ಚನ್ನಪಟ್ಟಣ: ಉಪ ಚುನಾವಣೆ ಎದುರಿಸಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ₹500 ಕೋಟಿ ಅನುದಾನ ನೀಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣಕ್ಕೆ ಉಪಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಕಾಂಗ್ರೆಸ್ ಜನಸ್ಪಂದನಾ ಸಭೆ, ಜನಸಂಪರ್ಕ ಸಭೆ, ಉದ್ಯೋಗಮೇಳ, ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಚುನಾವಣಾ ಚಟುವಟಿಕೆಗಳನ್ನು ಆರಂಭಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ₹ 500 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಸೆ.20 ರಿಂದ ಮೂರು ದಿನ ತಾಲ್ಲೂಕಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.20 ರಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ, ಸೆ.21 ರಂದು ವಸತಿ ಸಚಿವ ಜಮೀರ್ ಅಹಮದ್ ಅವರಿಂದ ನಿವೇಶನ ರಹಿತರಿಗೆ ಲಾಟರಿ ಮೂಲಕ ನಿವೇಶನ ಮತ್ತು ವಸತಿ ರಹಿತರಿಗೆ ವಸತಿ ಹಂಚಿಕೆ, ಹಕ್ಕು ಪತ್ರ ವಿತರಣೆ, ವಿವಿಧ ಯೋಜನೆಗಳಲ್ಲಿ ಮುಸ್ಲಿಂ ಹಾಗೂ ಇತರ ವರ್ಗದ ಫಲಾನುಭವಿಗಳಿಗೆ ಆಟೊ ಹಾಗೂ ಕಾರು ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸೆ.22 ರಂದು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಆರೋಗ್ಯ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿರುವ ಕಾಂಗ್ರೆಸ್ ತೆರೆಮರೆಯಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ.
ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವ ಕಾಂಗ್ರೆಸ್ ಚನ್ನಪಟ್ಟಣ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ತನ್ನ ಅಭಿವೃದ್ಧಿ ಜಪವನ್ನು ಮುಂದುವರೆಸುತ್ತಿದೆ.
ತಾಲ್ಲೂಕಿನ ವಸತಿ ಹಾಗೂ ನಿವೇಶನ ರಹಿತರಿಗೆ 5000 ಮನೆ ನೀಡುವ ಗುರಿ ಇಟ್ಟುಕೊಂಡಿರುವ ಡಿ.ಕೆ. ಶಿವಕುಮಾರ್, ಇದಕ್ಕೆ ಬೇಕಾದ ಭೂಮಿ ಗುರುತಿಸಿ ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಕೆಲಸ ಆರಂಭಿಸಿದ್ದಾರೆ. ಈ ಮೂಲಕ ಹಿಂದುಳಿದ ವರ್ಗ, ಬಡವರ ಮತಗಳ ಮೇಲೆ ಕಣ್ಣಟ್ಟಿದ್ದಾರೆ ಎನ್ನಲಾಗುತ್ತಿದೆ.
‘ತಾಲ್ಲೂಕಿನ ಅಭಿವೃದ್ಧಿ ಮಾಡುವುದು ನಮ್ಮ ಗುರಿ. ಚುನಾವಣೆ ಬರುತ್ತವೆ, ಹೋಗುತ್ತವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲ್ಲೂಕು ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಉದ್ದೇಶ’ ಎನ್ನುವುದು ಕಾಂಗ್ರೆಸ್ ಮುಖಂಡರ ವಾದ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಹಾಗೂ ಶಾಸಕರಾಗಿದ್ದ ಅವಧಿಯಲ್ಲಿ ₹1500 ಕೋಟಿ ಅನುದಾನ ತಂದಿದ್ದರು. ಸಿ.ಪಿ. ಯೋಗೇಶ್ವರ್ ಸಚಿವರಾಗಿದ್ದಾಗ ನೂರಾರು ಕೋಟಿ ಅನುದಾನ ತಂದು ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಸಾಕಾರಗೊಳಿಸಿದ್ದರು.
ಉಪ ಚುನಾವಣೆ ಬಂದಾಗ ಆಡಳಿತದಲ್ಲಿದ್ದ ಸರ್ಕಾರಗಳು ಅನುದಾನದ ಹೊಳೆ ಹರಿಸಿದ್ದವು. ಈಗ ಮತ್ತೊಂದು ಉಪ ಚುನಾವಣೆ ಬರುತ್ತಿದೆ. ಅದರ ನೆಪದಲ್ಲಾದರೂ ತಾಲ್ಲೂಕು ಸರ್ವತೋಮುಖ ಅಭಿವೃದ್ಧಿ ಕಾಣಲಿ ಎನ್ನುತ್ತಾರೆ ತಾಲ್ಲೂಕಿನ ಜನರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.