ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 1.50 ಟನ್ ಭಾರದ ಕಲ್ಲು ಎಳೆದ 15 ಜೋಡಿ ಎತ್ತುಗಳು

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ
Published 3 ಜೂನ್ 2023, 13:43 IST
Last Updated 3 ಜೂನ್ 2023, 13:43 IST
ಅಕ್ಷರ ಗಾತ್ರ

ರಾಯಚೂರು: ಕಾಪು ಸಮಾಜ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಶನಿವಾರ ಚಾಲನೆ ದೊರೆಯಿತು. 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲೇ ಭಾರದ ಕಲ್ಲು ಎಳೆಯುವ ಸ್ಪರ್ಧೆ ಮೈನವಿರೇಳಿಸಿತು.

ಸುಡು ಬಿಸಿಲನ್ನು ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಕೇಕೆ. ಸಿಳ್ಳೆ ಹಾಕಿ ಎತ್ತುಗಳ ಬಲ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದರು. ಆನೆ ಮರಿ ಗಾತ್ರದ ದೇಸಿ, ಜರ್ಸಿ ಸೇರಿದಂತೆ ವಿವಿಧ ತಳಿಯ ದೊಡ್ಡ ಎತ್ತುಗಳು ಪ್ರೇಕ್ಷಕರ ಕಣ್ಮನ ಸೆಳೆದವು.

ರಾಜೇಂದ್ರ ಗಂಜ್‌ನಲ್ಲಿ ಮೊದಲ ದಿನ ಕರ್ನಾಟಕದ ಎತ್ತುಗಳಿಗೆ ಮಾತ್ರ ಅವಕಾಶವಿದ್ದು 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ 17 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, 15 ಜೋಡಿ ಎತ್ತುಗಳು ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಎಪಿಎಂಸಿ ಆವರಣದಲ್ಲಿ ಹಾಕಿರುವ ದೊಡ್ಡ ಛಾವಣಿ ಕೆಳಗೆ ಎತ್ತುಗಳಿಗೆ ಆಶ್ರಯ ನೀಡಲಾಗಿತ್ತು. ಎತ್ತುಗಳ ಮಾಲೀಕರು ಮರದ ಗಾತ್ರದ ನೊಗಕ್ಕೆ ಪೂಜೆ ಸಲ್ಲಿಸಿ ಸ್ಪರ್ಧಾ ಸ್ಥಳಕ್ಕೆ ತಂದರು. ಎತ್ತುಗಳಿಗೆ ಎರಡೂ ಬದಿಗೆ ಕಟ್ಟಿದ್ದ ಮೂಗುದಾರವನ್ನು ಹಿಡಿದು ಸ್ಪರ್ಧಾ ಕಣಕ್ಕೆ ತಂದರು.

ನಂತರ ಎತ್ತುಗಳ ಹೆಗಲ ಮೇಲೆ ಬೃಹದಾಕಾರದ ನೊಗವನ್ನಿಟ್ಟು ಭಾರದ ಕಲ್ಲಕ್ಕೆ ಕಟ್ಟಿದ್ದ ಸರಪಳಿಗೆ ಜೋಡಿಸಿ ಎತ್ತುಗಳ ಹಿಂದೆ ಬಾರಕೋಲಿನಿಂದ ಬಲವಾಗಿ ಬೀಸಿದರು. ಬಾರಕೋಲಿನ ಶಬ್ದಕ್ಕೆ ಎತ್ತುಗಳು ಹೆದರಿ ಜೋರಾಗಿ ಓಡಿದವು. ಸಾಮಾನ್ಯವಾಗಿ ಬೇರೆ ಜಿಲ್ಲೆಗಳಲ್ಲಿ 7 ನಿಮಿಷದ ಸ್ಪರ್ಧೆ ಇರುತ್ತದೆ. ಆದರೆ, ರಾಯಚೂರಿನಲ್ಲಿ ಒಟ್ಟು 20 ನಿಮಿಷದ ಸ್ಪರ್ಧೆ ಆಯೋಜಿಸಲಾಗಿತ್ತು.

ಬಿಸಿಲಿಗೆ ಎತ್ತುಗಳು ಬೇಗ ಬೆವತು ಆಯಾಸಗೊಳ್ಳುತ್ತಿದ್ದರಿಂದ ಎತ್ತುಗಳ ಮಾಲೀಕರು ಅವುಗಳ ಮೈಮೇಲೆ ಕೊಡಗಳಲ್ಲಿ ನೀರು ತಂದು ಸುರಿದರು. ಕೆಲವರು ಬಾಟಲಿಗಳ ಮೂಲಕ ಎತ್ತುಗಳಿಗೆ ನೀರು ಕುಡಿಸಿದರು. ಎತ್ತುಗಳ ಹಿಡಿದುಕೊಂಡಿದ್ದ ರೈತರು ಎತ್ತುಗಳನ್ನು ಎಳೆದುಕೊಂಡು ಮುಂದೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಭಾರದ ಕಲ್ಲನ್ನು ಎಳೆಯುವ ಮೂಲಕ ಗಜ ಗಾತ್ರದ ಎತ್ತುಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಎತ್ತುಗಳ ಅಂಕಣ ಬಿಟ್ಟು ಹೊರ ಹೋಗದಂತೆ ಎರಡೂ ಬದಿಗೆ ಬೊಂಬುಗಳನ್ನು ಬ್ಯಾರಿಕೇಡ್‌ನಂತೆ ಕಟ್ಟಲಾಗಿತ್ತು. ಚಿಕ್ಕಮಕ್ಕಳು ಅದರ ಮೇಲೆಯೇ ಕುಳಿತು ಸ್ಪರ್ಧೆಯನ್ನು ವೀಕ್ಷಿಸಿದರು. ಕೆಲವರು ಸುರಕ್ಷತೆಯ ದೃಷ್ಟಿಯಿಂದ ಕಟ್ಟಡಗಳ ಮಾಳಿಗೆಗಳ ಮೇಲೆ ಕುಳಿತು ದೃಶ್ಯವನ್ನು ವೀಕ್ಷಿಸಿದರು.

ಎತ್ತುಗಳಿಗೆ ಪೂಜೆ:

ಇದೇ ವೇಳೆ ನಗರ ಶಾಸಕ ಡಾ.ಶಿವರಾಜ ಪಾಟೀಲ ಎತ್ತುಗಳಿಗೆ ಪೂಜೆ ಮಾಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, 23 ವರ್ಷಗಳಿಂದ ಮುನ್ನೂರುಕಾಪು ಸಮಾಜದ ವತಿಯಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಡೆಯುತ್ತಿರುವುದು ಶ್ಲಾಘನೀಯ. ಇಲ್ಲಿ ಕಲೆಯನ್ನು ಉಳಿಸುವ ಹಾಗೂ ರೈತರನ್ನು ಹುರುದುಂಬಿಸು ಕಾರ್ಯ ನಡೆಯುತ್ತಿದೆ ಎಂದು ಬಣ್ಣಿಸಿದರು.

‘ಮುಂಗಾರು ಹಬ್ಬ ರೈತರನ್ನು ಉತ್ಸಾಹ ಮೂಡಿಸುತ್ತಿದೆ. ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಎ ಪಾಪಾರೆಡ್ಡಿ ನೇತೃತ್ವದ ಕಾರ್ಯ ಶ್ಲಾಘನೀಯ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಮುನ್ನೂರು ಕಾಪು ಸಮಾಜ ರೈತರ ಉತ್ಸವ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದೆ’ ಎಂದರು.

ಕೃಷಿಕರ ಸಂಸ್ಕೃತಿ ಹಾಗೂ ಗ್ರಾಮೀಣ ಕಲೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಕಾಪು ಸಮಾಜದ ವತಿಯಿಂದ ಪ್ರತಿವರ್ಷ ₹ 10ಲಕ್ಷ ಖರ್ಚು ಮಾಡುತ್ತಿದೆ. ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯುತ್ತಿಲ್ಲ’ ಎಂದು ತಿಳಿಸಿದರು.

ಚಿಕ್ಕಸೂಗೂರು ಚೌಕಿಮಠದ ಸಿದ್ದಲಿಂಗ ಸ್ವಾಮೀಜಿ, ಮುನ್ನೂರುಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಜಿ.ವೆಂಕಟರೆಡ್ಡಿ, ಎನ್. ಶ್ರಿನಿವಾಸ ರೆಡ್ಡಿ, ಗಧಾರ್ ಬೆಟ್ಟಪ್ಪ, ಈರಣ್ಣ ಕರ್ಲಿ, ಸಾಹಿತಿ ಅಯ್ಯಪ್ಪಯ್ಯ ಹುಡಾ, ಶರಣಪ್ಪ ಗೋನಾಳ ಇದ್ದರು.

ವಿಜೇತ ಜೋಡಿ ಎತ್ತುಗಳಿಗೆ ಬಹುಮಾನ ವಿತರಣೆ

ರಾಯಚೂರು: ಮುಂಗಾರು ಹಬ್ಬದ ಮೊದಲ ದಿನ ಎತ್ತುಗಳಿಂದ ಒಂದೂವರೆ ಟನ್‌ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗದಿಂದ 15 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಗರಿಷ್ಠ 20 ನಿಮಿಷದಲ್ಲಿ ಎತ್ತುಗಳು ಭಾರ ಎಳೆಯುವ ದೂರನ್ನು ಆಧರಿಸಿ ಬಹುಮಾನ ನಿಗದಿಗೊಳಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತ ಜೋಡಿ ಎತ್ತುಗಳಿಗೆ ಹಬ್ಬದ ರೂವಾರಿ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ನಗದು ಬಹುಮಾನ ವಿತರಿಸಿದರು.

3,154 ಅಡಿ ದೂರದ ವರೆಗೆ ಭಾರ ಎಳೆದ ರಾಯಚೂರು ಜಿಲ್ಲೆಯ ಪಲಕಂದೊಡ್ಡಿ ಗ್ರಾಮದ ಖಾಜಾ ಹುಸೇನ್ ಅವರ ಜೋಡಿ ಎತ್ತುಗಳು ₹65 ಸಾವಿರ ನಗದು ಪ್ರಥಮ ಬಹುಮಾನ ಪಡೆದವು.
3,083 ಅಡಿ ಭಾರ ಎಳೆದ ದೇವದುರ್ಗ ತಾಲ್ಲೂಕಿನ ಮಾರಪಳ್ಳಿ ಗ್ರಾಮದ ರವಿಗೌಡ ಅವರ ಜೋಡಿ ಎತ್ತುಗಳಿಗೆ ದ್ವಿತೀಯ ಬಹುಮಾನವಾಗಿ ₹ 55 ಸಾವಿರ ನಗದು ಕೊಡಲಾಯಿತು.

2,449 ಅಡಿ ಭಾರ ಎಳೆದ ರಾಯಚೂರು ಜಿಲ್ಲೆಯ ದೇವದುರ್ಗ ಬುಮನಗುಂಡ್ಲ ಗ್ರಾಮದ ದೇವರಾಜ ನಾಯಕ ಅವರ ಜೋಡಿ ಎತ್ತುಗಳಿಗೆ ತೃತೀಯ ಬಹುಮಾನವಾಗಿ ₹ 45 ಸಾವಿರ ನಗದು ವಿತರಿಸಲಾಯಿತು. 2350, ಅಡಿ ಭಾರ ಎಳೆದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ರೂಡಗಿಯ ಬಸವೇಶ್ವರ ಅವರ ಜೋಡಿ ಎತ್ತುಗಳಿಗೆ ಚತುರ್ಥ ಬಹುಮಾನವಾಗಿ ₹ 35 ಸಾವಿರ ನಗದು ಕೊಡಲಾಯಿತು. 2,319 ಅಡಿ ಭಾರ ಎಳೆದ ರಾಯಚೂರಿನ ಸಾಥ್ ಮೈಲ್ ಕ್ರಾಸ್ ಜಂಬಣ್ಣ ಅವರ ಎತ್ತುಗಳಿಗೆ ಐದನೇ ಬಹುಮಾನವಾಗಿ ₹ 30 ಸಾವಿರ ನಗದು ವಿತರಿಸಲಾಯಿತು.

ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶನಿವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಎತ್ತುಗಳು ಭಾರದ ಕಲ್ಲು ಎಳೆಯುವಾಗ ನೊಗ ತುಂಡರಿಸಿತು
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶನಿವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಎತ್ತುಗಳು ಭಾರದ ಕಲ್ಲು ಎಳೆಯುವಾಗ ನೊಗ ತುಂಡರಿಸಿತು
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶನಿವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಎತ್ತುಗಳು ಭಾರದ ಕಲ್ಲು ಎಳೆಯುವಾಗ ತುಂಡರಿಸಿದ ನೊಗ ಹೊತ್ತುಕೊಂಡು ಸ್ಪರ್ಧೆಯಿಂದ ಹೊರ ನಡೆದ ರೈತರು
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶನಿವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಎತ್ತುಗಳು ಭಾರದ ಕಲ್ಲು ಎಳೆಯುವಾಗ ತುಂಡರಿಸಿದ ನೊಗ ಹೊತ್ತುಕೊಂಡು ಸ್ಪರ್ಧೆಯಿಂದ ಹೊರ ನಡೆದ ರೈತರು
ರಾಯಚೂರಿನ ರಾಜೇಂದ್ರ ಗಂಜ್‌ನಲ್ಲಿ ಮುನ್ನೂರು ಕಾಪು ಸಮಾಜ ವತಿಯಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶನಿವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಲು ಸೇರಿದ್ದ ಜನ
ರಾಯಚೂರಿನ ರಾಜೇಂದ್ರ ಗಂಜ್‌ನಲ್ಲಿ ಮುನ್ನೂರು ಕಾಪು ಸಮಾಜ ವತಿಯಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶನಿವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಲು ಸೇರಿದ್ದ ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT