ಶನಿವಾರ, ಜೂಲೈ 11, 2020
26 °C

ರಾಯಚೂರು: ದರ ಕುಸಿತಕ್ಕೆ ಬೇಸತ್ತು ಬದನೆಕಾಯಿ ಗಿಡ ಕಿತ್ತುಹಾಕಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಯಚೂರು: ಮಾರುಕಟ್ಟೆಯಲ್ಲಿ ಬದನೆಕಾಯಿಗೆ ಬೇಡಿಕೆಯಿಲ್ಲದೆ ನಷ್ಟ ಅನುಭವಿಸಿರುವ ತಾಲ್ಲೂಕಿನ ಪಲಕಂದೊಡ್ಡಿ ಗ್ರಾಮದ ಯುವ ರೈತ ಬಸವರಾಜ ಅವರು ಎರಡು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನೆಲ್ಲ ಕಿತ್ತುಹಾಕಿದ್ದಾರೆ.

‘ಮಾರ್ಚ್‌ ಆರಂಭದಲ್ಲಿ 15 ಕೆಜಿ ಬದನೆಕಾಯಿ ಒಂದು ಚೀಲಕ್ಕೆ ₹150 ರವರೆಗೂ ದರ ಸಿಕ್ಕಿತ್ತು. ಈಗ ಒಂದು ಚೀಲಕ್ಕೆ ₹20 ರಿಂದ ₹30ಕ್ಕೆ ಕೇಳುತ್ತಿದ್ದಾರೆ. ರಾಯಚೂರು ತರಕಾರಿ ಮಾರುಕಟ್ಟೆಗೆ ಕಳುಹಿಸಿದ್ದ ಬದನೆಕಾಯಿ ಚೀಲಗಳು ಅಲ್ಲಿಯೇ ಉಳಿದಿವೆ. ಬದನೆಕಾಯಿ ಚೀಲದ ದರ ₹20 ಇದೆ. ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಕ್ಕೆ ₹10 ಖರ್ಚಾಗುತ್ತದೆ. ಈ ಪರಿಸ್ಥಿತಿಯಿಂದ ಬೇಸತ್ತು ಗಿಡ ಕಿತ್ತುಹಾಕುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ನೋವು ಹಂಚಿಕೊಂಡರು.

‘ವಾರಕ್ಕೆ ಎರಡು ಸಲ ಔಷಧಿ ಸಿಂಪರಣೆ ಮಾಡದಿದ್ದರೆ ಬದನೆಕಾಯಿ ಗಿಡದಲ್ಲೇ ಹಾಳಾಗುತ್ತದೆ. ಮೂರುವರೆ ಎಕರೆ ಬದನೆಕಾಯಿ ಬೆಳೆಯುವುದಕ್ಕೆ ಮೂರುವರೆ ಲಕ್ಷ ಖರ್ಚಾಗಿದೆ. ಒಂದೂವರೆ ಎಕರೆ ಬದನೆಕಾಯಿ ಗಿಡಗಳು ಇನ್ನೂ ಕೊಯ್ಲಿಗೆ ಬಂದಿಲ್ಲ. ಮುಂದಾದರೂ ದರ ಸಿಗಬಹುದು ಎಂದು ಅಷ್ಟು ಉಳಿಸಿಕೊಂಡಿದ್ದೇನೆ. ಕೊರೊನಾ ವೈರಸ್‌ನಿಂದಾಗಿ ಈ ಸಲ ನಷ್ಟ ಅನುಭವಿಸುವಂತಾಯಿತು’ ಎಂದರು.

ಬೇಸಿಗೆಯಲ್ಲಿ ಸಭೆ, ಸಮಾರಂಭಗಳು ಹಾಗೂ ಮದುವೆಗಳು ನಡೆಯುವುದರಿಂದ ಬದನೆಕಾಯಿಗೆ ಒಳ್ಳೆಯ ದರ ಸಿಗುತ್ತದೆ ಎನ್ನುವ ರೈತನ ನಿರೀಕ್ಷೆ ಹುಸಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು