ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಯರ ಆರಾಧನೆಗೆ ವೈಭವದ ಸಿದ್ಧತೆ: ಪೀಠಾಧಿಪತಿ

ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವ ಆಗಸ್ಟ್‌ 14 ರಿಂದ ಆರಂಭ
Last Updated 11 ಆಗಸ್ಟ್ 2019, 12:33 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವ ಅಂಗವಾಗಿ ಆಗಸ್ಟ್‌ 14ರಿಂದ 20ರವರೆಗೆ ನಡೆಯಲಿರುವ ಸಪ್ತ ರಾತ್ರೋತ್ಸವ ಕಾರ್ಯಕ್ರಮ ವೈಭವದಿಂದ ನೆರವೇರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಮಂತ್ರಾಲಯ ಶ್ರೀಮಠದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಸಂಜೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಆರಂಭವಾಗಲಿದ್ದು, ಲಕ್ಷ್ಮೀಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಮುಖ ವೇದಿಕೆ ಉದ್ಘಾಟನೆ, ರಾಮದೇವರ ಪೂಜೆ, ಉತ್ಸವರಾಯರ ಅಲಂಕಾರ, ಮೆರವಣಿಗೆ ಹಾಗೂ ಧಾನ್ಯ ಪೂಜೆ ನಡೆಯಲಿದೆ. 15ರಂದು ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಮುದ್ರಾ ಧಾರಣೆ, ಮೂಲರಾಮರ ಪೂಜೆ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಶಾಖೋತ್ಸವ ನಡೆಯಲಿದೆ ಎಂದರು.

16ರಂದು ಗುರು ಸಾರ್ವಭೌಮರ ಪೂರ್ವಾರಾಧನೆ ಆರಂಭವಾಗಲಿದ್ದು, ತಿರುಮಲ ತಿರುಪತಿ ದೇವಸ್ಥಾನದಿಂದ ಬರುವ ಶ್ರೀನಿವಾಸನ ಶೇಷವಸ್ತ್ರವನ್ನು ಮೆರವಣಿಗೆ ಮೂಲಕ ತಂದು ರಾಯರಿಗೆ ಸಮರ್ಪಣೆ ಮಾಡಲಾಗುತ್ತದೆ. ಪಂಚಾಮೃತ ಅಭಿಷೇಕ, ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಬೆಂಗಳೂರಿನ ಚತುರ್ವೇದಿ ವೇದವಾಸಾಚಾರ್‌ ಹಾಗೂ ಹೈದರಾಬಾದ್‌ನ ಶ್ರೀಪಾದ ಸುಬ್ರಮಣ್ಯಂ ಅವರಿಗೆ ಅನುಗ್ರಹ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯು ₹1 ಲಕ್ಷ ಬಹುಮಾನ ಒಳಗೊಂಡಿದೆ ಎಂದು ತಿಳಿಸಿದರು.

17ರಂದು ಮಧ್ಯಾರಾಧನೆ ಸಮಾರಂಭ ನಡೆಯಲಿದ್ದು, ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಮೂಲ ರಾಮದೇವರ ಪೂಜೆ ಹಾಗೂ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಲಿವೆ.18ರಂದು ಉತ್ತರಾರಾಧನೆ ನಿಮಿತ್ತವಾಗಿ ಮಹಾ ರಥೋತ್ಸವ ನಡೆಯಲಿದೆ. ಸಂಸ್ಕೃತ ಪಾಠ ಶಾಲೆಯಿಂದ ಪುರ ಬೀದಿಗಳಲ್ಲಿ ಉತ್ಸವ ನಡೆಯಲಿದ್ದು, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ನಂತರ ವಸಂತೋತ್ಸವ ನಡೆಯುತ್ತದೆ. 19ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ. 20ರಂದು ಸಪ್ತ ರಾತ್ರೋತ್ಸವದ ಮುಕ್ತಾಯ ಸಮಾರಂಭ ನಡೆಯಲಿದ್ದು, ಸಕಲ ವಾಹನಗಳನ್ನು, ಆಭರಣಗಳನ್ನು ಕಟ್ಟಿಗೆಯ ರಥದಲ್ಲಿ ಮೆರವಣಿಗೆ ನಡೆಯಲಿದ್ದು, ಅಂದಿಗೆ ಸಪ್ತರಾತ್ರೋತ್ಸವ ಪರಸಮಾಪ್ತಿ ಆಗಲಿದೆ ಎಂದು ವಿವರಿಸಿದರು.

ಆರಾಧನೆ ನಡೆಯುವ ಸಪ್ತ ದಿನಗಳೂ ವಿದ್ವಾಂಸರಿಂದ ಗ್ರಂಥಗಳ ಪಾರಾಯಣ ಮತ್ತು ಉಪನ್ಯಾಸ ನಡೆಯಲಿದೆ. ಲಕ್ಷಕ್ಕೂ ಮೀರಿದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ, ಸುಲಭವಾಗಿ ಪರಿಮಳ ಪ್ರಸಾದ ವಿತರಣೆಗೆ ವ್ಯವಸ್ಥೆ ಹಾಗೂ ಶ್ರೀಮಠಕ್ಕೆ ಪುಷ್ಪಾಲಂಕಾರ ಮಾಡಲಾಗುತ್ತದೆ. ಆರಾಧನೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವೃದ್ಧರಿಗೆ ಹಾಗೂ ರೋಗಿಗಳಿಗೆ ಶೀಘ್ರ ದರ್ಶನ, ಅಂಬುಲೆನ್ಸ್‌, ಅಗ್ನಿಶಾಮಕ, ಭದ್ರತಾ ಕೇಂದ್ರ, ವೈದ್ಯಕೀಯ ವ್ಯವಸ್ಥೆ, ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಕೆ, ಪೊಲೀಸ್ ಬಂದೋಬಸ್ತ್‌, ಮಾಹಿತಿ ಕೇಂದ್ರ, ಹೆಚ್ಚುವರಿ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT