ಸಿಂಧನೂರು: ಅಕ್ಟೋಬರ್‌ನಲ್ಲಿ 9 ದಿನಗಳವರೆಗೆ ನಡೆಯುವ ಸಿಂಧನೂರು ದಸರಾ ಮಹೋತ್ಸವಕ್ಕೆ ತಾ.ಪಂ ಅನುದಾನ ಬಳಕೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಸ್ಥಳೀಯ ತಾ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಅವರು, ‘ಸಿಂಧನೂರಿನಲ್ಲಿ ಮೈಸೂರು ಮಾದರಿಯಲ್ಲಿ ದಸರಾ ಉತ್ಸವಕ್ಕೆ ನಿರ್ಧರಿಸಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ತಾ.ಪಂ ಸ್ವಂತ ನಿಧಿಯಿಂದ ₹ 25 ಲಕ್ಷ ನೀಡಲು ಈಗಾಗಲೇ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಅವರೊಂದಿಗೆ ಚರ್ಚಿಸಲಾಗಿದೆ. ಅನುಮೋದನೆ ಪಡೆದು ಅನುದಾನ ನೀಡಬೇಕು ಎಂದು ಇಒ ಚಂದ್ರಶೇಖರ ಅವರಿಗೆ ಸೂಚನೆ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು, ‘ಸರ್ಕಾರದ ಹಣ ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸರಬರಾಜು ಆಗುವ ಆಹಾರ ಪದಾರ್ಥಗಳು ಕಳಪೆಯಾಗಿದ್ದು, ಪರಿಶೀಲನೆ ಮಾಡಬೇಕು ಎಂದು ಸೂಚಿಸಲಾಗಿತ್ತು. ಆದರೂ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ’ ಎಂದು ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು, ಸಿಡಿಪಿಒ ಅಶೋಕ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
‘ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆಯಾದ ನಂತರ ಸರಬರಾಜು ಮಾಡಲಾಗುತ್ತಿದೆ’ ಎಂದು ಸಿಡಿಪಿಒ ಸಭೆಯ ಗಮನಕ್ಕೆ ತಂದರು. ಇದಕ್ಕೆ ತೃಪ್ತರಾಗದ ಮಸ್ಕಿ ಶಾಸಕ ಆರ್.ಬಸನಗೌಡ ಅವರು, ‘ನಾನೇ ಖುದ್ದಾಗಿ ದೂರು ನೀಡಿದರೂ ನೀವು ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷೆಗೆ ಒಳಪಡಿಸಿದ ಆಹಾರ ಪದಾರ್ಥಗಳಿಗೂ, ಸರಬರಾಜು ಆಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ವ್ಯತ್ಯಾಸಗಳಿವೆ. ಕೂಡಲೇ ಪರೀಕ್ಷೆ ಮಾಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕಿನ ಮಕ್ಕಳಿಗೆ ಒಂದು ವರ್ಷದಿಂದ ಹಾಲಿನ ಪೌಡರ್ ವಿತರಣೆ ಆಗಿಲ್ಲ. ಆರೂ ಏನೂ ಕ್ರಮಕೈಗೊಂಡಿಲ್ಲ ಎಂದು ಸಿಂಧನೂರು ಸಿಡಿಪಿಒ ಲಿಂಗನಗೌಡ ವಿರುದ್ಧ ಬಸನಗೌಡ ಹಾರಿಹಾಯ್ದರು.
‘ಒಂದು ವರ್ಷದಿಂದ ಹಾಲಿನ ಪೌಡರ್ ಸರಬರಾಜು ಆಗದಿರುವ ಬಗ್ಗೆ ಶಾಸಕರಿಗೆ ಏಕೆ ಮಾಹಿತಿ ನೀಡಿಲ್ಲ. ಪತ್ರಿಕೆಯಲ್ಲಿ ವರದಿಯಾದ ತಕ್ಷಣ ಕೆಎಂಎಫ್ ಸರಬರಾಜು ಮಾಡಿದೆ ಎನ್ನುವ ನಿಮ್ಮ ಹೇಳಿಕೆ ಆಕ್ಷೇಪಾರ್ಹವಾಗಿದೆ. ನೀವೇನಾದರೂ ಶಾಸಕರಿಗಾಗಲಿ, ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಲಿ ಲಿಖಿತವಾಗಿ ಮಾಹಿತಿ ನೀಡಿದ್ದರೆ ಪ್ರತಿ ಕೊಡಿ’ ಎಂದು ತರಾಟೆ ತೆಗೆದುಕೊಂಡರು.
ತಾ.ಪಂ ಜಾಗ ಸ್ತ್ರೀಶಕ್ತಿ ಒಕ್ಕೂಟಕ್ಕೆ ನೀಡಿದ ಬಗ್ಗೆ ತಾ.ಪಂ ಸಭೆಯಲ್ಲಿ ನಿರ್ಣಯ ಕೈಗೊಂಡ ಪ್ರತಿ ಇದ್ದರೆ ನೀಡಿ ಎಂದು ಬಸನಗೌಡ ಬಾದರ್ಲಿ ಕೇಳಿದರು. ಇದಕ್ಕೆ ಉತ್ತರ ನೀಡಲು ಇಒ ಚಂದ್ರಶೇಖರ ತಡಬಡಾಯಿಸಿದರು.
ತಾ.ಪಂ.ನಿಂದ ನಿರ್ಮಿಸಲಾದ ಭವನದ ಬಾಡಿಗೆ ಎಲ್ಲಿಗೆ ಹೋಗುತ್ತದೆ. ಬಸ್ ನಿಲ್ದಾಣದ ಮುಂದಿನ ಸ್ಥಳವಾಗಿದ್ದರಿಂದ ಹೆಚ್ಚು ಮೌಲ್ಯವಿದೆ. ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ, ಹೆಚ್ಚಿನ ಆದಾಯ ಬರುತ್ತದೆ. ಈಗ ಬಂದಿರುವ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಅಕ್ಕ ಟಿ–ಕೆಫೆ ನಿರ್ಮಾಣಕ್ಕೆ ಒಕ್ಕೂಟದ ಮುಂದಿನ ಸ್ಥಳ ನೀಡಬಾರದು ಎಂದು ತಾಕೀತು ಮಾಡಿದರು.
‘ಪಿಡಿಒಗಳು ಕೇಂದ್ರಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳುತ್ತಿವೆ. ಎಲ್ಲ ಪಿಡಿಓಗಳು ಕೇಂದ್ರಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಪ್ರತಿ ಗ್ರಾಮದಲ್ಲೂ ಫಾಗಿಂಗ್ ಮಾಡಿ, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿ.ಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ಸೂಚಿಸಿದರು.
ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ವಿವಿಧ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಮಧ್ಯಾಹ್ನ 3.15 ನಿಮಿಷ ಕಳೆದರೂ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ತಾ.ಪಂ. ಇಒ ಚಂದ್ರಶೇಖರಗೆ ಸೂಚಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಹಾಜರಿದ್ದರು.
ಅನುಮೋದನೆ ಪಡೆದು ₹25 ಲಕ್ಷ ಕೊಡಿ ಕಳಪೆ ಆಹಾರ ಪದಾರ್ಥಗಳ ಪೂರೈಕೆ: ಆರೋಪ ಸ್ತ್ರೀಶಕ್ತಿ ಭವನದ ಬಾಡಿಗೆ ಎಲ್ಲಿದೆ?: ಬಸನಗೌಡ ಪ್ರಶ್ನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.