ಶನಿವಾರ, ಮೇ 28, 2022
30 °C
ಮಿನಿವಿಧಾನಸೌಧದ ಎದುರು ಎಡಪಕ್ಷಗಳ ಜಂಟಿ ಪ್ರತಿಭಟನೆ

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಿ: ಶೇಕ್ಷಾಖಾದ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನುದಾನ ಹೆಚ್ಚಿಸುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು’ ಎಂದು ಆಗ್ರಹಿಸಿ ಸಿಪಿಐಎಂ, ಸಿಪಿಐ, ಎಸ್‍ಯುಸಿಐ, ಸಿಪಿಐಎಂಎಲ್ ಲಿಬರೇಶನ್, ಅಖಿಲ ಭಾರತ ಫಾರ್ವಡ್ ಬ್ಲಾಕ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಸ್ವರಾಜ್ ಇಂಡಿಯಾ ತಾಲ್ಲೂಕು ಘಟಕದ ಪದಾಧಿಕಾರಿಗಳು ಜಂಟಿಯಾಗಿ ಸೋಮವಾರ ಇಲ್ಲಿನ ಮಿನಿವಿಧಾನಸೌಧ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಲಾಕ್‍ಡೌನ್, ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಸಂತ್ರಸ್ಥರಿಗೆ ಪರಿಹಾರ ಒದಗಿಸಬೇಕು. ಸಾರ್ವತ್ರಿಕವಾಗಿ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಬೇಕು. ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ಅಗತ್ಯ ನೆರವು ನೀಡಬೇಕು. ವಾರ್ಡ್‍ವಾರು ನಿರ್ದಿಷ್ಟ ನೌಕರರನ್ನು ನಿಯೋಜಿಸಿ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ಉಚಿತ ಪೌಷ್ಟಿಕ ಆಹಾರ ಒದಗಿಸಬೇಕು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಿ ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ನೀಡಬೇಕು. ಕೋವಿಡ್ ವಾರಿಯರ್ಸ್‍ಗಳ ಜೀವನ ಭದ್ರತೆಗೆ ಅಗತ್ಯ ಕ್ರಮ ವಹಿಸಬೇಕು. ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚಿಸಬೇಕು ಎಂದು ಸಿಪಿಐಎಂ ಕಾರ್ಯದರ್ಶಿ ಶೇಕ್ಷಾಖಾದ್ರಿ ಒತ್ತಾಯಿಸಿದರು.

ಸಿಪಿಐ ಮುಖಂಡ ಬಾಷುಮಿಯಾ ಮಾತನಾಡಿ,‘ಕಾರ್ಮಿಕ ವಿರೊಧಿ, ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಬಾರದು. ಕಾರ್ಮಿಕ ಸಂಘಗಳ ಮಾನ್ಯತೆಗೆ, ಗುತ್ತಿಗೆ ಮುಂತಾದ ಕಾಯಂಯೇತರರ ಕಾಯಂಗೆ, ಅಸಂಘಟಿತರಿಗೆ ಶಾಸನಬದ್ಧ ಭವಿಷ್ಯ ನಿಧಿಗಾಗಿ ಶಾಸನ ರೂಪಿಸಬೇಕು. ಭೂ ಸುಧಾರಣಾ, ಕೃಷಿ ಉತ್ಪನ್ನ ಮಾರುಕಟ್ಟೆ, ಭೂ ಕಂದಾಯ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸಿನಂತೆ ನಿಗದಿಪಡಿಸಿ ಜಾರಿಗೊಳಿಸುವ ಶಾಸಕ ರೂಪಿಸಬೇಕು. ಮತಾಂತರ ನಿಷೇಧ ವಿಧೇಯಕ ಹಿಂಪಡೆಯಬೇಕು. ಬೆಲೆ ಏರಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು’ ಎಂದು ಅವರು
ಒತ್ತಾಯಿಸಿದರು.

ಎಡಪಕ್ಷಗಳ ಮುಖಂಡರಾದ ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ ಸತ್ತಾರಖಾನ್, ನರಸಿಂಹಪ್ಪ, ಯಂಕಪ್ಪ ಕೆಂಗಲ್, ಬಾಷುಮಿಯಾ, ಗೇಸುದರಾಜ್ ಮಕಾಂದರ್, ಗರೀಬ್‍ಸಾಬ ಕೊಡ್ಲಿ, ಮಹೇಶ, ಚಂದಪ್ಪ, ರಾಮಣ್ಣ ತುರ್ವಿಹಾಳ, ಅನ್ವರ್‍ಬಾಷಾ ಮೇಸ್ತ್ರಿ, ಅಳ್ಳಪ್ಪ, ಸಿದ್ದಪ್ಪ, ವೀರೇಶ ನಾಯಕ, ಗುರುರಾಜ್, ಪ್ರಕಾಶ, ಸೋಮನಗೌಡ, ದೇವಪ್ಪ ಹಾಗೂ ಚಂದಪ್ಪ ಜವಳಗೇರಾ ಅವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು