ಗುರುವಾರ , ಜುಲೈ 29, 2021
21 °C
ಕೋವಿಡ್‌ನಿಂದ ಗುಣಮುಖರಾಗುತ್ತಿರುವ ಪುಟ್ಟಣ್ಣ ಮನದ ಮಾತು

ಧೈರ್ಯ ಇದ್ದರೆ ಶೇ 90ರಷ್ಟು ರೋಗ ವಾಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: 'ಇನ್‌ಫ್ಲೂಯೆಂಜಾ ಮೊದಲಾದ ವೈರಾಣು ಕಾಯಿಲೆಗೆ ಹೋಲಿಸಿದರೆ ಕೊರೊನಾ ಅರ್ಥಾತ್‌ ಕೋವಿಡ್‌ ಕಾಯಿಲೆ ಏನೇನೂ ಅಲ್ಲ. ನಮ್ಮಲ್ಲಿ ರೋಗ ಹೆದರಿಸುವ ಶಕ್ತಿ ಇದ್ದರೆ ಶೇ 90ರಷ್ಟು ಕಾಯಿಲೆ ವಾಸಿ ಆದಂತೆಯೇ’

ಇದು ಕೋವಿಡ್‌ ಮಣಿಸಿ ಗುಣಮುಖರಾಗುತ್ತಿರುವ ವಿಧಾನ ಪರಿಷತ್‌ನ ಮಾಜಿ ಸದಸ್ಯ ಪುಟ್ಟಣ್ಣ ಅವರ ಮನದ ಮಾತು. ಅವರಿಗೆ ಕೆಲ ವಾರಗಳ ಹಿಂದಷ್ಟೇ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿತ್ತು. ಸೋಂಕು ಖಾತ್ರಿಯಾದ ದಿನವೇ ಆಸ್ಪತ್ರೆ ಸೇರಿದ್ದ ಪುಟ್ಟಣ್ಣ ಅಲ್ಲಿ ಎಂಟು ದಿನ ಕಾಲ ಚಿಕಿತ್ಸೆ ಪಡೆದು ಈಗ ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಕೋವಿಡ್ ಸಂದರ್ಭ ತಾವು ಎದುರಿಸಿದ ಸಮಸ್ಯೆ, ಚಿಕಿತ್ಸೆ ವಿಧಾನಗಳು ಹಾಗೂ ಆತ್ಮಸ್ಥೈರ್ಯದ ಬಗ್ಗೆ 'ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

'ಸಾರ್ವಜನಿಕ ಜೀವನದಲ್ಲಿ ಇರುವವರು ಜನಸಾಮಾನ್ಯರ ಜೊತೆ ಬೆರೆಯುವುದು ಅನಿವಾರ್ಯ. ಇಂತಹದ್ದೇ ಒಂದು ಸಮಯದಲ್ಲಿ ನನಗೆ ಕೋವಿಡ್ ವೈರಸ್‌ ತಗುಲಿತು. ಮೊದಲ ದಿನ ಮೈ-ಕೈ ನೋವು, ಜ್ವರ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿದವು. ತಡಮಾಡದೇ ಕೋವಿಡ್‌ ಪರೀಕ್ಷೆಗೆ ಒಳಗಾದೆ. ಅದಾದ ಮರುದಿನವೇ ಫಲಿತಾಂಶ ಬಂದಿದ್ದು, ಕೊರೊನಾ ಪಾಸಿಟಿವ್‌ ಇತ್ತು. ಆದರೆ ಎದೆಗುಂದಲಿಲ್ಲ. ಮನೆಯವರಿಗೆ ಧೈರ್ಯ ಹೇಳಿ ಆಸ್ಪತ್ರೆಗೆ ದಾಖಲಾದೆ. ಜೊತೆಗೆ ನನ್ನ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ ಮೊದಲಿಗೆ ನನ್ನ ಮಗಳು, ವಾಹನ ಚಾಲಕ ಇಬ್ಬರಿಗೆ ಪಾಸಿಟಿವ್‌ ಬಂತು. ಅವರಿಗೂ ಚಿಕಿತ್ಸೆ ಕೊಡಿಸಲಾಯಿತು. ನಂತರದಲ್ಲಿ ಪತ್ನಿ ಮತ್ತು ಮಗನಿಗೂ ಸೋಂಕು ಪಸರಿಸಿತ್ತು. ಆದರೆ ಸೋಂಕಿನ ಲಕ್ಷಣಗಳು ಇಲ್ಲದ ಕಾರಣ ಅವರಿಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿದರು’ ಎಂದು ಪುಟ್ಟಣ್ಣ ವಿವರಿಸಿದರು.

'ಆಸ್ಪತ್ರೆಯಲ್ಲಿ ಒಂದು ಕೋಣೆಯಲ್ಲಿ ಒಬ್ಬನೇ ಇದ್ದೆ. ಆಗೊಮ್ಮೆ ಈಗೊಮ್ಮೆ ವೈದ್ಯರು ಇಲ್ಲವೇ ನರ್ಸ್‌ ಬಂದು ಮಾತನಾಡಿಸಿ ಹೋಗುತ್ತಿದ್ದರು. ಆದರೆ ಪಿಪಿಇ ಕಿಟ್‌ ತೊಟ್ಟಿದ್ದ ಕಾರಣ ಅವರ ಮುಖವೂ ಕಾಣುತ್ತಿರಲಿಲ್ಲ. ಟ್ಯಾಮಿಫ್ಲೂ ನಂತಹ ಕೆಲವು ಮಾತ್ರೆ, ವಿಟಮಿನ್‌ ಮಾತ್ರೆಗಳು ಬಿಟ್ಟರೆ ವಿಶೇಷವಾದ ಔಷಧಗಳು ಇರಲಿಲ್ಲ. ಉಳಿದಂತೆ ಬಿಸಿನೀರು, ಬಿಸಿಯಾದ ಊಟ ಮೊದಲಾದ ಪಥ್ಯಗಳೇ ಸಾಕಾದವು. ನನ್ನ ಹೆಂಡತಿ ಹಾಗೂ ಮಗನಿಗೆ ರೋಗಲಕ್ಷಣಗಳಿಲ್ಲದ ಕಾರಣ ಅದರ ಅಗತ್ಯವೂ ಬೀಳಲಿಲ್ಲ. ಕೆಲವು ಆಯುರ್ವೇದ ಔಷಧ ಹಾಗೂ ಪಥ್ಯಗಳಿಂದಲೇ ವೈರಸ್‌ ನಿಯಂತ್ರಣಕ್ಕೆ ಬಂತು. ಈಗಲೂ ಮನೆಯ ಎಲ್ಲರೂ ಪ್ರತ್ಯೇಕ ಕೊಠಡಿ ವಾಸದ ಮೂಲಕ ಪರಸ್ಪರ ಅಂತರ ಕಾಯ್ದುಕೊಂಡು ಕ್ವಾರಂಟೈನ್‌ನಲ್ಲಿ ಇದ್ದೇವೆ’ ಎಂದು ಅವರು ಹೇಳಿದರು.

'ಕೊರೊನಾಕ್ಕೆ ಆತ್ಮಸ್ಥೈರ್ಯಕ್ಕಿಂತ ದೊಡ್ಡದಾದ ಮದ್ದು ಬೇರೊಂದಿಲ್ಲ. ನಾನು ಈ ಕಾಯಿಲೆಯನ್ನು ಹೆದರಿಸಬಲ್ಲೆ ಎನ್ನುವ ಧೈರ್ಯ ಬಂದುಬಿಟ್ಟರೆ ರೋಗ ಬಹುತೇಕ ವಾಸಿ ಆದಂತೆಯೇ. ಈಚೆಗೆ ದೃಶ್ಯ ಮಾಧ್ಯಮಗಳಲ್ಲಿನ ಕೆಲವು ಸುದ್ದಿಗಳನ್ನು ನೋಡಿ ಜನರು ಭಯಭೀತರಾಗಿದ್ದಾರೆ. ಆದರೆ ವಾಸ್ತವದಲ್ಲಿ ಅಂತಹ ಯಾವ ಸಮಸ್ಯೆಗಳೂ ಇಲ್ಲ. ಸುದ್ದಿವಾಹಿನಿಗಳೂ ಈ ಬಗ್ಗೆ ಆದಷ್ಟು ಸಕಾರಾತ್ಮಕವಾದ ಸಂಗತಿಗಳನ್ನು ಬಿತ್ತರ ಮಾಡಬೇಕು’ ಎಂದು ಅವರು ಕೋರಿದರು.
 

ಆಮ್ಲಜನಕ ಪೂರೈಸಿ

ನನ್ನ ಅನುಭವದಲ್ಲಿ ಹೇಳುವುದಾದರೆ ಸೋಂಕಿತರ ಪೈಕಿ ಶೇ 8-10 ಮಂದಿಗಷ್ಟೇ ಚಿಕಿತ್ಸೆಯ ಅಗತ್ಯ ಇದೆ. ಅದರಲ್ಲೂ ಶೇ 3ರಷ್ಟು ಜನರಿಗಷ್ಟೇ ವೆಂಟಿಲೇಟರ್‌ನ ಅಗತ್ಯ ಇರುತ್ತದೆ. ಹೀಗಾಗಿ ಸರ್ಕಾರ ಈ ಉಳಿದ ಶೇ 8ರಷ್ಟು ಮಂದಿಗೆ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಬೇಕು. ದಿನಕ್ಕೊಂದು ಗಂಟೆ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್‌ಗಳಲ್ಲಿ ಆಕ್ಸಿಜನ್‌ ಪಡೆದು ಈ ರೋಗಿಗಳೂ ಮನೆಯಲ್ಲೇ ಉಪಚಾರದೊಂದಿಗೆ ಗುಣವಾಗಬಹುದು ಎಂದು ವೈದ್ಯರೇ ಹೇಳುತ್ತಾರೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಪುಟ್ಟಣ್ಣ ಮನವಿ ಮಾಡಿದರು.

ಗಂಭೀರ ಕಾಯಿಲೆ ಇಲ್ಲ

ಕಳೆದ ವರ್ಷವಷ್ಟೇ ನಾನು ಇನ್‌ಫ್ಲೂಯೆಂಜಾ ಸೋಂಕಿಗೆ ತುತ್ತಾಗಿದ್ದೆ. ಆಗಂತೂ ಅಸಾಧ್ಯವಾದ ಮೈ-ಕೈ ನೋವು. ಕೆಮ್ಮಿದರೆ ಕಿಬ್ಬೊಟ್ಟೆ ಕಿತ್ತು ಬರುವಂತೆ ಇತ್ತು. ಸುಮಾರು 25 ದಿನ ಚಿಕಿತ್ಸೆ ಪಡೆಯಬೇಕಾಯಿತು. ಇದೂ ಸೇರಿದಂತೆ ಎಚ್‌1ಎನ್‌1 ನಂತಹ ಇತರ ವೈರಾಣು ಕಾಯಿಲೆಗಳಿಗೆ ಹೋಲಿಸಿದರೆ ಕೊರೊನಾ ಏನೇನೂ ಅಲ್ಲ. ಆದರೆ ಅನಗತ್ಯವಾದ ಗಾಬರಿಯಿಂದ ಜನರು ಸೋಂಕನ್ನು ತಾವೇ ಬರಮಾಡಿಕೊಳ್ಳುತ್ತಿದ್ದಾರೆ. ನಮ್ಮೊಳಗಿನ ಭಯ ಬಿಟ್ಟು ಸರ್ಕಾರ ಹಾಗೂ ವೈದ್ಯರು ನೀಡುವ ಅಗತ್ಯ ಸಲಹೆಗಳನ್ನಷ್ಟೇ ಪಾಲಿಸಿದರೆ ಸಾಕು’ ಎನ್ನುತ್ತಾರೆ ಪುಟ್ಟಣ್ಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು