ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ: ಮೈತ್ರಿ, ಪಕ್ಷಾತೀತ ಮತಗಳ ಕ್ರೋಡೀಕರಿಸಿದ ‘ಕೈ’ ನಡೆ–ನುಡಿ

ಮೈತ್ರಿಗೂ ಮುಂಚೆಯೇ ಒಗ್ಗೂಡಿದ್ದ ಬಿಜೆಪಿ–ಜೆಡಿಎಸ್
Published 7 ಜೂನ್ 2024, 5:48 IST
Last Updated 7 ಜೂನ್ 2024, 5:48 IST
ಅಕ್ಷರ ಗಾತ್ರ

ರಾಮನಗರ: ಕಾಂಗ್ರೆಸ್ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರೋಚಿತ ಗೆಲುವಿಗೆ ‘ಕೈ’ ನಾಯಕರ ನಡೆ–ನುಡಿಗಳೇ ಕಾರಣವಾದವೇ? ಹೌದು, ಎನ್ನುತ್ತಾರೆ ಸ್ಥಳೀಯ ರಾಜಕೀಯ ಮುಖಂಡರು. ಅತಿರೇಕದ ಮಾತುಗಳು ಬಿಜೆಪಿ–ಜೆಡಿಎಸ್‌ ಪಕ್ಷದ ಮತಗಳಷ್ಟೇ ಅಲ್ಲದೆ, ಪಕ್ಷಾತೀತ ಮತಗಳನ್ನು ಸಹ ‘ಮೈತ್ರಿ’ ಪರವಾಗಿ ಕ್ರೋಢೀಕರಿಸಿದವು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಮುಖಂಡರೇ ವ್ಯಕ್ತಪಡಿಸುತ್ತಿದ್ದಾರೆ.

ಕನಕಪುರ ಹೊರತುಪಡಿಸಿದರೆ, ವಿಧಾನಸಭಾ ಚುನಾವಣೆಗಳಲ್ಲಿ ಜಿಲ್ಲೆಯು ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಜಿಲ್ಲೆಯನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಸಹೋದರರು ಜೆಡಿಎಸ್ ಕೋಟೆಯನ್ನು ಬೇಧಿಸಿ ಜೆಡಿಎಸ್ ಶಾಸಕರ ಸಂಖ್ಯೆಯನ್ನು 3ರಿಂದ 1ಕ್ಕೆ ಇಳಿಸಿದರು.

ಒಕ್ಕಲಿಗರ ಪ್ರಾಬಲ್ಯದ ರಾಮನಗರವು ಯಾರೂ ಊಹಿಸಲಾಗದಂತಹ ಫಲಿತಾಂಶಕ್ಕೆ ಸಾಕ್ಷಿಯಾಗಿತ್ತು. ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಎಚ್‌.ಎ. ಇಕ್ಬಾಲ್ ಹುಸೇನ್ ಗೆಲುವು ಡಿಕೆಶಿಗೆ ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯ ರಾಜಕಾರಣದಲ್ಲೂ ದೊಡ್ಡ ಶಕ್ತಿ ಕೊಟ್ಟಿತ್ತು.

ಎಚ್‌.ಡಿ. ದೇವೇಗೌಡ ಮತ್ತು ಡಿಕೆಶಿ ಕುಟುಂಬದ ನಾಲ್ಕು ದಶಕಗಳ ರಾಜಕೀಯ ಸಮರದಲ್ಲಿ ಡಿಕೆಶಿ ಕೈ ಮೇಲಾಗುವಂತೆ ಮಾಡಿತ್ತು. ಜಿಲ್ಲೆಯ ಶಕ್ತಿ ರಾಜಕಾರಣದ ಮೇಲುಗೈ ಜೊತೆಗೆ ಒಕ್ಕಲಿಗರ ನಾಯಕತ್ವದ ಪೈಪೋಟಿಗೂ ಈ ಗೆಲುವು ವೇದಿಕೆ ಒದಗಿಸಿತ್ತು.

ವರ್ಷದ ಹಿಂದಿನ ಈ ಬೆಳವಣಿಗೆಗಳ ನೆನಪುಗಳು ಮಾಸುವುದಕ್ಕೆ ಮುಂಚೆಯೇ ಎದುರಾದ ಲೋಕಸಭಾ ಚುನಾವಣೆಯು, ಮಂಜುನಾಥ್ ಗೆಲುವಿನ ಮೂಲಕ ಜಿಲ್ಲೆಯಲ್ಲಿ ಗೌಡರ ಕುಟುಂಬದ ರಾಜಕಾರಣ ಕೈ ಮೇಲಾಗುವಂತೆ ಮಾಡಿದೆ. ಉಪ ಮುಖ್ಯಮಂತ್ರಿಯಾಗಿ ಸರ್ಕಾರದ ಎರಡನೇ ಶಕ್ತಿಯಾಗಿದ್ದರೂ, ಡಿಕೆಶಿ ಅವರು ಸಹೋದರನನ್ನು ಗೆಲ್ಲಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದ್ದಾರೆ.

‘ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇರುವುದರಿಂದ ಯಾರೇ ಗೆದ್ದರೂ ಮತಗಳ ಅಂತರ ಲಕ್ಷ ದಾಟದು’ ಎಂಬ ಮಾತು ಎಲ್ಲರ ಬಾಯಲ್ಲೂ ಸಾಮಾನ್ಯವಾಗಿತ್ತು. ಆ ಮಾತನ್ನು ಸುಳ್ಳಾಗಿಸಿದ ಮಂಜುನಾಥ್ ದಾಖಲೆಯ 10,79,002 ಮತಗಳನ್ನು ಪಡೆದು, ಬರೋಬ್ಬರಿ 2,69,647 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ. ‘ನಾವೆಲ್ಲಿ ಎಡವಿದೆವು’ ಎಂಬ ಆತ್ಮಾವಲೋಕನ ‘ಕೈ’ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಈಗ ಶುರುವಾಗಿದೆ.

‘ಕೈ’ಗೆ ತೊಡಕಾದ ಅಂಶಗಳಾವು?

* ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕನಕಪುರಕ್ಕೆ ಸ್ಥಳಾಂತರ ನಿರ್ಧಾರ ವಿಷಯ ಮೈತ್ರಿಗೂ ಮುಂಚೆಯೇ ಬಿಜೆಪಿ–ಜೆಡಿಎಸ್‌ ಒಗ್ಗೂಡಲು ಕಾರಣವಾಯಿತು. ವಿವಿಧ ಸಂಘಟನೆಗಳೊಂದಿಗೆ ಡಿ.ಕೆ ಸಹೋದರರ ವಿರುದ್ಧ ಹೋರಾಟಕ್ಕಿಳಿಯಲು ಅಸ್ತ್ರವಾಯಿತು. ಸ್ಥಳೀಯರನ್ನು ಭಾವನಾತ್ಮಕವಾಗಿ ತಟ್ಟಿದ ಇದೇ ವಿಷಯಕ್ಕೆ ಜಿಲ್ಲಾ ಕೇಂದ್ರ ಬಂದ್ ಕೂಡ ಆಗಿತ್ತು. ಬಳಿಕ ಸಹೋದರರು ಕನಕಪುರಕ್ಕೆ ಪ್ರತ್ಯೇಕ ಕಾಲೇಜು ಮಂಜೂರು ಮಾಡಿಸಿಕೊಂಡರು. ಆದರೆ ಈ ಹೋರಾಟವು ಸಹೋದರರ ವಿರೋಧಿಗಳನ್ನು ಒಂದುಗೂಡಿಸಿತು.

* ‘ನಾವು ಬೆಂಗಳೂರಿನ ಭಾಗ. ನಾವು ರಾಮನಗರದವರಲ್ಲ. ಕನಕಪುರ ಬೆಂಗಳೂರು ಸೇರಲಿದೆ’ ಎಂದು ಎಂಬ ಡಿ.ಕೆ. ಶಿವಕುಮಾರ್ ಅವರ ಮಾತುಗಳು ರಾಮನಗರ ಜಿಲ್ಲೆಯ ಅಸ್ಮಿತೆ ಕುರಿತು ಜನ ಯೋಚಿಸುವಂತೆ ಮಾಡಿತು. ತಮ್ಮ ಕನಕಪುರದ ಮೇಲಿನ ಅತಿಯಾದ ಮೋಹದಿಂದಾಗಿ ಜಿಲ್ಲೆಯನ್ನು ಪ್ರತ್ಯೇಕವಾಗಿಯೇ ನೋಡುವ ಮನೋಭಾವವು ಸಹೋದರರ ವಿರುದ್ಧ ಒಳಗೊಳಗೆ ಅಸಹನೆ ಸೃಷ್ಟಿಸಿತು.

* ಗ್ಯಾನವಾಪಿ ಮಸೀದಿ ಕುರಿತು ಕೋರ್ಟ್ ತೀರ್ಪು ಖಂಡಿಸಿ ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಅದರ ಮುಂದುವರಿದ ಭಾಗವಾಗಿ ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಎಸ್‌ಐ ಅಮಾನತಿಗಾಗಿ ವಕೀಲರು ಶುರು ಮಾಡಿದ ಪ್ರತಿಭಟನೆ ರಾಜ್ಯಮಟ್ಟಕ್ಕೆ ವಿಸ್ತರಿಸಿ ಅಧಿವೇಶನದ ಅಂಗಳಕ್ಕೆ ಬಂದಿದ್ದು ಅಂತಿಮವಾಗಿ ಎಸ್‌ಐ ಅಮಾನತಾಗಿದ್ದು... ಇಡೀ ಘಟನೆಯ ನಿರ್ವಹಣೆಯಲ್ಲಿ ಸಹೋದರರು ವಿಫಲರಾದರು. ವಕೀಲರ ಹೋರಾಟವು ಪರೋಕ್ಷವಾಗಿ ಬಿಜೆಪಿ ಜೆಡಿಎಸ್ ಮತಬ್ಯಾಂಕ್ ಜೊತೆಗೆ ಹಿಂದೂ ಮತಗಳ ಒಗ್ಗೂಡುವಿಕೆಗೆ ಕಾರಣವಾಯಿತು.

* ಗ್ರಾಮಾಂತರ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಹೆಸರು ಪ್ರಸ್ತಾಪವಾದಾಗ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಮಾಗಡಿಯ ಎಚ್‌.ಸಿ. ಬಾಲಕೃಷ್ಣ ರಾಮನಗರದ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಮಂಜುನಾಥ್ ಸೇರಿದಂತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕುರಿತು ‘ಗಂಡಸ್ತನ’ ಪದ ಬಳಸಿ ಹಗುರವಾದ ಮಾತುಗಳನ್ನಾಡಿದರು. ತಿರುಗುಬಾಣವಾದ ಈ ಮಾತುಗಳು ಜಿಲ್ಲೆಯ ರಾಜಕಾರಣದಲ್ಲಿ ಶಕ್ತಿಗುಂದಿದ್ದ ಜೆಡಿಎಸ್‌ ಕುಟುಂಬದ ಪರವಾಗಿ ಜನರ ಅನುಕಂಪ ಗಿಟ್ಟಿಸಿದವು.

* ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ಅಧಿಕಾರ ಮತ್ತು ಸ್ಥಾನಮಾನವನ್ನು ಸಹೋದರರು ಕೇವಲ ಒಕ್ಕಲಿಗ ಸಮುದಾಯದವರಿಗೆ ಮಾತ್ರ ಹಂಚಿದರು. ಕಾಂಗ್ರೆಸ್ ಮತಬ್ಯಾಂಕ್ ಆದ ಅಹಿಂದ ಸೇರಿದಂತೆ ಇತರ ಪ್ರಮುಖ ಸಮುದಾಯಗಳನ್ನು ಕಡೆಗಣಿಸಿದ್ದು ದೊಡ್ಡ ಒಳೇಟಿಗೆ ಕಾರಣವಾಯಿತು. ಸುರೇಶ್ ಗೆದ್ದರೆ ಸಿ.ಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್‌ಗೆ ಮತ್ತಷ್ಟು ಬಲ ಬರಲಿದ್ದು ಸಿದ್ದರಾಮಯ್ಯ ಕುರ್ಚಿಗೆ ತೊಂದರೆಯಾಗಲಿದೆ ಎಂಬ ಮಾತುಗಳು ಅವರ ಅಭಿಮಾನಿ ಬಳಗದಲ್ಲಿ ಹರಿದಾಡಿದವು. ಹಾಗಾಗಿ ಡಿಕೆಶಿ ಬಲಗೈ ಆಗಿರುವ ಸುರೇಶ್ ಪರವಾಗಿದ್ದ ಒಂದಿಷ್ಟು ಮತಗಳು ಮೈತ್ರಿ ಪಾಲಾದವು.

* ಡಿ.ಕೆ ಸಹೋದರರ ವಿರುದ್ಧ ಅಧಿಕಾರ– ಹಣದ ದರ್ಪ ಸರ್ವಾಧಿಕಾರತ್ವ ಒರಟುತನ ಅಧಿಕಾರ ಕೇಂದ್ರೀಕರಣ ಭ್ರಷ್ಟಾಚಾರದಂತಹ ವಿಷಯಗಳನ್ನು ಮೈತ್ರಿ ನಾಯಕರು ಮತ್ತು ಮುಖಂಡರು ನಿರಂತರವಾಗಿ ಪ್ರಸ್ತಾಪಿಸುತ್ತಾ ಒಂದು ರೀತಿಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿದರು. ಇದು ಪಕ್ಷ ಕೇಂದ್ರಿತವಾಗಿದ್ದ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತವಾಗಿಸಿತು. ಇಬ್ಬರಲ್ಲಿ ಯಾರು ಒಳ್ಳೆಯವರು ಎಂಬುದಷ್ಟನ್ನೇ ಜನ ನೋಡುವಂತೆ ಮಾಡಿತು.

* ಜಿಲ್ಲೆಯಲ್ಲಿ ಅಧಿಕಾರ ಶಕ್ತಿ ಕಳೆದುಕೊಂಡಿದ್ದ ಗೌಡರ ಕುಟುಂಬದ ವಿರುದ್ಧ ಡಿ.ಕೆ ಸಹೋದರರು ಹಾಗೂ ಅವರ ಸುತ್ತಲಿನವರ ವಾಗ್ದಾಳಿಯು ಜನರಿಗೆ ಗೌಡರ ಕುಟುಂಬದ ಮೇಲೆ ಅನುಕಂಪಕ್ಕೆ ಕಾರಣವಾಯಿತು. ಇದಕ್ಕೆ ಉತ್ತರವಾಗಿ ಪ್ರಬಲ ಒಕ್ಕಲಿಗ ಸಮುದಾಯದ ಜೊತೆಗೆ ಇತರ ಸಮುದಾಯಗಳು ಗೌಡರ ಬೆಂಬಲಕ್ಕೆ ನಿಂತು ಅವರ ಅಳಿಯನಿಗೆ ಮತ ಬೆಂಬಲ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT