ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ಲಾಕ್‌ಡೌನ್: ಅಗತ್ಯಕ್ಕಾಗಿ ಜನಸಂಚಾರ

ಮಾಸ್ಕ್ ಹಾಕಿಕೊಳ್ಳದವರಿಂದ ದಂಡ ವಸೂಲಿ
Last Updated 16 ಜುಲೈ 2020, 17:04 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರು ಮತ್ತು ರಾಯಚೂರಿನಲ್ಲಿ ಲಾಕ್‌ಡೌನ್ ಎರಡನೇ ದಿನ ಗುರುವಾರ ಅಗತ್ಯಕ್ಕಾಗಿ ಸಂಚರಿಸುವವರ ಸಂಖ್ಯೆ ಕೂಡಾ ಹೆಚ್ಚಳ ಇರುವುದು ಕಂಡುಬಂತು.

ವಿವಿಧ ಉದ್ಯೋಗಕ್ಕಾಗಿ ತೆರಳುವವರು, ಕೃಷಿ ಸಂಬಂಧಿತ ಕೆಲಸಕ್ಕಾಗಿ ಬಂದವರು, ಸರ್ಕಾರಿ ಕಚೇರಿಗಳಲ್ಲಿ ಕೆಲಸ, ಅಗತ್ಯ ಸರಕುಗಳ ಖರೀದಿಗಾಗಿ ಹೊರಬಂದವರು, ಸರಕು ಸಾಗಣೆ ಸಂಬಂಧಿತ ಕೆಲಸ ಮಾಡುವವರು, ಔಷಧಿ ಮಳಿಗೆಗಳು ಮತ್ತು ಆಸ್ಪತ್ರೆಗಳಿಗೆ ತೆರಳುವವರು.. ಹೀಗೆ ನಿರ್ಬಂಧ ಇಲ್ಲದ ಕೆಲಸಕ್ಕಾಗಿ ತೆರಳುವ ಜನರು ಮತ್ತು ವಾಹನಗಳ ಓಡಾಟ ಸಾಮಾನ್ಯವಾಗಿದೆ.

ಸಿಂಧನೂರು ನಗರದಲ್ಲಿ ಜನಸಂಚಾರ ಹೆಚ್ಚಾಗಿಲ್ಲ. ಆದರೆ, ರಾಯಚೂರು ನಗರದಲ್ಲಿ ಜನಸಂಚಾರ ಮತ್ತು ವಾಹನಗಳ ಸಂಚಾರ ಹೆಚ್ಚಿನ ಪ್ರಮಾಣದಲ್ಲಿದೆ. ಪೊಲೀಸರು ಅಲ್ಲಲ್ಲಿ ನಾಕಾಬಂದಿ ಏರ್ಪಡಿಸಿ ಜನರನ್ನು ವಿಚಾರಿಸಿ ಬಿಡುತ್ತಿದ್ದಾರೆ. ಅನಗತ್ಯ ಸಂಚರಿಸುವವರಿಗೆ ಮತ್ತು ಮಾಸ್ಕ್ ಧರಿಸದೆ ಮನೆಗಳಿಂದ ಹೊರಬಂದವರಿಗೆ ದಂಡ ವಿಧಿಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುವ ಕಾರುಗಳು ಮತ್ತು ಬೈಕ್‌ಗಳನ್ನು ಜಪ್ತಿ ಮಾಡುವ ಕೆಲಸ ಮುಂದುವರಿಸಿದ್ದಾರೆ. ಆದರೂ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇಲ್ಲ. ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಇರುವುದು ಇದಕ್ಕೆ ಕಾರಣ. ಮಧ್ಯಾಹ್ನ ೨ ರವರೆಗೂ ಮಾತ್ರ ಅಗತ್ಯ ಸರಕುಗಳ ಮಾರಾಟದ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನದ ಬಳಿಕ, ಮನೆಗಳಿಗೆ ವಿವಿಧ ಸರಕುಗಳನ್ನು ತಲುಪಿಸುವ ವಾಹನಗಳ ಭರಾಟೆ ಎದ್ದು ಕಾಣುತ್ತದೆ.

ಲಾಕ್‌ಡೌನ್ ಇರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಮನೆಗಳಿಂದ ಹೊರಬರುತ್ತಿಲ್ಲ. ಬೆಳಿಗ್ಗೆ ಮಾತ್ರ ಆಯಾ ಬಡಾವಣೆಯ ಕಿರಾಣಿ ಅಂಗಡಿಗಳು ಮತ್ತು ತರಕಾರಿ ಅಂಗಡಿಗಳ ಎದುರು ಮಾತ್ರ ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಮುಖ್ಯರಸ್ತೆಗಳಲ್ಲಿ ಮಾತ್ರ ನಾಕಾಬಂದಿ ಮಾಡಿದ್ದು, ಬಡಾವಣೆಯ ಒಳರಸ್ತೆಗಳಲ್ಲಿ ಯುವಕರು ಗುಂಪು ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.
ಕೋವಿಡ್ ಆತಂಕವಿಲ್ಲ: ಕೋವಿಡ್ ಸೋಂಕು ತಗುಲುತ್ತದೆ ಎಂದು ಆರಂಭದಲ್ಲಿ ಜನರಲ್ಲಿದ್ದ ಆತಂಕ ಈಗ ಉಳಿದಿಲ್ಲ. ಸೋಂಕು ಬಾರದಂತೆ ಅಥವಾ ಬಂದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಆಗದಂತೆ ಏನು ಮಾಡಬೇಕು ಎನ್ನುವ ಬಗ್ಗೆ ಬಹುತೇಕ ಜನರು ವಿಧವಿಧವಾದ ಪರಿಹಾರಗಳನ್ನು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹರಿದು ಬರುವ ವಿಡಿಯೋ, ಆಡಿಯೋ ತುಣುಕುಗಳು ಜನರಲ್ಲಿ ಧೈರ್ಯ ಮೂಡಿಸುತ್ತಿವೆ.

ಲಾಠಿ ಏಟು: ನಗರದ ಪಟೇಲ್ ವೃತ್ತದಲ್ಲಿ ಜನರು ವಿವಿಧ ಮಳಿಗೆಗಳ ಎದುರು ಮುಗಿಬಿದ್ದಿದ್ದರು. ರಸ್ತೆಯಲ್ಲಿ ವಾಹನಗಳ ದಟ್ಟಣೆ ಏರ್ಪಟ್ಟಿತ್ತು. ಪೊಲೀಸರು ಧ್ವನಿವರ್ಧಕದ ಮೂಲಕ ಸೂಚನೆ ನೀಡಿದರೂ ಪರಿಣಾಮ ಬೀರಲಿಲ್ಲ. ಗುಂಪು ಚದುರಿಸುವುದಕ್ಕಾಗಿ ಲಘು ಲಾಠಿ ಪ್ರಹಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT