ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಕೋವಿಡ್‍ ಕೇಂದ್ರಗಳಲ್ಲಿ ಮೊಮ್ಮಯ್ಯ ಸೇವೆ

Last Updated 31 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಅಂತ್ಯಕ್ರಿಯೆ ನೆರವೇರಿಸಿದ ಮೊಮ್ಮಯ್ಯ

ಲಿಂಗಸುಗೂರು: ಕೊರೊನಾ ಸೋಂಕು ಹರಡದಂತೆ ತಡೆಯುವುದು, ಸೋಂಕು ಪೀಡಿತರ ಮನೆಗಳನ್ನು ಸ್ಯಾನಿಟೈಸ್ ಮಾಡುವುದು, ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವುದು, ಸಂಕಷ್ಟದ ಸಂದರ್ಭದಲ್ಲಿ ಪುರಸಭೆ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬುವುದು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಪುರಸಭೆ ಕಾರ್ಮಿಕ ಮೊಮ್ಮಯ್ಯ ಖಾನಾಪುರ ಪ್ರಮುಖ ಪಾತ್ರ ವಹಿಸಿದರು.

ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೊಮ್ಮಯ್ಯ ಅವರು ಸರ್ಕಾರಿ ಕಚೇರಿ, ಶಾಲಾ ಕಾಲೇಜು, ವಾರ್ಡ್‌ ಹಾಗೂ ಕೋವಿಡ್‍ ಪೀಡಿತರ ಮನೆ, ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಯಾನಿಟೈಸ್ ಕಾರ್ಯ ನೆರವೇರಿಸಿದರು. ಮನೆ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಸೀಲ್‍ಡೌನ್‍ ಮಾಡುವ ತಂಡದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದರು.

ಕೋವಿಡ್‌ ಆರೈಕೆ ಕೇಂದ್ರಗಳಲ್ಲಿದ್ದ ಸೋಂಕಿತರಿಗೆ ಊಟ, ಉಪಾಹಾರ, ಅಗತ್ಯ ವಸ್ತುಗಳ ಪೂರೈಸುವುದರ ಜೊತೆ ಒಳ ಆವರಣ, ಶೌಚಾಲಯ, ಸ್ನಾನಗೃಹಗಳ ಸ್ವಚ್ಛತೆಗೂ ಅವರು ಆದ್ಯತೆ ನೀಡಿದರು. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದರು. ಸೀಲ್‍ಡೌನ್‍ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದರು.

‘ಅಧಿಕಾರಿಗಳ ಆದೇಶ ಪಾಲನೆ ಸವಾಲಾಗಿತ್ತು. ಕೋವಿಡ್‍ ಕೇರ್‍ ಕೇಂದ್ರಗಳಲ್ಲಿ ಆಹಾರ ಪೂರೈಕೆ, ಸ್ವಚ್ಛತೆ, ತ್ಯಾಜ್ಯ ವಿಲೆವಾರಿ ವೇಳೆ ಆತಂಕ ಆಗುತಿತ್ತು. ಕೋವಿಡ್‌ನಿಂದ ಸಾವಿಗೀಡಾದವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡರೆ, ಈಗಲೂ ಮೈ ರೋಮಾಂಚನಗೊಳ್ಳುತ್ತದೆ’ ಎಂದು ಮೊಮ್ಮಾಯಿ ಖಾನಾಪುರಹೇಳುತ್ತಾರೆ.

ರೋಗಿಗಳಿಗೆ ಚಿಕಿತ್ಸೆ ನೀಡಿದ ಡಾ. ಸುಗೂರೇಶ ಹಿರೇಮಠ

ಲಿಂಗಸುಗೂರು:ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಿದ ಆರಂಭದ ದಿನಗಳಲ್ಲಿ ಗಂಟಲು ದ್ರವ ಸಂಗ್ರಹಿಸುವ, ಸೋಂಕುಪೀಡಿತರನ್ನು ಕೋವಿಡ್‍ ಆರೈಕೆ ಕೇಂದ್ರ, ಆಸ್ಪತ್ರೆಗೆ ದಾಖಲಿಸುವ ಮತ್ತು ಸಮಗ್ರ ವರದಿ ಸಿದ್ಧಪಡಿಸುವ ತಂಡಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರಲ್ಲಿ ಡಾ. ಸುಗೂರೇಶ ಹಿರೇಮಠ ಒಬ್ಬರು.

ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಕೂಲಿಕಾರರನ್ನು ಕ್ವಾರಂಟೈನ್‍ ಮಾಡುವುದು, ನಿರಂತರವಾಗಿ ಆರೋಗ್ಯ ತಪಾಸಣೆ ಮಾಡುವುದು ಸೇರಿದಂತೆ ಪಾಸಿಟಿವ್‍ ಪ್ರಕರಣಗಳ ಸಮಗ್ರ ಮಾಹಿತಿ ಕಲೆ ಹಾಕುವುದು ಸವಾಲು ಆಗಿತ್ತು. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರು.

ಕುಟುಂಬ ಸದಸ್ಯರ ವಿರೋಧದ ನಡುವೆಯೂ ಅವರು ಅಹೋರಾತ್ರಿ ಕಾರ್ಯ ನಿರ್ವಹಿಸಿದರು. ಕೋವಿಡ್‌ ಆರೈಕೆ ಕೇಂದ್ರದಲ್ಲಿ, ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಸೋಂಕು ಪೀಡಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದವರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದರು. ಆರೋಗ್ಯ ಇಲಾಖೆಯಲ್ಲಿ ಸಲ್ಲಿಸಿದ ಕಾರ್ಯವನ್ನು ಗುರುತಿಸಿ ತಾಲ್ಲೂಕು ಆಡಳಿತವು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

‘ಭಯದ ಮಧ್ಯೆಯೇ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಿದ್ದು ತೃಪ್ತಿ ತಂದಿದೆ. ಕೋವಿಡ್‍ ನಿಯಂತ್ರಣ ಸಮಿತಿಯ ಅಧಿಕಾರಿಗಳು ನನ್ನ ಸೇವೆಯನ್ನು ಶ್ಲಾಘಿಸಿದ್ದು ಖುಷಿ ತಂದಿದೆ’ ಎಂದು ಡಾ. ಸುಗೂರೇಶ ಹಿರೇಮಠ ತಿಳಿಸಿದರು.

ಜನರಲ್ಲಿ ಧೈರ್ಯ ತುಂಬಿದ ಮಕಬೂಲ್

ಜಾಲಹಳ್ಳಿ: ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸಿದ್ದ ಸಂದರ್ಭದಲ್ಲಿ ಸುರಕ್ಷಿತ ಕಿಟ್‌, ಸಮವಸ್ತ್ರ, ಕೈಗವಸು ಇಲ್ಲದೇ ತಮ್ಮ ಜೀವದ ಹಂಗು ತೊರೆದು ಸರ್ಕಾರಿ ಸಮುದಾಯ ಆಸ್ಪತ್ರೆ ಸಿ‌ಬ್ಬಂದಿ ಮಕಬೂಲ್ ‌ಸಾಬ್‌ ದೋಣಿ ಕಾರ್ಯನಿರ್ವಹಿಸಿದರು. ಸೋಂಕುಪೀಡಿತರಲ್ಲಿ ಧೈರ್ಯ ತುಂಬುವ, ಜೀವ ಉಳಿಸುವ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಕರೇಕಲ್‌ ಗ್ರಾಮದಇವರು 9 ತಿಂಗಳಿನಿಂದ ನಿರಂತವಾಗಿ ರಜೆ ಇಲ್ಲದೇ, ಜಾಲಹಳ್ಳಿ ಆಸ್ಪತ್ರೆ ವ್ಯಾಪ್ತಿಯ ಹಳ್ಳಿಗಳಲ್ಲಿ ಬಡ ರೋಗಿಗಳಿಗೆ ತಪಾಸಣೆ ಮಾಡುವ, ಚಿಕಿತ್ಸೆ ನೀಡುವ ವಿಷಯದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಮಗಳಿಗೆ ಮರಳಿದ ಕೂಲಿಕಾರ್ಮಿಕರ ಮನೆಗಳಿಗೆ ಬೇಟಿ ನೀಡಿ, ಸೋಂಕು ಹರಡುವಿಕೆ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

‘ಆಸ್ಪತ್ರೆಯಲ್ಲಿ 1800ಕ್ಕೂ ಹೆಚ್ಚು ಜನರನ್ನು ಕೊರೊನಾ ಸೋಂಕು ಪರೀಕ್ಷೆ ಮಾಡಿದಾಗ, 203 ಮಂದಿಗೆ ಸೋಂಕು ದೃಢಪಟ್ಟಿತ್ತು. ಅವರನ್ನು 14 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ನೋಡಿಕೊಂಡೆ. ಕೋವಿಡ್‌ನಿಂದ ಮೃತಪಟ್ಟ ಮೂವರ ಅಂತ್ಯಕ್ರಿಯೆ ಮಾಡುವಲ್ಲಿಯೂ ನೆರವಾದೆ.‌ ಜಾಲಹಳ್ಳಿ, ಆಲ್ಕೋಡ್‌, ದೇವದುರ್ಗ, ಗಬ್ಬೂರು ಗ್ರಾಮಗಳಲ್ಲಿನ ಕ್ವಾರಂಟೈನ್‌ ಕೇಂದ್ರಗಳಲ್ಲಿ ಗಂಟಲು ದ್ರವ ಸಂಗ್ರಹಿಸಿದೆ’ ಎಂದು ಮಕಬೂಲ್‌ ಸಾಬ್ ತಿಳಿಸಿದರು.

ಕ್ಯಾಂಪ್‌ ನಿವಾಸಿಗಳ ಆಶಾಕಿರಣ ಪ್ರೆಸೇನ್

ಸಿಂಧನೂರು: ಕೊರೊನಾ ವಾರಿಯರ್‌‌ ರೂಪದಲ್ಲಿ ಪುನರ್ವಸತಿ ಕ್ಯಾಂಪ್‌ 4ರ ನಿವಾಸಿ, ಜನಕಲ್ಯಾಣ ಸ್ವಯಂಸೇವಾ ಸಂಸ್ಥೆಯ ಸ್ಥಾಪಕ ಪ್ರೆಸೇನ್ ರಫ್ತಾನ್ ಜನರಿಗೆ ನೆರವಾದರು.

ಐದು ಪುನರ್ವಸತಿ ಕ್ಯಾಂಪ್‌ಗಳಲ್ಲಿನ ಮನೆಮನೆಗಳಿಗೆ ಭೇಟಿ ನೀಡಿದರು. ಕೊರೊನಾ ಬಾರದಂತೆ ತಡೆಯಲು ಯಾವುದೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿ ಹೇಳಿದರು. ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಗೆ ಸಹಕಾರ ನೀಡಿದರು. ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.

ಬೆಂಗಳೂರು ಸೇರಿದಂತೆ ಇತರೆ ರಾಜ್ಯ ಮತ್ತು ದೇಶಗಳಿಂದ ಜನರು ಕ್ಯಾಂಪ್‍ಗಳಿಗೆ ಬಾರದಂತೆ ನಿಗಾ ವಹಿಸಿದರು. ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿದರು. ಜನಕಲ್ಯಾಣ ಸ್ವಯಂಸೇವಾ ಸಂಸ್ಥೆಯ ಮುಖಾಂತರ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು. ವಿವಿಧ ಸಂಘಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡಿದರು. ಲಾಕ್‌ಡೌನ್ ತೆರವಾದ ಬಳಿಕವೂ ಸಹಾಯ ಮಾಡಿದರು.

‘ಪ್ರೆಸೇನ್ ರಫ್ತಾನ್‌ ಅವರು ನಮ್ಮ ಪಾಲಿಗೆ ದೇವರ ಸಮ. ಆರ್ಥಿಕ ಸಮಸ್ಯೆ ನೀಗಿಸುವಲ್ಲಿ ನೆರವಾದರು. ಆಹಾರದ ಕಿಟ್‌ ಪೂರೈಸಿದರು. ಅವರ ನೆರವನ್ನು ಎಂದಿಗೂ ಮರೆಯಲಾಗದು’ ಎನ್ನುತ್ತಾರೆ ಕ್ಯಾಂಪ್‌ನ ನಿವಾಸಿ ಬಿಪಿನ್ ಮಂಡಲ್.

‘ಜನರು ಸಂಕಷ್ಟದಲ್ಲಿ ನರಳುವುದು ನೋಡಲು ಆಗಲಿಲ್ಲ. ಜನರಿಗೆ ಅಗತ್ಯವಿರುವುದನ್ನು ವಿತರಿಸಲು ದಾನಿಗಳು ಸಹ ಜೊತೆಗೂಡಿದರು’ ಎನ್ನುವುದು ಪ್ರೆಸೇನ್ ಅವರ ಹೇಳಿಕೆ.

* ವರದಿ: ಬಿ.ಎ.ನಂದಿಕೋಲಮಠ, ಅಲಿಬಾಬಾ ಪಟೇಲ, ಡಿ.ಎಚ್. ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT