ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೈಹಿಕ ಶಿಕ್ಷಣದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ’

ರಾಯಚೂರಿನಲ್ಲಿ ನಡೆದ ದೈಹಿಕ‌ ಶಿಕ್ಷಣ ಬಲವರ್ಧನೆ ಕಾರ್ಯಾಗಾರ
Last Updated 29 ಜನವರಿ 2021, 12:20 IST
ಅಕ್ಷರ ಗಾತ್ರ

ರಾಯಚೂರು: ದೈಹಿಕ ಶಿಕ್ಷಣದಿಂದ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ಸಾಧ್ಯ. ಪ್ರತಿಶಾಲೆಗೂ ದೈಹಿಕ ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮೀಪತಿ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ‌ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರಿ ಗ್ರೇಡ್-1, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಅನುದಾನ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ‘ಒಂದು ದಿನದ ದೈಹಿಕ‌ ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಹಾಗೂ ಫಿಟ್ ಇಂಡಿಯಾ ಉಪನ್ಯಾಸ’ದಲ್ಲಿ ಮಾತನಾಡಿದರು.

ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಯು ಶಿಸ್ತು, ಸಂಯಮವನ್ನು ಕಲಿಸುವ ವೃತ್ತಿಯಾಗಿದೆ. ಆದರೆ ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳು ದೈಹಿಕ ಶಿಕ್ಷಕರಿಗೆ ಸಿಗುತ್ತಿಲ್ಲ. ಶಿಕ್ಷಣ ಇಲಾಖೆಯ ಶಾಪಕ್ಕೆ ದೈಹಿಕ ಶಿಕ್ಷಕರು ಗುರಿಯಾಗಿದ್ದಾರೆ. ದೈಹಿಕ ಶಿಕ್ಷಕರು ಪ್ರಾಥಮಿಕ ಹಂತದಿಂದ ಮಕ್ಕಳಿಗೆ ಯೋಗ, ವ್ಯಾಯಾಮ, ಪ್ರಾಣಾಯಾಮ ಅಭ್ಯಾಸ ಮಾಡಿಸಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ವೈದ್ಯರಂತೆ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಶಾಲೆಗೊಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಇರಲೇಬೆಕು. ಯಾವುದೇ ಕಾರಣಕ್ಕೂ ದೈಹಿಕ ಶಿಕ್ಷಕರನ್ನು ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆ ಮಾಡಬಾರದು ಎಂದು ಹೇಳಿದರು.

2006-07ನೇ ಸಾಲಿನಲ್ಲಿ ವೈಜನಾಥ್ ಪಾಟೀಲ್ ಅವರ ನೇತೃತ್ವದಲ್ಲಿ ಸಲ್ಲಿಸಿದ್ದ ಪ್ರತಿಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿ ಕಡ್ಡಾಯ ವರದಿ ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. 1,200 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಸರ್ಕಾರಿ ಶಾಲೆಯ ಮಕ್ಕಳು ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರಿಲ್ಲದಿರುವ ಬಗ್ಗೆ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದು, ಸಚಿವರಿಂದ ಸ್ಪಂದನೆ ದೊರೆತಿದೆ. ಶೀಘ್ರ ಪರಿಶೀಲನೆ ನಡೆಸಿ 1200 ಕಾಲೇಜುಗಳಲ್ಲಿ ನೇಮಕಾತಿ ಮಾಡುವ ಭರವಸೆ ನೀಡಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿಯೂ ಖಾಲಿಯಿರುವ ದೈಹಿಕ ಶಿಕ್ಷಕರ ನೇಮಕಾತಿಯ ನಡೆಯಲಿದೆ. ಸಂಘದಲ್ಲಿನ ಅಸಮಾಧಾನಗಳು ಬದಿಗಿಟ್ಟು ಮುಂದುವರಿಯಬೇಕು ಎಂದು ಹೇಳಿದರು.

ಜಿಲ್ಲೆಯ ದೈಹಿಕ ಶಿಕ್ಷಣ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ,ಶಿಕ್ಷಣ ಇಲಾಖೆಯ ಅಧಿಕಾರಿ ಎಚ್.ಸುಖದೇವ ಮಾತನಾಡಿದರು. ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು, ದೈಹಿಕ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT