ಶನಿವಾರ, ಏಪ್ರಿಲ್ 1, 2023
29 °C
ಜಯಲಕ್ಷ್ಮೀ ಮಂಗಳಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ

ಜಯಲಕ್ಷ್ಮೀ ಮಂಗಳಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ- ಸಾಹಿತ್ಯದ ಸಾಧನೆಗೆ ಗೌರವ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹರಿದಾಸ ಸಾಹಿತ್ಯದಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿರುವ ರಾಯಚೂರಿನ ವಿದ್ವಾಂಸೆ ವಿಜಯಲಕ್ಣ್ಮೀ ಮಂಗಳಮೂರ್ತಿ ಅವರು ಕರ್ನಾಟಕ ಸರ್ಕಾರವು ನೀಡುವ 2020–21ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ರಾಯಚೂರಿನ ತಾರಾನಾಥ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೂ, ತಮ್ಮ 69ನೇ ವಯಸ್ಸಿನಲ್ಲಿಯೂ ಸಾಹಿತ್ಯ, ಸಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1952 ನವೆಂಬರ್‌ 1 ರಂದು
ಜನಿಸಿರುವ ಅವರು 70ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ದಿನದಂದೇ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ವಿಶೇಷ.

ಶ್ರೇಷ್ಠ ಪ್ರಾಧ್ಯಾಪಕಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದ ಅವರು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ 400 ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಸದ್ಯಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ದಾಸಸಾಹಿತ್ಯ ಪೀಠದ ಸದಸ್ಯೆ, ಭಾರತ ವಿಕಾಸ‌ ಪರಿಷತ್ ಸದಸ್ಯೆ, ರಾಯಚೂರಿನ ಶೃತಿ‌ಸಾಹಿತ್ಯ ಮೇಳದ ಗೌರವಾಧ್ಯಕ್ಷೆ, ದಾಸ ಸಾಹಿತ್ಯ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಜೊತೆಗೆ ಮಂತ್ರಾಲಯ ಹಾಗೂ ತಿರುಪತಿ ದಾಸ ಸಾಹಿತ್ಯ ಭಜನಾ ಮಂಡಳಿಗಳೊಂದಿಗೆ ಒಡನಾಟವಿದೆ. ರಾಯಚೂರು ಜಿಲ್ಲಾ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯೂ ಆಗಿದ್ದರು.

1996 ರಲ್ಲಿಯೇ 'ಗುಲಬರ್ಗಾ ವಿಭಾಗದ ಆಧುನಿಕ‌ ಹರಿದಾಸರು' ಎನ್ನುವ ಪ್ರಬಂಧ ಮಂಡಿಸಿ ಪಿಎಚ್‌.ಡಿ ಪಡೆದಿದ್ದಾರೆ.‘ರಾಯಚೂರು ಜಿಲ್ಲೆಯ ಹರಿದಾಸ ಸಾಹಿತ್ಯ' 'ಶ್ರೀ ಗೋಪಾಲದಾಸರು' ಕೃತಿಗಳು ಸೇರಿದಂತೆ ದಾಸ ಸಾಹಿತ್ಯದಲ್ಲಿ 14 ಕೃತಿಗಳನ್ನು ಬರೆದಿದ್ದಾರೆ. ಎಂಟು ಗ್ರಂಥಗಳನ್ನು ಸಂಪಾದಿಸಿದ್ದಾರೆ. ನರಸಿಂಹ ವಿಠಲ ಅಂಕಿತದೊಂದಿಗೆ 80 ಉಗಾಭೋಗಗಳು ಹಾಗೂ 40 ಸಂಕೀರ್ತನೆಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ರಾಜ್ಯ ಸರ್ಕಾರವು ಜಯಲಕ್ಷ್ಮೀ ಮಂಗಳಮೂರ್ತಿ ಅವರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿರುವುದಕ್ಕೆ ಅವರ ಸಂಬಂಧಿಕರು, ಶಿಷ್ಯರು, ಸಹೋದ್ಯೋಗಿಗಳು, ಸಾಹಿತ್ಯಾಭಿಮಾನಿಗಳು ಹಾಗೂ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು