ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪಗೌಡ ಬಿಜೆಪಿಗೆ ಮಾರಾಟ: ಆಂಜನೇಯ ಆರೋಪ

Last Updated 8 ಏಪ್ರಿಲ್ 2021, 11:45 IST
ಅಕ್ಷರ ಗಾತ್ರ

ಸಿಂಧನೂರು: 'ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿ ನಂತರ ಹಣದಾಸೆಗಾಗಿ ಬಿಜೆಪಿಗೆ ಮಾರಾಟವಾಗಿರುವ ಪ್ರತಾಪಗೌಡ ಪಾಟೀಲ ಅವರು, ಚುನಾವಣೆಯಲ್ಲಿ ಸೋಲುವುದು ಸತ್ಯ. ನಂತರ ದಿನಗಳಲ್ಲಿ ಬಡ್ಡಿ ವ್ಯವಹಾರ ಮಾಡುವುದೊಂದೇ ಅವರಿಗೆ ಗತಿಯಾಗಲಿದೆ' ಎಂದು ಮಾಜಿ ಸಚಿವ ಎಚ್.ಆಂಜನೇಯ ವ್ಯಂಗ್ಯವಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಾಪಗೌಡ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬೆನ್ನಿಗೆ ಚೂರಿ ಹಾಕಿರುವುದು ಮತದಾರರಿಗೆ ಗೊತ್ತಿದ್ದು, ಅವರೇ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಜನಪರ ಕಾಳಜಿ ಹೊಂದಿರುವ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ವಿಧಾನಸಭೆಗೆ ಕಳುಹಿಸಲಿದ್ದಾರೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದವರ ಅಭಿವೃದ್ದಿಗಾಗಿ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ ಪ್ರತಿವರ್ಷ ₹ 30 ಸಾವಿರ ಕೋಟಿ ಅನುದಾನ ನೀಡಲಾಗುತ್ತಿತ್ತು. ಆದರೀಗ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ₹ 26 ಸಾವಿರ ಕೋಟಿಗೆ ಇಳಿಕೆ ಮಾಡಿದೆ. ವಿವಿಧ ನಿಗಮಗಳಲ್ಲಿ ದೊರೆಯುತ್ತಿದ್ದ ₹ 5 ಲಕ್ಷ ಸಹಾಯಧನವನ್ನು ₹ 1 ಲಕ್ಷಕ್ಕೆ ಇಳಿಸಿ ಮೋಸ ಮಾಡಿದೆ. ಎಸ್‍ಸಿ, ಎಸ್‍ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಧ್ವನಿಯೆತ್ತದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.

ಶಾಸಕ ಡಾ.ಯತೀಂದ್ರ ಮಾತನಾಡಿ, ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದ್ದ ಜನಾದೇಶವನ್ನು ಧಿಕ್ಕರಿಸಿ ಬಿಜೆಪಿಗೆ ಹೋಗಿರುವ ಪ್ರತಾಪಗೌಡ ಪಾಟೀಲರ ವಿರುದ್ಧ ಕ್ಷೇತ್ರದ ಜನರಿಗೆ ಆಕ್ರೋಶವಿದೆ. ಆದ್ದರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಪ್ರಚಾರಕ್ಕೆ ಹೋದ ಗ್ರಾಮಗಳಲ್ಲಿ ದೇಣಿಗೆ ನೀಡಿ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಪಕ್ಷದವರು ಎಷ್ಟೇ ಹಣ ಸುರಿದರೂ, ಕುತಂತ್ರ ರೂಪಿಸಿದರೂ ಪ್ರತಾಪಗೌಡ ಗೆಲ್ಲಲ್ಲ’ ಎಂದರು.

ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಂತಹ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರು ಬರೀ ಸುಳ್ಳು ಹೇಳುತ್ತಲೇ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಹೇಳಿದರು.

ಮಸ್ಕಿ ಉಪಚುನಾವಣೆ ಉಸ್ತುವಾರಿ. ಆರ್.ದ್ರುವನಾರಾಯಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಮುಖಂಡ ಎ.ವಸಂತಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT