ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ಶವಗಾರದ ಕೊಠಡಿ ಸುತ್ತ ತಂತಿ ಬೇಲಿ; ಶವ ಪರೀಕ್ಷೆಗೆ ಅಲೆದಾಟ

Published 27 ಫೆಬ್ರುವರಿ 2024, 14:44 IST
Last Updated 27 ಫೆಬ್ರುವರಿ 2024, 14:44 IST
ಅಕ್ಷರ ಗಾತ್ರ

ಮಸ್ಕಿ: ಶವ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಭೂ ವಿವಾದ ನ್ಯಾಯಾಲಯದಲ್ಲಿರುವ ಕಾರಣ ಮಾಲೀಕರು ಆಸ್ಪತ್ರೆಯ ಕಟ್ಟಡ ಹೊರತುಪಡಿಸಿ ಆಸ್ಪತ್ರೆಯ ಖಾಲಿ ಜಾಗ ಹಾಗೂ ಶವಪರೀಕ್ಷೆ ನಡೆಸುವ ಕೊಠಡಿಯ ಸುತ್ತ ಕಳೆದ 15 ದಿನಗಳಿಂದ ತಂತಿ ಬೇಲಿ ಹಾಕಿದ ಕಾರಣ ಶವ ಪರೀಕ್ಷೆಗೆ ತೊಂದರೆಯಾಗಿದೆ.

ಎರಡು ದಿನಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅವರ ಶವ ಪರೀಕ್ಷೆ ನಡೆಸಲು ಪೊಲೀಸರು ಹಾಗೂ ಕುಟುಂಬಸ್ಥರು ಪರದಾಡಬೇಕಾಯಿತು.

ಸೋಮವಾರ ತಡ ರಾತ್ರಿ ಮೃತಪಟ್ಟ ವ್ಯಕ್ತಿಯ ಶವವನ್ನು ಮಸ್ಕಿ ಆಸ್ಪತ್ರೆಗೆ ತಂದ ಪೊಲೀಸರು ಹಾಗೂ ಕುಟುಂಬ ಸದಸ್ಯರು ಶವ ಪರೀಕ್ಷಾ ಕೊಠಡಿಗೆ ತಂತಿ ಬೇಲಿ ಹಾಕಿದ್ದನ್ನು ಕಂಡು 28 ಕಿ.ಮೀ. ದೂರದ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ಶವ ಪರೀಕ್ಷೆ ಮಾಡಿಸಿದರು.

ಮಂಗಳವಾರ ಮಧ್ಯಾಹ್ನ ತಾಲ್ಲೂಕಿನ ಮೆದಿಕಿನಾಳ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಬೈಕ್‌ ಸವಾರನ ಶವವನ್ನು 25 ಕಿ.ಮೀ. ದೂರದ ಮುದಗಲ್‌ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಶವ ಪರೀಕ್ಷೆ ಮಾಡಿಸಲಾಯಿತು.

ಈ ಭಾಗದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ. ಶವ ಪರೀಕ್ಷೆ ಮಾಡಿಸುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅಪಘಾತಗಳಲ್ಲಿ ಕುಟುಂಬದವರನ್ನು ಕಳೆದುಕೊಂಡ ಸಂಬಂಧಿಕರು ಶವ ಪರೀಕ್ಷೆಗಾಗಿ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಧ್ಯ ಪ್ರವೇಶಿಸಿ ಆಸ್ಪತ್ರೆಯ ಭೂ ವಿವಾದ ಇತ್ಯರ್ಥಪಡಿಸಿ ತಂತಿ ಬೇಲಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT