ಬುಧವಾರ, ನವೆಂಬರ್ 13, 2019
23 °C
ಈವರೆಗೆ 1.5 ಲಕ್ಷ ಕಾರ್ಡ್‌ ವಿತರಣೆ; ಎಪಿಎಲ್‌ ಕಾರ್ಡುದಾರರ ನಿರುತ್ಸಾಹ

ಆಯುಷ್ಮಾನ್‌ ಕಾರ್ಡ್‌: ಮಹಿಳೆಯರ ಉತ್ಸಾಹ

Published:
Updated:

ರಾಮನಗರ: ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಗೆ (ಎಬಿಎಆರ್‌ಕೆ) ನೋಂದಣಿ ಮಾಡಿಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕಾರ್ಡ್‌ ಪಡೆಯುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ.

ಸದ್ಯ ರಾಮನಗರದಲ್ಲಿ ಇರುವ ಜಿಲ್ಲಾ ಆಸ್ಪತ್ರೆ, ಉಳಿದ ಮೂರು ತಾಲ್ಲೂಕುಗಳಲ್ಲಿನ ತಾಲ್ಲೂಕು ಆಸ್ಪತ್ರೆಗಳಲ್ಲಿ ಜನರಿಗೆ ಈ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಬಿಡದಿ, ಸಾತನೂರು, ಹಾರೋಹಳ್ಳಿ ಹಾಗೂ ಸೋಲೂರುಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಯೋಜನೆಯ ನೋಂದಣಿ ನಡೆದಿದೆ. ಇದಲ್ಲದೆ ಖಾಸಗಿ ಸೇವಾ ಕೇಂದ್ರಗಳ ಮೂಲಕವೂ ಆಯುಷ್ಮಾನ್‌ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಕೇಂದ್ರ ಸರ್ಕಾರದ ಕಡೆಯ ಬಜೆಟ್ ಸಂದರ್ಭ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಇದಕ್ಕೂ ಮುನ್ನ ರಾಜ್ಯ ಸರ್ಕಾರವೂ ‘ಆರೋಗ್ಯ ಕರ್ನಾಟಕ’ ಎಂಬ ಇದೇ ಮಾದರಿಯ ಯೋಜನೆಯನ್ನು ಘೋಷಣೆ ಮಾಡಿತ್ತು. ಈ ಎರಡೂ ಯೋಜನೆಗಳನ್ನು ಸಮೀಕರಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಸರ್ಕಾರಗಳು ಮುಂದೆ ಬಂದಿವೆ.

ಯೋಜನೆಯ ಅಡಿ ಬಿಪಿಎಲ್‌ ಕಾರ್ಡುದಾರರಿಗೆ ₹5 ಲಕ್ಷದವರೆಗಿನ ಚಿಕಿತ್ಸೆಗಳು ಉಚಿತವಾಗಿ ದೊರೆಯಲಿವೆ. ಎಪಿಎಲ್‌ ಕಾರ್ಡುದಾರರೂ ಇದಕ್ಕೆ ನೋಂದಾಯಿಸಿಕೊಳ್ಳಬಹುದಾಗಿದ್ದು, ಅವರಿಗೆ ₹1.5 ಲಕ್ಷದವರೆಗೆ ಚಿಕಿತ್ಸೆ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಶಸ್ತ್ರಚಿಕಿತ್ಸೆಗಳು, ವಿಶೇಷ ವೈದ್ಯೋಪಚಾರಕ್ಕೆ ಜನರು ಈ ಕಾರ್ಡುಗಳನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬಹುದಾಗಿದೆ.

1.5 ಲಕ್ಷ ಕಾರ್ಡ್‌ ವಿತರಣೆ: ಜಿಲ್ಲೆಯಲ್ಲಿ ಈವರೆಗೆ ಸುಮಾರು 1.5 ಲಕ್ಷ ಜನರು ಈ ಕಾರ್ಡುಗಳನ್ನು ಪಡೆದಿದ್ದಾರೆ. ಜನರು ತಮ್ಮ ಪಡಿತರ ಕಾರ್ಡ್‌, ಆಧಾರ್ ಕಾರ್ಡ್‌ ಇಲ್ಲವೇ ಯಾವುದೇ ವಿಳಾಸ ಧೃಢೀಕರಣ ದಾಖಲೆ ನೀಡಿ ಕಾರ್ಡ್ ಪಡೆಯಬಹುದಾಗಿದೆ.

ಖಾಸಗಿ ಕೇಂದ್ರಗಳಲ್ಲಿ ದುಪ್ಪಟ್ಟು ಶುಲ್ಕ ಆರೋಪ
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಡ್‌ ಪಡೆಯುವವರಿಗಿಂತ ಖಾಸಗಿ ಸೇವಾ ಕೇಂದ್ರಗಳಲ್ಲಿಯೇ ನೋಂದಣಿ ಹೆಚ್ಚಿದೆ. ಆರೋಗ್ಯ ಇಲಾಖೆಯು ಇಂತಹ 70 ಕೇಂದ್ರಗಳಿಗೆ ಅನುಮತಿ ನೀಡಿದೆ. ಇವುಗಳ ಮೂಲಕ ಆಗಸ್ಟ್ ಅಂತ್ಯಕ್ಕೆ 98,323 ಜನರು ಆಯುಷ್ಮಾನ್‌ ವಿಮೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಕಾರ್ಡ್‌ಗೆ ₹10 ಶುಲ್ಕ ನಿಗದಿಪಡಿಸಲಾಗಿದೆ. ಖಾಸಗಿ ಕೇಂದ್ರಗಳಲ್ಲಿ ಸೇವಾ ಶುಲ್ಕ ಸೇರಿ ₹30 ದರವಿದೆ. ಆದರೆ ಬಹುತೇಕ ಕೇಂದ್ರಗಳಲ್ಲಿ ಜನರಿಂದ ಪ್ರತಿ ಕಾರ್ಡಿಗೆ ₹100 ಶುಲ್ಕ ಪಡೆಯಲಾಗುತ್ತಿದೆ ಎಂದು ಜನರು ದೂರುತ್ತಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ದೂರುಗಳು ಬಂದ ಕಡೆ ಹೆಚ್ಚು ವಿಚಾರಣೆ ಮಾಡಿ ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

**
ಗ್ರಾಮೀಣ ಪ್ರದೇಶದಲ್ಲಿ ಒಂದು ಕಾರ್ಡ್‌ ಮಾಡಿಕೊಡಲು ₹100 ಪಡೆಯುತ್ತಿದ್ದಾರೆ. ಹಣ ಕೊಡದಿದ್ದರೆ ನೋಂದಣಿ ಮಾಡುವುದಿಲ್ಲ
- ಶ್ರೀನಿವಾಸ್, ಕೂಟಗಲ್‌ ನಿವಾಸಿ

**
ಸೇವಾ ಕೇಂದ್ರಗಳಲ್ಲಿ ಒಂದು ಕಾರ್ಡಿಗೆ ₹30 ಶುಲ್ಕ ನಿಗದಿಯಾಗಿದೆ. ಹೆಚ್ಚು ಶುಲ್ಕಕ್ಕೆ ಒತ್ತಾಯಿಸಿದರೆ ಜನರು ಲಿಖಿತವಾಗಿ ದೂರು ನೀಡಬೇಕು
- ಟಿ. ಅಮರ್‌ನಾಥ್‌, ಡಿಎಚ್‌ಒ, ರಾಮನಗರ

ಪ್ರತಿಕ್ರಿಯಿಸಿ (+)