರೆಯು ಹೊಂದಿಕೊಂಡಿದ್ದು, ಹತ್ತಾರು ನಗರಸಭೆ ಸದಸ್ಯರ ವ್ಯಾಪ್ತಿಯಲ್ಲಿದೆ. ಕೆರೆ ಸಂರಕ್ಷಣೆಗೆ ಯಾವುದೇ ಸದಸ್ಯರು ಮನಸು ಮಾಡುತ್ತಿಲ್ಲ. ಕೆರೆಯು ಚಿಕ್ಕದಾಗುತ್ತಿದ್ದು, ಪಕ್ಕದ ಇಂದಿರಾನಗರ ಬಡಾವಣೆ ಹಾಗೂ ಜಹೀರಾಬಾದ್‌ ವಿಸ್ತರಣೆ ಆಗುತ್ತಲೇ ಇವೆ.

ಗೊಲ್ಲಕುಂಟಾ ಕೆರೆ ಅಭಿವೃದ್ಧಿ ಮಾಡುವುದಾಗಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ಹಲವು ವರ್ಷಗಳಿಂದ ಹೇಳುತ್ತಾ ಬರುತ್ತಿದೆ. ವಾಸ್ತವದಲ್ಲಿ ಕೆರೆ ಸಂರಕ್ಷಣೆಗೆ ಯಾವುದೇ ಕೆಲಸ ಮಾಡಿಲ್ಲ. ಅಕ್ಕಪಕ್ಕದಲ್ಲಿ ಕೆರೆ ಅತಿಕ್ರಮಣ ಆಗುತ್ತಿದೆ. ಕೆರೆಗೆ ತ್ಯಾಜ್ಯರಾಶಿ ತಂದು ಸುರಿಯಲಾಗುತ್ತಿದೆ. ಇದರಿಂದ ಕೆರೆ ಅಂಗಳದಲ್ಲಿ ಗಬ್ಬುವಾಸನೆ ಹರಡುತ್ತಿದೆ.

ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಕೆರೆಗಳನ್ನು ಸಂರಕ್ಷಿಸುವುದು ಆಗುತ್ತಿಲ್ಲ. ಕೆಕೆಆರ್‌ಡಿಬಿಯಿಂದ ಅನುದಾನದ ಲಭ್ಯತೆ ಇದ್ದರೂ ಜನಪ್ರತಿನಿಧಿಗಳು ಕೆರೆಗಳ ಸಂರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.

ಬದಲಾದ ನೀರಿನ ಬಣ್ಣ

ದೇವದುರ್ಗ: ಪಟ್ಟಣ ಸಮೀಪದ ಜಿನ್ನಾಪುರ, ರಾಮದುರ್ಗ, ಕಾಕರಗಲ್, ಸುಂಕೇಶ್ವರಹಾಳ ಗ್ರಾಮಗಳ ಭೂಪ್ರದೇಶಕ್ಕೆ ಹಾಗೂ ಜನ-ಜಾನುವಾರಗಳಿಗೆ ಜೀವಜಲ ಒದಗಿಸುವ ಜಿನ್ನಾಪುರ ಕೆರೆಯು ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರುಪಯುಕ್ತವಾಗಿದೆ.

ಕೆರೆಯ ನೀರು ನಿಂತಲ್ಲೆ ನಿಂತು ಹಸಿರು ಬಣ್ಣಕ್ಕೆ ಪರಿವರ್ತನೆಗೊಂಡಿದೆ. ಮುಂಬರುವ ಬೇಸಿಗೆಯ ದಿನಗಳಲ್ಲಿ ಜಾನುವಾರುಗಳಿಗೂ ಸಹ ಕುಡಿಯಲು ಶುದ್ಧ ನೀರು ಇಲ್ಲದಂತಾಗಿದೆ. ಕೆರೆ ನೀರಿನ ಸಹಾಯದಿಂದ ಜಲ ಜೀವನ ಮಿಷನ್‌ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಅದರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಶುದ್ಧ ಕುಡಿಯುವ ನೀರು ಇಲ್ಲ, ಕೆರೆ ನಿರ್ವಹಣೆಯೂ ಇಲ್ಲ. ಸದ್ಯಕ್ಕೆ ಸುತ್ತಮುತ್ತಲಿನ ಗ್ರಾಮಗಳ ಜನರು ಕೊಳವೆಭಾವಿ ನೀರನ್ನೇ ಅವಲಂಬಿಸಿದ್ದಾರೆ.

ಕೊಳಚೆ ಗುಂಡಿಯಾದ ಕರಡಕಲ್ಲ ಕೆರೆ

ಲಿಂಗಸುಗೂರು: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಬಿಲ್ಲಮರಾಜರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದ್ದ ಕರಡಕಲ್ಲ ಕೆರೆಯು ಇಂದು ಭಾಗಶಃ ಒತ್ತುವರಿ ಜೊತೆಗೆ ಘನತ್ಯಾಜ್ಯ, ಮೃತ ಪ್ರಾಣಿಗಳನ್ನು ಎಸೆಯುವ ಗುಂಡಿಯಾಗಿ ಪರಿವರ್ತಿತಗೊಂಡಿದೆ.

ಪಟ್ಟಣಕ್ಕೆ ಹೊಂದಿಕೊಂಡ ವಿಶಾಲವಾದ ಕೆರೆಯು ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸುವ ಜೊತೆಗೆ, ವಾಯು ವಿಹಾರಕ್ಕೆ ಹೆಚ್ಚು ಅನುಕೂಲಕರ ಸ್ಥಳವಾಗಿ ಗುರುತಿಸಿಕೊಂಡಿದೆ. ಸ್ಥಳೀಯರ ಅಸಹಕಾರ, ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ಕೊಳಚೆ ಗುಂಡಿಯಾಗಿ ದುರ್ನಾತ ಬೀರುವಂತಾಗಿದೆ.

ಶತಮಾನಗಳಷ್ಟು ಹಳೆಯ ಕೆರೆ ಸಂರಕ್ಷಣೆ ಹಾಗೂ ಕೆರೆ ದಂಡೆಗುಂಟ ಉದ್ಯಾನ, ವಿಶಾಲವಾದ ಕೆರೆಯಲ್ಲಿ ಬೋಟಿಂಗ್‍ ವ್ಯವಸ್ಥೆಗೆ ಸದ್ಯಕ್ಕೆ ಕೋಟ್ಯಂತರ ಹಣ ಖರ್ಚು ಮಾಡಿ ಪೂರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಆದರೆ, ಕೊಳಚೆಯಿಂದ ತುಂಬಿರುವುದನ್ನು ಸ್ವಚ್ಛಗೊಳಿಸುವ ಯಾವ ಕಾರ್ಯಸೂಚಿಗಳು ಇಲ್ಲ.

‘ಐತಿಹಾಸಿಕ ಕೆರೆ ಒತ್ತುವರಿ ತಡೆಯುವ ಜೊತೆಗೆ ಕೆರೆಯ ದಂಡೆಯಲ್ಲಿ ಮೃತ ಪ್ರಾಣಿಗಳನ್ನು ಎಸೆಯುವ ಹಾಗೂ ಸುಡುವ ಪದ್ಧತಿಗೆ ಕಡಿವಾಣ ಹಾಕಬೇಕು. ಪಟ್ಟಣದ ಕೊಳಚೆ ನೀರು ಸೇರ್ಪಡೆ ಆಗದಂತೆ ಮತ್ತು ಘನತ್ಯಾಜ್ಯ ಎಸೆಯದಂತೆ ನೋಡಿಕೊಳ್ಳಬೇಕು. ಅತಿ ಹೆಚ್ಚು ಕೊಳಚೆಯಿಂದ ರೋಗ ಹರಡುವ ಸ್ಥಳವಾಗಿರುವ ಕೆರೆ ಅಭಿವೃದ್ಧಿಗೆ ಮುಂದಾಗಬೇಕು’ ಎಂಬುದು ಜನರ ಒತ್ತಾಯ.

ಅಭಿವೃದ್ಧಿ ಆಗುತ್ತಿಲ್ಲ ಹೊಕ್ರಾಣಿ ಕೆರೆ

ಮಾನ್ವಿ: ಪಟ್ಟಣದ ಕೋನಾಪುರಪೇಟೆಯ ಪುರಾತನ ಹೊಕ್ರಾಣಿ ಕೆರೆ ಅಭಿವೃದ್ಧಿ ಮಾಡುತ್ತಿಲ್ಲ. ಬೆಟ್ಟದ ಮಧ್ಯೆ ಇರುವ ಈ ಕೆರೆ ಮಳೆಗಾಲದಲ್ಲಿ ಭರ್ತಿ ಯಾಗುತ್ತದೆ. ಈ ಕೆರೆಗೆ ಹೊಂದಿಕೊಂಡು ಬಾವಿ ಇದೆ. ಬಾವಿಯ ನೀರನ್ನು ಕುಡಿಯಲು ಬಳಸುವ ಸ್ಥಳೀಯರು, ಕೆರೆ ನೀರನ್ನು ಬಟ್ಟೆ ತೊಳೆಯಲು ಬಳಸುತ್ತಾರೆ. ಕೆರೆಯ ಸುತ್ತಲೂ ತಂತಿ ಬೇಲಿ ಹಾಕಬೇಕು. ಸುತ್ತಮುತ್ತಲಿನ ವಾರ್ಡ್‌ಗಳಿಂದ ಕೆರೆಗೆ ತೆರಳಲು ರಸ್ತೆಯ ಸಮಸ್ಯೆ ಇದೆ.

ಸ್ಥಳೀಯ ಪುರಸಭೆಯ ಆಡಳಿತವು ಕೆರೆಯ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕು. ಕೆರೆಯಲ್ಲಿ ವರ್ಷಪೂರ್ತಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

***

ನೀರಾವರಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೆರೆಗಳನ್ನು ಸ್ವಚ್ಛಗೊಳಿಸಿ ನಿರ್ವಹಣೆ ಮಾಡಲಿ. ಕಾಲುವೆಗಳನ್ನು ನಿರ್ಮಿಸಿ ಕೆರೆ ನೀರಾವರಿಗೆ ಒಳಪಡಿಸಿದರೆ ರೈತರಿಗೂ ಅನುಕೂಲವಾಗುತ್ತದೆ
- ಖಾಜಾ ಹುಸೇನಿ, ಜಿನ್ನಾಪುರ

***

ಐತಿಹಾಸಿಕ ಕೆರೆಯನ್ನು ಪ್ರವಾಸಿ ತಾಣವಾಗಿ ಮೇಲ್ದರ್ಜೆಗೇರಿಸಬೇಕು. ರೋಗಪೀಡಿತ ಕೇಂದ್ರವಾಗಿರುವ ಕೊಳಚೆ ನಿರ್ಮೂಲನಗೊಳಿಸಿ, ಸ್ವಚ್ಛವಾದ ವಾತಾವರಣ ನಿರ್ಮಿಸಬೇಕು
- ಸಿದ್ದನಗೌಡ ಪಾಟೀಲ, ವ್ಯಾಪಾರಸ್ಥ, ಲಿಂಗಸುಗೂರು

***

ಹೊಕ್ರಾಣಿ ಕೆರೆ ಹತ್ತಿರ ಇರುವ ಜಾಗದಲ್ಲಿ ಉದ್ಯಾನ ನಿರ್ಮಿಸಿ, ಕೆರೆಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸುಂದರವಾದ ಕೆರೆಯು ಕಲ್ಮಶವಾಗುವುದು
- ಬಸವರಾಜ ಕನ್ನಾರಿ, ಮಾನ್ವಿ

ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಯಮುನೇಶ ಗೌಡಗೇರಾ, ಬಸವರಾಜ ಭೋಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT