ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಬಗೆಹರಿಯದ ಕುಡಿವ ನೀರಿನ ಸಮಸ್ಯೆ

ಮುಖ್ಯಾಧಿಕಾರಿ-–ಆಡಳಿತ ಮಂಡಳಿ ಮಧ್ಯೆ ವೈಮನಸ್ಸು, ನಾಗರಿಕರು ಅತಂತ್ರ
ಅಕ್ಷರ ಗಾತ್ರ

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್ಲ, ಲಿಂಗಸುಗೂರು, ಕಸಬಾ ಲಿಂಗಸುಗೂರಿನ 23 ವಾರ್ಡ್‍ಗಳ ಬಹುತೇಕ ಪ್ರದೇಶಗಳಿಗೆ ಸಮರ್ಪಕ ಶುದ್ಧ ಕುಡಿವ ನೀರು ಪೂರೈಕೆ ಸವಾಲಾಗಿ ಪರಿಣಮಿಸಿದೆ.

ಉಲ್ಬಣಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳವವರ ಮಧ್ಯೆ ಹೊಂದಾಣಿಕೆ ಇಲ್ಲದೆ ಹೋಗಿರುವುದು ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ.

2001-02ರಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಅಳವಡಿಸಿದ ಮೋಟರ್ ಪಂಪ್‍ಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ. 20 ವರ್ಷ ನಿರಂತರ ಕಾರ್ಯನಿರ್ವಹಿಸಿದ ಮೋಟರ್ ಪಂಪ್‍ಗಳ ಸಾಮರ್ಥ್ಯ ಕ್ಷೀಣಿಸಿದೆ. ಈ ಮೊದಲು 10 ಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ್‍ ಭರ್ತಿಗೆ ಕೇವಲ 8 ಗಂಟೆ ಸಾಕಾಗುತ್ತಿತ್ತು. ಈಗ ಅದೇ ಟ್ಯಾಂಕ್‍ ಭರ್ತಿ ಆಗಲು ಕನಿಷ್ಠ 14 ಗಂಟೆ ಸಮಯ ಹಿಡಿಯುತ್ತಿದೆ ಎನ್ನುವುದು ಕೆಲಸಗಾರರ
ಅಂಬೋಣ.

ವರ್ಷದಿಂದ ವರ್ಷಕ್ಕೆ ಹತ್ತಾರು ಬಡಾವಣೆಗಳು ಅಸ್ತಿತ್ವಕ್ಕೆ ಬರುತ್ತಿದ್ದು, 2001-02 ನಂತರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಹುತೇಕ ಬಡಾವಣೆಗಳಿಗೆ ಶುದ್ಧ, ಸಮರ್ಪಕ ಕುಡಿವ ನೀರು ಪೂರೈಸಲು ಸಾಧ್ಯವಾಗಿಲ್ಲ.

ಈ ಮೊದಲಿನ ಹಳೆ ಬಡಾವಣೆಗಳಲ್ಲಿ ನೀರು ನಿರ್ವಹಣೆ ಮಾಡಲು ಹೆಚ್ಚುವರಿಯಾಗಿ 20 ಕೊಳವೆಬಾವಿ, 90 ಕಿರು ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಿದ್ದರು ಕೂಡ ಕೊಡ ನೀರಿಗಾಗಿ ನಾಗರಿಕರು ಪರದಾಡುತ್ತಿರು
ವುದನ್ನು ತಪ್ಪಿಸಲಾಗುತ್ತಿಲ್ಲ.

ಈ ಮಧ್ಯೆ 2019-20ರಲ್ಲಿ ಹೊಸ ಮೋಟರ್ ಪಂಪ್‍ಗಳ ಖರೀದಿ ಮಾಡಿದ್ದು ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಅಧ್ಯಕ್ಷೆ ಗದ್ದೆಮ್ಮ ಯಮನಪ್ಪ ಭೋವಿ ಸೇರಿದಂತೆ ಆಡಳಿತ ಮಂಡಳಿ ಮಧ್ಯದ ವೈಮನಸ್ಸು ಕುಡಿವ ನೀರು ನಿರ್ವಹಣೆ, ಮೇಲುಸ್ತುವಾರಿ ಮೇಲೆ ದುಷ್ಪರಿಣಾಮ ಬೀರಿದೆ. ಮುಸುಕಿನ ಗುದ್ದಾಟದಿಂದ 2021-22ನೇ ಸಾಲಿನ ಬಜೆಟ್‍ ಮಂಡನೆ ಆಗದಿರುವುದು ಸಾಕ್ಷಿಯಾಗಿದೆ.

ಒಂದಡೆ ಬಜೆಟ್‍ ಮಂಡನೆ ಸಮಸ್ಯೆ ಎದುರಿಸುತ್ತಿದ್ದರೆ ಇನ್ನೊಂದಡೆ ಮುಖ್ಯಾಧಿಕಾರಿ, ಆಡಳಿತ ಮಂಡಳಿ ಪರಸ್ಪರ ಹೊಂದಾಣಿಕೆ ಇಲ್ಲದೆ ಹೋಗಿರುವುದು ನಿರ್ವಹಣ ಸಿಬ್ಬಂದಿಗೆ ಕಂಟಕವಾಗಿ ಪರಿಣಮಿಸಿದೆ. ಆಡಳಿತ ಮಂಡಳಿಯವರು ಕುಡಿವ ನೀರು ಸಂಬಂಧಿಸಿ ತುರ್ತು ಸಭೆ ಕರೆಯಲು ಹೇಳಿದರೆ ಮುಖ್ಯಾಧಿಕಾರಿ ಚುನಾವಣಾ ನೀತಿ ಸಂಹಿತೆ ನೆಪ ಮುಂದಿಟ್ಟು ಮೌನಕ್ಕೆ ಜಾರಿದ್ದಾರೆ. ಮೂರು ದಿನಕ್ಕೊಮ್ಮೆ ಬಿಡುತ್ತಿದ್ದ ನೀರು ಈಗ ಆರೇಳು ದಿನಕ್ಕೊಮ್ಮೆ ಬಿಡಲಾಗುತ್ತಿದೆ.

ಕೆರೆ ಭರ್ತಿಯಾಗಿದೆ, ಇರುವ ಮೋಟರ್ ಪಂಪ್‍ಗಳ ಸಾಮರ್ಥ್ಯ ಹೆಚ್ಚಿಸಿ ಬೇಸಿಗೆ ದಿನಗಳಲ್ಲಿ ನಾಗರಿಕರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲು ಸದಸ್ಯರೊಂದಿಗೆ ಹಲವು ಬಾರಿ ಚರ್ಚಿಸಿದರು ಮುಖ್ಯಾಧಿಕಾರಿ ಸ್ಪಂದಿಸುತ್ತಿಲ್ಲ. ಬಜೆಟ್‍ ಮಂಡನೆ ಆಗಿಲ್ಲ, ಪುರಸಭೆ ಬಹುತೇಕ ಕೆಲಸ ಕಾರ್ಯಗಳ ಅನುಷ್ಠಾನಕ್ಕೆ ಮುಖ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ’ ಎಂದು ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ‘ಶಾಶ್ವತ ಕುಡಿವ ನೀರಿನ ಯೋಜನೆಯ ಮೀಟರ್‍ಪಂಪ್‍ಗಳ ಸಾಮರ್ಥ್ಯ ಕ್ಷೀಣಿಸಿವೆ. ಹೊಸ ಮೋಟರ್‍ ಪಂಪ್‍ಗಳ ಖರೀದಿಗೆ ಈಗಾಗಲೆ ₹2.29ಕೋಟಿ ಹಣದ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಈಗಿರುವ ಹಳೆಯ ಬಡಾವಣೆಗಳ ಪೈಪಲೈನ್‍ ಕೊನೆಭಾಗದ ನಾಗರಿಕರಿಗೆ ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ. ಆಡಳಿತ ಮಂಡಳಿ ಜೊತೆ ಚರ್ಚಿಸಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT