ಭಾನುವಾರ, ಮೇ 29, 2022
21 °C

ರಾಯಚೂರು: ಗ್ರಾಪಂ ವ್ಯಾಪ್ತಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ –ಶಾಸಕ ಬಸನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸದ್ಯಕ್ಕೆ ಹೋಬಳಿ ಮಟ್ಟದಲ್ಲಿ ಮಾತ್ರ ರೈತ ಸಂಪರ್ಕ ಕೇಂದ್ರಗಳಿರುವ ಕಾರಣ ರೈತರು ಬೀಜ ಹಾಗೂ ಗೊಬ್ಬರ ಪಡೆಯುವುದಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ರೈತ ಸಂಪರ್ಕ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.

ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದೆಯೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರಿಗೆ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಿದರು.

ಯರಗೇರಾ ರೈತ ಸಂಪರ್ಕ ಕೇಂದ್ರ ಮಾತ್ರ ಸ್ವಂತ ಕಟ್ಟಡದಲ್ಲಿದ್ದು, ಚಂದ್ರಬಂಡಾದ ರೈತ ಸಂಪರ್ಕ ಕೇಂದ್ರವು ಕೃಷಿ ಇಲಾಖೆಯ ಸರ್ಕಾರಿ ವಸತಿಗೃಹದಲ್ಲಿದೆ. ಇನ್ನುಳಿದ ನಾಲ್ಕು ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಗಿಲ್ಲೇಸುಗೂರು, ಕುರ್ಡಿ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಇನ್ನುಳಿದ ಕೇಂದ್ರಗಳಿಗೂ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದೆ ಎಂದು ಕೃಷಿ ಸಚಿವರು ಉತ್ತರಿಸಿದರು.

ಶಾಸಕ ಬಸನಗೌಡ ದದ್ದಲ ಅವರು ಮಾತನಾಡಿ, ‘ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ರೈತ ಸಂಪರ್ಕ ಕೇಂದ್ರಗಳಿವೆ. ಮುಂಗಾರು ಹಾಗೂ ಹಿಂಗಾರು ಹಂಗಾಮು ಸಂದರ್ಭದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಮಳೆ, ಬಿಸಿಲು ಲೆಕ್ಕಿಸದೆ ಸರದಿ ನಿಂತುಕೊಳ್ಳುವ ಪರಿಸ್ಥಿತಿ ಇದೆ. ಈ ಸಮಸ್ಯೆ ತಪ್ಪಿಸಬೇಕಿದೆ. ಆದಷ್ಟು ಬೇಗನೆ ಗ್ರಾಮ ಪಂಚಾಯಿತಿಗೊಂದು ಕೇಂದ್ರ ಸ್ಥಾಪಿಸಬೇಕು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು