ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶಬಾಬು ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

Last Updated 3 ಸೆಪ್ಟೆಂಬರ್ 2021, 16:13 IST
ಅಕ್ಷರ ಗಾತ್ರ

ರಾಯಚೂರು: ‘ಪತಿ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ’ ಎಂದು ನಿಗೂಢವಾಗಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕಾಶಬಾಬು ಪತ್ನಿ ಅಂಬಿಕಾ ಅವರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಪತಿ ಕಾಣೆಯಾದಾಗ ನನಗೆ ಬೆಂಬಲಿಸಿದ್ದ ಎಸಿ ಕಚೇರಿಯ ಅಧಿಕಾರಿಗಳು, ಪತಿ ಸಾವಿನ ವಿಷಯ ಗೊತ್ತಾಗ ಬಳಿಕ ನನ್ನ ಕೈಬಿಟ್ಟಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಈ ಮೊದಲು ನೋಟ್‌ ಬರೆದಿಟ್ಟು ಹೋಗಿದ್ದಾರೆ ಎಂದು ಹೇಳಿದ್ದರು. ಅದರಲ್ಲಿ ಏನಿದೆ ಎಂದು ಕೇಳಿದಾಗ, ಕಚೇರಿಯಲ್ಲಿ ಒತ್ತಡವಿದೆ ಎಂದು ಬರೆದಿದ್ದಾರೆ. ಅಂಥದ್ದೇನಿಲ್ಲ ಎಂದು ಎಸಿ ಅವರು ಹೇಳಿದ್ದರು. ನೋಟ್‌ನಲ್ಲಿ ಏನಿದೆ ಎಂಬುದನ್ನು ಹೇಳಿಲ್ಲ’ ಎಂದರು.

‘ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನನ್ನ ಪತಿ ಭ್ರಷ್ಟಾಚಾರ ಮಾಡುವುದಕ್ಕೆ ಸಾಧ್ಯವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅವರೇನು ತಪ್ಪು ಮಾಡಿರಲಿಲ್ಲ. ಈ ಕುರಿತು ಉನ್ನತಮಟ್ಟದ ತನಿಖೆ ಆಗಬೇಕು’ ಎಂದು ಹೇಳಿದರು.

‘ಪತಿಯು ತುಂಬಾ ಮುಗ್ಧರಾಗಿದ್ದರು. ಕಚೇರಿ ವಿಷಯವನ್ನು ಎಂದಿಗೂ ಮನೆಯಲ್ಲಿ ಹೇಳುತ್ತಿರಲಿಲ್ಲ. ಇಷ್ಟು ದೊಡ್ಡ ತಪ್ಪು ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕಚೇರಿಯ ವಿಷಯವನ್ನು ಕಚೇರಿಯವರಿಗೇ ಹೇಳಬೇಕು ಎಂದು ಪದೆಪದೇ ಹೇಳುತ್ತಿದ್ದರು’ ಎಂದು ತಿಳಿಸಿದರು.

‘ಪತಿ ವಿರುದ್ಧದ ಭ್ರಷ್ಟಾಚಾರ ಆರೋಪ ಮಾಡಿರುವುದು ಸುಳ್ಳಿರಬಹುದು. ಹಿರಿಯ ಅಧಿಕಾರಿಗಳು ಇಷ್ಟು ದಿನಗಳವರೆಗೆ ಏನು ಮಾಡುತ್ತಿದ್ದರು. ಇಷ್ಟೊಂದು ವರ್ಷಗಳಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿರುವ ಅಧಿಕಾರಿಗಳು, ಇದುವರೆಗೂ ಏಕೆ ಮೌನ ವಹಿಸಿದ್ದರು. ಸತ್ತಿರುವ ವ್ಯಕ್ತಿಯ ಹೆಸರಿಗೆ ಎಲ್ಲವನ್ನು ಕಟ್ಟಿಹಾಕಿದರೆ, ನನ್ನ ಮಕ್ಕಳ ಭವಿಷ್ಯದ ಗತಿಯೇನು’ ಎಂದು ಪ್ರಶ್ನಿಸಿದರು.

ಹಿನ್ನೆಲೆ: ಇಲ್ಲಿನ ಎಸಿ ಕಚೇರಿಯ ಎಫ್‌ಡಿಎ ಪ್ರಕಾಶಬಾಬು ಅವರು ಆಗಸ್ಟ್‌ 23 ರಂದು ನಾಪತ್ತೆಯಾಗಿದ್ದರು. ಆಗಸ್ಟ್‌ 31 ರಂದು ಬೆಂಗಳೂರಿನ ಖಾಸಗಿ ವಸತಿಗೃಹದಲ್ಲಿ ನೇಣುಬಿಗಿದ ಸ್ಥತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಕಚೇರಿಯಲ್ಲಿ ಪ್ರಕಾಶಬಾಬು ಅವರು ನಕಲಿ ಸಹಿ ಮಾಡಿಕೊಂಡು ಸಂಬಂಧಿಗಳ ಬ್ಯಾಂಕ್‌ ಖಾತೆಗೆ ₹1 ಕೋಟಿಗೂ ಅಧಿಕ ವರ್ಗಾವಣೆ ಮಾಡಿಕೊಂಡಿದ್ದು ಮೇಲ್ನೊಟಕ್ಕೆ ಕಂಡುಬಂದಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಸೆಪ್ಟೆಂಬರ್‌ 2 ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಅಲ್ಲದೆ, ವಿಶೇಷ ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕಾಶಬಾಬು ಸಂಬಂಧಿಗಳೆಲ್ಲರ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲಾಗಿದೆ.

ಎಸಿ ಕಚೇರಿಯ ಎಲ್ಲಾ ಖಾತೆಗಳ ಲೆಕ್ಕ ಪರಿಶೋಧಿಸಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಅವರು ಲೆಕ್ಕ ಪರಿಶೋಧಕರ ತಂಡವೊಂದನ್ನು ಗುರುವಾರ ರಚಿಸಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT