ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ಎಪಿಎಂಸಿ ತಿದ್ದುಪಡಿ: ಬೋಸರಾಜು

Last Updated 21 ಮೇ 2020, 14:38 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ತರಾತುರಿಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ್ದು, ಇದುಬಂಡವಾಳಶಾಹಿಗಳಿಗೆ ಲಾಭ ಮಾಡುತ್ತಿರುವ ರೈತ ವಿರೋಧಿ ನೀತಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್.ಎಸ್. ಬೋಸರಾಜು ಆರೋಪಿಸಿದರು.

ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಎಪಿಎಂಸಿ ಕಾಯ್ದೆ ಜಾರಿಗೆ ತರುವ ಮುನ್ನ ವಿರೋಧ ಪಕ್ಷ, ರೈತರ, ತಜ್ಞರ ಅಭಿಪ್ರಾಯ ಪಡೆದು ಚರ್ಚೆಯ ನಂತರ ಜಾರಿಗೆ ತರಬೇಕಿತ್ತು. ಆದರೆ ರೈತರ ಪರ ಕಾಳಜಿ ವಹಿಸದೇ ತರಾತುರಿಯಲ್ಲಿ ಜಾರಿ ಮಾಡಿದೆ. ಇದು ಎಪಿಎಂಸಿಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ ಎಂದರು.

ಜನವರಿ ತಿಂಗಳಿನಲ್ಲಿ ಚೀನಾ ಸೇರಿದಂತೆ ಕೆಲವೆಡೆ ಕೊರೊನಾ ಮಹಾಮಾರಿ ಹರಡುತ್ತಿತ್ತು. ಅಂತಹ ಸಂದರ್ಭದಲ್ಲಿ ಏನು ಕ್ರಮ ಕೈಗೊಂಡಿಲ್ಲ. ನಂತರ ಮಾರ್ಚ್ ವರೆಗೆ ಸುಮ್ಮನಿದ್ದು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೇ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ. ಇದರಿಂದ ವಲಸೆ ಕಾರ್ಮಿಕರು ಅಪಾರ ಸಂಖ್ಯೆಯಲ್ಲಿ ಸಮಸ್ಯೆಗೆ ಸಿಲುಕಿದ್ದಾರೆ. ಈಗ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದ್ದು ಈಗಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ದೂರಿದರು.

ರಾಜ್ಯ ಸರ್ಕಾರ ಆರಂಭದಲ್ಲಿ ಕಾರ್ಮಿಕರನ್ನು ಸ್ವಗ್ರಾಮಕ್ಕೆ ಕಳುಹಿಸಿ ನಂತರ ಹಿಂದೆ ಸರಿದಿದೆ. ಹಾಲಿನ ಅಸಮರ್ಪಕ ವಿತರಣೆ, ಲಾಕ್ ಡೌನ್ ನಿಂದ ತತ್ತರಿಸಿದ ಬಡ ಜನರಿಗೆ ಇಂದಿರಾ ಕ್ಯಾಂಟಿನ್ ಮೂಲಕ ಊಟ ನೀಡುವ ಕಾರ್ಯದಲ್ಲಿ ವಿಫಲವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಾವಧಿ ಮುಗಿದಿದ್ದು ಈಗಿನ ಸದಸ್ಯರನ್ನೇ ಮುಂದುವರೆಸದೇ ಸಲಹಾ ಸಮಿತಿ ರಚಿಸಿ ಬಿಜೆಪಿ ಕಾರ್ಯಕರ್ತರನ್ನು ಅಧಿಕಾರ ನೀಡಲು ಮುಂದಾಗಿದ್ದು ಪಂಚಾಯ್ತಿ ಕಾಯ್ದೆ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸೋಂಕು ಪರೀಕ್ಷೆಗೆ ಪ್ರಾಯೋಗಾಲಯ ಸ್ಥಾಪಿಸಲು ಆರೋಗ್ಯ ಸಚಿವರನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಕ್ವಾರಂಟೈನ್ ನಲ್ಲಿ ಮೂಲ ಸೌಲಭ್ಯ ನೀಡುತ್ತಿಲ್ಲ. ಇದರಿಂದ ಜನರಲ್ಲಿ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಮಹಾನಗರಗಳಿಂದ ವಲಸೆ ಬಂದ ಕಾರ್ಮಿಕರಿಗೆ ಭವಿಷ್ಯದಲ್ಲಿ ಉದ್ಯೋಗ, ಪರಿಹಾರ ನೀಡುವ ಮೂಲಕ ಸಂತ್ರಸ್ಥರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ಶಾಂತಪ್ಪ, ಬಷೀರುದ್ದೀನ್, ಅಬ್ದುಲ್ ಕರೀಂ, ಬಸವರಾಜ ರೆಡ್ಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT