ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ರಾಯಚೂರು ಜಿಲ್ಲೆಯಲ್ಲಿ ಶೇ 71ರಷ್ಟು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಮತದಾನ ಶಾಂತಿಯುತ
Published 3 ಜೂನ್ 2024, 15:33 IST
Last Updated 3 ಜೂನ್ 2024, 15:33 IST
ಅಕ್ಷರ ಗಾತ್ರ

ರಾಯಚೂರು: ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ 71.28ರಷ್ಟು ಮತದಾನವಾಗಿದೆ.

ಮತದಾನ ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ ಜಿಟಿಜಿಟಿ ಮಳೆಯ ಕಾರಣ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಕೇವಲ ಶೇ.5.89 ರಷ್ಟು ಮತದಾನವಾಗಿತ್ತು. 868 ಪುರುಷರು ಹಾಗೂ 329 ಮಹಿಳಾ ಮತದಾರರು ಮತಹಕ್ಕು ಚಲಾಯಿಸಿದ್ದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ 23.73ರಷ್ಟು ಮತದಾನವಾಗಿತ್ತು. 3331 ಪುರುಷರು ಹಾಗೂ 1491 ಮಹಿಳೆಯರು ಮತದಾನ ಮಾಡಿದ್ದರು. ಮಧ್ಯಾಹ್ನ 2 ಗಂಟೆಗೆ ಶೇ 43.98ರಷ್ಟು ಹಾಗೂ 3 ಗಂಟೆಗೆ ಶೇ 58.36ರಷ್ಟು ಮತದಾನವಾಗಿತ್ತು.

ಮತದಾನ ಮುಕ್ತಾಯದ ವೇಳೆಗೆ ಸಂಜೆ 4 ಗಂಟೆಗೆ ಶೇ 71.28ರಷ್ಟು ಮತದಾನವಾಗಿದೆ. 10134 ಪುರುಷರು 4346 ಮಹಿಳೆಯರು ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ 14481 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕೊನೆ ಕ್ಷಣದಲ್ಲಿ ಮತಗಟ್ಟೆ ಸ್ಥಳಾಂತರ: ಪರದಾಟ

ಕವಿತಾಳ: ಇಲ್ಲಿಗೆ ಸಮೀಪದ ಹಾಲಾಪುರ ಗ್ರಾಮದಲ್ಲಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತಗಟ್ಟೆಯನ್ನು ಕೊನೆ ಕ್ಷಣದಲ್ಲಿ ಬದಲಿಸಿದ ಕಾರಣ ಮತ ಚಲಾಯಿಸಲು ಬಂದ ಮತದಾರರು ಪರದಾಡುವಂತಾಯಿತು.

ಈಶಾನ್ಯ ಪದವೀಧರ ಕ್ಷೇತ್ರದ ಮಸ್ಕಿ ತಾಲ್ಲೂಕಿನ ಹಾಲಾಪುರ ಮತ್ತು ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಅಂದಾಜು 276 ಮತದಾರರಿಗೆ ಹಾಲಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಿರುವುದಾಗಿ ಮಾಹಿತಿ ನೀಡಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಕಚೇರಿ ಮೇಲಿನ ಮಹಡಿಯಲ್ಲಿರುವ ಕಾರಣ ಮತದಾರರಿಗೆ ತೊಂದರೆಯಾಗುತ್ತದೆ ಎಂದು ಅಲ್ಲಿಂದ ಅಂದಾಜು 1.5 ಕಿ.ಮೀ ದೂರದ ಜೋಳದರಾಶಿ ಕ್ಯಾಂಪಿನ ಕೂಸಿನ ಮನೆಗೆ ಮತಗಟ್ಟೆ ಸ್ಥಳಾಂತರ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ಇಲ್ಲದ ಮತದಾರರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದಾಗ ಅದಕ್ಕೆ ಬೀಗ ಹಾಕಲಾಗಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಮತದಾರರು ಜೋಳದರಾಶಿ ಕ್ಯಾಂಪಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಮತಗಟ್ಟೆ ಸ್ಥಳಾಂತರದ ಬಗ್ಗೆ ಮಾಹಿತಿ ನೀಡಿಲ್ಲ. ಹಳ್ಳಿಗಳಿಂದ ಬಂದು ಅಲೆಯುವಂತಾಯಿತು ಎಂದು ಮತದಾರರು ಚುನಾವಣಾ ಅಧಿಕಾರಿಯ ಜತೆ ವಾಗ್ವಾದ ಮಾಡಿದರು.

ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಸೆಕ್ಟರ್‌ ಅಧಿಕಾರಿ ಸತ್ಯನಾರಾಯಣ ತಹಶೀಲ್ದಾರರ ಜತೆ ಮಾತನಾಡುವಂತೆ ಮತದಾರರಿಗೆ ಸೂಚಿಸಿದರು. ಆದರೆ ಅದಕ್ಕೆ ಒಪ್ಪದ ಮತದಾರರು ತಹಶೀಲ್ದಾರರ ಜತೆ ಮಾತನಾಡುವಂತೆ ಅಧಿಕಾರಿಗೆ ತಾಕೀತು ಮಾಡಿದರು.

ಮೇಲಿನ ಮಹಡಿಯಲ್ಲಿರುವ ಕಾರಣ ಮತಗಟ್ಟೆಯನ್ನು ಕೊನೆ ಕ್ಷಣದಲ್ಲಿ ಬದಲಿಸಲಾಗಿದೆ ಎಂದು ತಹಶೀಲ್ದಾರ್ ಸುಧಾ ಅರಮನೆ ತಿಳಿಸಿದರು.

ಕತ್ತಲೆಯಲ್ಲಿ ಮತದಾನ

ಲಿಂಗಸುಗೂರು: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಲಿಂಗಸುಗೂರು ಮತಗಟ್ಟೆಯಲ್ಲಿ ಕನಿಷ್ಠ ಎರಡು ತಾಸು ವಿದ್ಯುತ್‍ ಸಂಪರ್ಕ ಕಡಿತದಿಂದ ಕತ್ತಲೆ ಕೊಠಡಿಯಲ್ಲಿ ಮತ ಚಲಾಯಿಸಲು ಮತದಾರರು ತೊಂದರೆ ಅನುಭವಿಸಿದರು. ಎಚ್ಚೆತ್ತುಕೊಂಡ ತಹಶೀಲ್ದಾರ್‌ ಮಲ್ಲಪ್ಪ ಯರಗೋಳ ಇನ್‍ವೈಟರ್ ಮೂಲಕ ವಿದ್ಯುತ್‍ ಸಂಪರ್ಕ ಕೊಡಿಸಿದರು.

ದೊಡ್ಡದಾದ ಬ್ಯಾಲೇಟ್‍ ಪೇಪರ್ ಅನ್ನು ನಿಯಮಾನುಸಾರ ಮಡಚಿ ಕೊಡುವುದು ಹಾಗೂ ಆದ್ಯತೆ ಮತದಾನ ಹಾಕಿ ಪುನಃ ಮಡಚಿ ಮತಪೆಟ್ಟಿಗೆಗೆ ಹಾಕುವಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದು ನಿಧಾನಗತಿ ಮತದಾನಕ್ಕೆ ಕಾರಣವಾಯಿತು. ಕೆಲವೆಡೆ ವಿದ್ಯುತ್‍ ಕೈ ಕೊಟ್ಟಿದ್ದರಿಂದ ಬೆಳಕಿನ ಕೊರತೆಯಿಂದ ಮತದಾರರು ಪರದಾಡಿದರು.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿತು. ತುಂತುರು ಮಳೆಯಿಂದಾಗಿ 10 ಗಂಟೆವರೆಗೆ ಮತದಾರರ ಸಂಖ್ಯೆ ಕ್ಷೀಣಿಸಿತ್ತು. ಮಳೆ ಕಡಿಮೆ ಆಗುತ್ತಿದ್ದಂತೆ ತಂಡೋಪ ತಂಡವಾಗಿ ಬಂದ ಮತದಾರರು ಸರದಿ ಸಾಲಿನಲ್ಲಿ ನಿಂತು ಕಾದು ಮತದಾನ ಮಾಡಿದ್ದು ಕಂಡುಬಂತು.

ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿ ಶಾಹಿ ಗುರುತು ಪ್ರದರ್ಶಿಸಿದ ಮತದಾರರು
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿ ಶಾಹಿ ಗುರುತು ಪ್ರದರ್ಶಿಸಿದ ಮತದಾರರು
ಕವಿತಾಳದ ಮತಗಟ್ಟೆ ಕೇಂದ್ರದ ಆವರಣದಲ್ಲಿ ಮಳೆ ನೀರು ನಿಂತ ಪರಿಣಾಮ ಮತದಾರರು ಕೆಸರಲ್ಲಿ ನಡೆದು ಬರುತ್ತಿರುವುದು
ಕವಿತಾಳದ ಮತಗಟ್ಟೆ ಕೇಂದ್ರದ ಆವರಣದಲ್ಲಿ ಮಳೆ ನೀರು ನಿಂತ ಪರಿಣಾಮ ಮತದಾರರು ಕೆಸರಲ್ಲಿ ನಡೆದು ಬರುತ್ತಿರುವುದು

ಮತಗಟ್ಟೆಗೆ ಅಧಿಕಾರಿಗಳು ಭೇಟಿ

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪವಿಭಾಗಾಧಿಕಾರಿ ಎಸ್.ಎಸ್ ಸಂಪಗಾವಿ ತಹಶೀಲ್ದಾರ್ ಸುರೇಶ ವರ್ಮಾ ಹಾಜರಿದ್ದರು.

ಮತದಾನಕ್ಕೆ ತೊಡಕಾದ ಮಳೆ

ರಾಯಚೂರು ನಗರದಲ್ಲಿ 5 ಮತಗಟ್ಟೆಗಳು ಹಾಗೂ ಗ್ರಾಮಾಂತರ ಭಾಗದಲ್ಲಿ 2 ಮತಗಟ್ಟೆಗಳು ಸೇರಿ ರಾಯಚೂರು ತಾಲ್ಲೂಕಿನಲ್ಲಿ 7 ಮತಗಟ್ಟೆಗಳಲ್ಲಿ ಹಾಗೂ ಜಿಲ್ಲೆಯ ಒಟ್ಟು 30 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಬೆಳಗಿನ ಜಾವದಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿತ್ತು. 8 ಗಂಟೆಗೆ ವೇಳೆಗೆ ಮಳೆ ಜೋರು ಪಡೆಯಿತು. ಮಳೆಯಲ್ಲಿ ಮತಗಟ್ಟೆಗೆ ಬರಲು ಮತದಾರರು ಹಿಂದೇಟು ಹಾಕಿದರು. 10 ಗಂಟೆ ವೇಳೆಗೆ ಮಳೆ ಬಿಡುವು ಕೊಟ್ಟ ನಂತರ ಮತದಾರರು ಮತಗಟ್ಟೆಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆಗಳಿಗೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಜೂನ್‌ 5ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT