ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ರೈತರಿಗೆ ನಷ್ಟ ಪರಿಹಾರ ಕೊಡಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಪ್ರತಿಭಟನೆ
Last Updated 17 ಜೂನ್ 2021, 15:09 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್ ಲಾಕ್‌ಡೌನ್‌ನಿಂದಾಗಿ ರೈತರ ಬೆಳೆ ನಷ್ಟದ ಬಗ್ಗೆ ವರದಿ ತಯಾರಿಸಲು ಸಮಿತಿ ರಚಿಸಬೇಕು. ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಮೃತ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕೋವಿಡ್‌ನಿಂದ ರಾಜ್ಯದಲ್ಲಿ ಅನೇಕ ಸಾವುನೋವು ಸಂಭವಿಸಿದ್ದು, ಅನೇಕರು ಸಮಸ್ಯೆಗೆ ಸಿಲುಕಿದ್ದಾರೆ. ಚಾಮರಾಜನಗರದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ನೀಡಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರವೇ ಜವಾಬ್ದಾರಿ ವಹಿಸಿಕೊಳ್ಳಬೇಕು. ಘಟನೆಗೆ ಕಾರಣರಾದ ಎಲ್ಲರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ ಎಲ್ಲಾ ಕೊರೊನಾ ಸೋಂಕಿತರಿಗೆ ತಲಾ ₹5 ಲಕ್ಷ ಪರಿಹಾರ ನೀಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಟೆಸ್ಟ್ ಅನ್ನು ವ್ಯಾಪಕಗೊಳಿಸಬೇಕು. ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಇಳಿಸಬೇಕು.‌ ಕೃಷಿ ಪರಿಕರಗಳ ಮೇಲೆ ವಿಧಿಸುವ ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್.ಟಿ ತೆರಿಗೆಯನ್ನು ಸಂಪೂರ್ಣ ಕೈಬಿಡಬೇಕು. ಉಚಿತವಾಗಿ ಬಿತ್ತನೆ ಬೀಜ ಪೂರೈಸಬೇಕು. ರಸಗೊಬ್ಬರ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು. ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂರ್ಯಕಾಂತಿ ಹಾಗೂ ಇನ್ನಿತರ ಬೀಜಗಳ ಸಿಗುತ್ತಿಲ್ಲ, ಮುಂಗಾರು ಪ್ರಾರಂಭವಾಗಿದ್ದು ಬೀಜ ಕೊರತೆಯನ್ನು ಶೀಘ್ರವೇ ಪೂರೈಸಬೇಕು ಎಂದು ಆಗ್ರಹಿಸಿದರು.

ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಕೃಷಿ ಚಟುವಟಿಕೆಗಳಿಗೂ ವಿಸ್ತರಿಸಬೇಕು. ರೈತ ಕುಟುಂಬದ ಇಬ್ಬರನ್ನು ಈ ವ್ಯಾಪ್ತಿಯೊಳಗೆ ಸೇರಿಸಬೇಕು. ರೈತ ಕುಟುಂಬಗಳಿಗೆ ಕನಿಷ್ಟ ₹10 ಸಾವಿರದ ಪ್ಯಾಕೇಜ್ ಘೋಷಿಸಬೇಕು. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಪಡಿತರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಖರೀದಿ ಕೇಂದ್ರದ ಮೂಲಕ ರೈತರಿಂದ ಖರೀದಿಸಲಾದ ಜೋಳ, ತೊಗರಿ, ಕಡಲೆ, ಭತ್ತ ಮತ್ತು ರಾಗಿ ಬೆಳೆಗಳ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು.

ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ಪರಿಹಾರದ ಬಾಕಿ ಮತ್ತು ಬರ ಹಾಗೂ ಅತಿವೃಷ್ಟಿಯ ಪರಿಹಾರದ ಬಾಕಿಯನ್ನು ರೈತರ ಖಾತೆಗೆ ಜಮಾ ಮಾಡಬೇಕು. ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು. ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಡಾ.ಪ್ರಕಾಶ್ ಕಮ್ಮರಡಿ ರವರು ನೀಡಿರುವ ವರದಿ ಅನ್ವಯ ರಾಜ್ಯ ಸರ್ಕಾರದ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಬೇಕು.

ಮುಂಬರುವ ದಿನಗಳಲ್ಲಿ ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೇಲ್ಬಾಗದಲ್ಲಿರುವ ಅಕ್ರಮ ನೀರಾವರಿಯನ್ನು ತಡೆದು ಕೆಳಭಾಗದ ಮೈಲು ನಂ 104 ರಲ್ಲಿ ಸಮಗ್ರ ಗೇಜ್ ಕಾಯ್ದುಕೊಳ್ಳಬೇಕು. ಕೃಷಿ ಪಂಪಸೆಟ್‌ಗಳಿಗೆ ಪ್ರಸ್ತುತ 7 ತಾಸು ಪೂರೈಸುವ ವಿದ್ಯುತ್‌ನ್ನು 12 ತಾಸಿನವರೆಗೆ ನಿರಂತರವಾಗಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ ಬಲ್ಲಟಗಿ, ಅಬ್ದುಲ್ ಮಜೀದ್, ಮಲ್ಲಣ್ಣ ದಿನ್ನಿ, ಯಂಕಪ್ಪ ಖಾರಬಾರಿ, ಸೂಗುರಯ್ಯ ಆರ್.ಎಸ್.ಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT