ರಾಯಚೂರು: ರಾಜ್ಯದ ಅತಿಹೆಚ್ಚು ಹಿಂದುಳಿದ ತಾಲ್ಲೂಕು ಹೊಂದಿರುವ ರಾಯಚೂರು ಜಿಲ್ಲೆ ಇನ್ನೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿಲ್ಲ.
ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಬೇಕಿದ್ದ ರಾಯಚೂರು ಜಿಲ್ಲೆಯ ಜನರು ಸೆಪ್ಟೆಂಬರ್ 17 ರಂದು ಪ್ರತಿಭಟನೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ದಶಕಗಳಿಂದ ಈಡೇರದ ಬೇಡಿಕೆಗಳು ಹಾಗೂ ಜಿಲ್ಲೆಗೆ ಬರಬೇಕಿದ್ದ ಏಮ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಿಕೊಳ್ಳಲಾಗಿದೆ. ಆದರೂ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎನ್ನುವ ಅಕ್ರೋಶವನ್ನು ಸಂಘ–ಸಂಸ್ಥೆಗಳು ವ್ಯಕ್ತಪಡಿಸುತ್ತಿವೆ. ರಾಯಚೂರು ಶಾಸಕರ ಕಚೇರಿ ಎದುರು ಬೃಹತ್ ಪ್ರತಿಭಟನೆಗೆ ಮುಂದಾಗಿವೆ.
‘ಕಲ್ಯಾಣ ಕರ್ನಾಟಕ’ ಎಂದು ಹೆಸರು ಬದಲಾಗಿದೆ. ಆದರೆ ಜಿಲ್ಲೆಯ ಮೂಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾತ್ರ ಆಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಬರುವ ಅನುದಾನದಲ್ಲೂ ಅನ್ಯಾಯವಾಗಿದೆ ಎನ್ನುವ ಆಕ್ರೋಶವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಮಂಡಳಿಯು ಕಲಬುರ್ಗಿ ಕೇಂದ್ರಿಕೃತವಾಗಿ ಕೆಲಸ ಮಾಡುತ್ತಿದ್ದು, ರಾಯಚೂರು ಜಿಲ್ಲೆಯ ಮೂಲಸೌಕರ್ಯ ಹಾಗೂ ಜನಜೀವನ ಸುಧಾರಣೆಗೆ ಕ್ರಿಯಾಯೋಜನೆ ರೂಪಿಸಿ, ದೊಡ್ಡಪ್ರಮಾಣದಲ್ಲಿ ಅನುದಾನ ಒಗಿಸುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ.
ಡಾ.ನಂಜುಂಡಪ್ಪ ವರದಿ ಶಿಫಾರಸುಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಏಮ್ಸ್ ರಾಯಚೂರಿನಲ್ಲೇ ಸ್ಥಾಪಿಸಬೇಕಿತ್ತು. ಅದನ್ನು ಹುಬ್ಬಳ್ಳಿ–ಧಾರವಾಡಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿರುವುದನ್ನು ತಡೆ ಹಿಡಿಯಬೇಕು ಎಂದು ಮತ್ತೆ ನಿರಂತರ ಹೋರಾಟಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ. ಹೋರಾಟ ಮುಂದುವರಿಸಲು ಏಮ್ಸ್ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ರಾಯಚೂರು ಐಐಐಟಿ, ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ಒದಗಿಸಿ ಕ್ಯಾಂಪಸ್‌ಗಳನ್ನು ನಿರ್ಮಾಣ ಮಾಡುವುದನ್ನು ವಿಳಂಬ ಮಾಡಬಾರದು ಎಂದು ಒತ್ತಾಯಿಸಲಾಗುತ್ತಿದೆ.
ಕೃಷ್ಣಾ ಬಲದಂಡೆ ಕಾಲುವೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ರೈತರು ಕಾಯಂ ಹೋರಾಟ ಮಾಡುವುದನ್ನು ತಪ್ಪಿಸಲಾಗುತ್ತಿಲ್ಲ. ನನೆಗುದಿಗೆ ಬಿದ್ದಿರುವ ಉಪಕಾಲುವೆಗಳ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. 1957 ರಿಂದ ರಾಯಚೂರು ವಿಮಾನ ನಿಲ್ದಾಣಕ್ಕಾಗಿ ಜಾಗ ಮೀಸಲಿಡಲಾಗಿದೆ. ಇದುವರೆಗೂ ವಿಮಾನ ನಿಲ್ದಾಣ ನಿರ್ಮಾಣ ಆಗಿಲ್ಲ.
ಇದುವರೆಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿಗೊಳಿಸುವ ಕಾರ್ಯವಾಗಿಲ್ಲ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿರುವ ರಾಯಚೂರಿಗೆ ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ. ಆದರೆ ಅಭಿವೃದ್ಧಿ ಸಾಧಿಸುವ ಮಾರ್ಗಸೂಚಿಗಳು ಬರುತ್ತಿವೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಹಲವು ಯೋಜನೆಗಳು ಪೂರ್ಣವಾಗಿಲ್ಲ. ರಾಯಚೂರು ನಗರದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣವು ನಾಲ್ಕು ವರ್ಷಗಳಿಂದ ಹಾಗೇ ಇದೆ. ನಿರಂತರ ನೀರು ಪೂರೈಸುವ ಕಾಮಗಾರಿ ಹಾಗೂ ಒಳಚರಂಡಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.
ಜನಜೀವನ ಸುಗಮವಾಗಲು ಬೇಕಾದ ಮೂಲ ಸೌಕರ್ಯಗಳನ್ನು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎನ್ನುವುದು ಯುವ ಸಮುದಾಯದ ಒತ್ತಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.