ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಪ್ರತಿಭಟನೆ: ಕಾರ್ಯಕರ್ತರ ಬಂಧನ, ಬಿಡುಗಡೆ

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ: ಸರ್ಕಾರದ ವಿರುದ್ಧ ಘೋಷಣೆ
Published 28 ಜೂನ್ 2024, 16:23 IST
Last Updated 28 ಜೂನ್ 2024, 16:23 IST
ಅಕ್ಷರ ಗಾತ್ರ

ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಎಸ್‌.ಟಿ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬ್ಯಾರಿಕೇಡ್‌ ಹಾಕಿ, ಪೊಲೀಸ್‌ ಸರ್ಪಗಾವಲು ಹಾಕಿ ಪ್ರವೇಶ ದ್ವಾರದಲ್ಲೇ ತಡೆದು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನಾನಿರತರು ರಾಜ್ಯ ಸರ್ಕಾರ‌ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮುದಾಯದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಕಾಂಗ್ರೆಸ್ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಪ್ರಮುಖ ಕಾರಣರಾದ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದರೆ ಸಾಲದು ಇದರಲ್ಲಿ ಇನ್ನು ಅನೇಕರು ಭಾಗಿಯಾಗಿದ್ದು ಅವರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಆಕ್ರಮ ಹಣ ವರ್ಗಾವಣೆ ಮಾಡಿರುವುದರಿಂದ ರಾಜಕೀಯ ನಾಯಕರ ಕಿರುಕುಳಕ್ಕೆ ಅಮಾಯಕ ಅಧಿಕಾರಿ ಬಲಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸರ್ಕಾರ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.

ಶಾಸಕ ಡಾ.ಶಿವರಾಜ್ ಪಾಟೀಲ ಮಾತನಾಡಿ, ‘ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣ ತನ್ನ ಸ್ವಂತಕ್ಕೆ ಬಳಸಿಕೊಂಡ ಸರ್ಕಾರ ಅವರ ಹೊಟ್ಟೆ ಮೇಲೆ ಹೊಡೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಸರ್ಕಾರ ತಕ್ಷಣ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನಿಗಮದಿಂದ ಅಕ್ರಮವಾಗಿ ತೆಲಂಗಾಣಕ್ಕೆ ವರ್ಗಾವಣೆಗೊಂಡ ಹಣ ಮರು ಪಾವತಿ ಆಗಬೇಕು. ಇದರ ಬಗ್ಗೆ ಬಿಜೆಪಿಯಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಮಾಜಿ ಶಾಸಕ ಶಿವನಗೌಡ ನಾಯಕ ಮಾತನಾಡಿ, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದರೂ ಅನೇಕ ಶಾಸಕರು ಮೌನ ವಹಿಸಿದ್ದು ಸರಿಯಲ್ಲ. ನಾನು ಶಾಸಕನಾಗಿದ್ದರೆ ಸದನದಲ್ಲಿ ಧ್ವನಿ ಎತ್ತುವುದಲ್ಲದೇ ಚಾಟಿ ಬೀಸುತ್ತಿದ್ದೆ’ ಎಂದು ಗುಡುಗಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ.ವಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್ ಶಂಕ್ರಪ್ಪ, ಗಂಗಾಧರ ನಾಯಕ, ಮುಖಂಡರಾದ ತ್ರಿವಿಕ್ರಮ ಜೋಶಿ, ಪಿ.ಯಲ್ಲಪ್ಪ, ಕೊಟ್ರೇಶಪ್ಪ ಕೋರಿ, ಶರಣಪ್ಪಗೌಡ ಜಾಡಲದಿನ್ನಿ, ನರಸಪ್ಪ ಯಕ್ಲಾಸಪೂರು, ಮುಕ್ತಿಯಾರ್, ಡಾ.ನಾಗರಾಜ ಬಾಲ್ಕಿ, ಆಂಜನೇಯ, ಶಂಕರ ರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.  

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ್‌ ಪಾಟೀಲ ಮಾತನಾಡಿದರು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ್‌ ಪಾಟೀಲ ಮಾತನಾಡಿದರು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ್‌ ಪಾಟೀಲ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT