ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸೋಂಕು ನಿಯಂತ್ರಣವೇ ಸವಾಲು

ತಾಲ್ಲೂಕಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸೋಂಕಿತರು ಪತ್ತೆ; ಸೀಲ್‌ಡೌನ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚಳ
Last Updated 28 ಜುಲೈ 2020, 14:24 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ಸೋಂಕಿತರ ಲೆಕ್ಕದಲ್ಲಿ ಜಿಲ್ಲಾ ಕೇಂದ್ರವಾದ ರಾಮನಗರವು ಉಳಿದ ಮೂರು ತಾಲ್ಲೂಕನ್ನೂ ಹಿಂದಿಕ್ಕಿದ್ದು, ದಿನ ಕಳೆದಂತೆಲ್ಲ ಇಲ್ಲಿ ರೋಗಿಗಳ ಸಂಖ್ಯೆಯೂ ದುಪ್ಪಟ್ಟಾಗುತ್ತ ಹೋಗುತ್ತಿದೆ.

ಮಂಗಳವಾರದ ಅಂತ್ಯಕ್ಕೆ ತಾಲ್ಲೂಕಿನಲ್ಲಿ ಒಟ್ಟು 286 ಪ್ರಕರಣಗಳು ದೃಢವಾಗಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣವು ನಗರಸಭೆ ಹಾಗೂ ತಾಲ್ಲೂಕು ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಸರ್ಕಾರಿ ಕಚೇರಿಗಳು, ಆಸ್ಪತ್ರೆ-ಕ್ಲಿನಿಕ್‌ಗಳು, ವಾಣಿಜ್ಯ ಸಂಕೀರ್ಣಗಳ ಆದಿಯಾಗಿ ಎಲ್ಲೆಡೆಯೂ ಸೋಂಕು ಪಸರಿಸುತ್ತಿದೆ.

ಈ ಮೊದಲು ಸೋಂಕು ಪತ್ತೆಯಾದ ಸಂಪೂರ್ಣ ಬೀದಿ ಅಥವಾ ಓಣಿಯನ್ನು ಸೀಲ್‌ಡೌನ್‌ ಮಾಡಲಾಗುತಿತ್ತು. ಆದರೆ ಪ್ರಕರಣಗಳು ಜಾಸ್ತಿ ಆದೆಂತೆಲ್ಲ ಇದನ್ನು ಸುತ್ತಮುತ್ತಲಿನ ಮನೆಗಳು ಹಾಗೂ ಕಟ್ಟಡಗಳಿಗಷ್ಟೇ ಸೀಮಿತಗೊಳಿಸಲಾಗುತ್ತಿದೆ. ಈವರೆಗೆ ನಗರಸಭೆ ವ್ಯಾಪ್ತಿಯಲ್ಲೇ ಐವತ್ತಕ್ಕೂ ಹೆಚ್ಚು ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿದ್ದು, ದಿನ ಕಳೆದಂತೆಲ್ಲ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

"ಆರೋಗ್ಯ ಇಲಾಖೆಯಿಂದ ಪಟ್ಟಿ ದೊರೆತ ಕೂಡಲೇ ಆ ಪ್ರದೇಶದ ಸೀಲ್‌ಡೌನ್‌ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಜೊತೆಗೆ ಸ್ಯಾನಿಟೈಸ್, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕ್ವಾರಂಟೈನ್‌ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದಾಗ್ಯೂ ನಮ್ಮಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಜನರು ಎಚ್ಚೆತ್ತುಕೊಂಡು ತಾವಾಗಿಯೇ ಸುರಕ್ಷಿತ ಕ್ರಮಗಳನ್ನು ಅನುಸರಿಸದ ಹೊರತು ಇದರ ನಿಯಂತ್ರಣ ಕಷ್ಟ’ ಎನ್ನುತ್ತಾರೆ ರಾಮನಗರ ನಗರಸಭೆ ಆಯುಕ್ತೆ ಶುಭಾ.

ತಪ್ಪದ ಜನಜಂಗುಳಿ: ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದರೂ ನಗರದ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳಲ್ಲಿನ ಜನಜಂಗುಳಿ ಮಾತ್ರ ಕಡಿಮೆ ಆಗುತ್ತಿಲ್ಲ. ಅದರಲ್ಲೂ ಎಪಿಎಂಸಿ, ಹಳೆ ಬಸ್‌ ನಿಲ್ದಾಣ ವೃತ್ತ, ಸ್ಟೇಷನ್‌ ರಸ್ತೆ, ಎಂ.ಜಿ. ರಸ್ತೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಜನಸಂದಣಿ ಇದ್ದೇ ಇರುತ್ತದೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ಅಂಗಡಿಗಳ ವರ್ತಕರು ಸುರಕ್ಷತೆಗೆ ಆದ್ಯತೆ ನೀಡುವುದು ಕಡಿಮೆ.

'ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಇದಕ್ಕೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಾರೆ. ದಂಡ ಹಾಕಲು ಹೋದ ನಗರಸಭೆ ಸಿಬ್ಬಂದಿಗೇ ಬೆದರಿಕೆ ಒಡ್ಡಿದ ಘಟನೆಗಳು ನಡೆದಿವೆ’ ಎಂದು ನಗರಸಭೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸಮಿತಿ ರಚನೆ

ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ವಾರ್ಡ್‌‌ವಾರು ಸಮಿತಿ ರಚನೆ ಮಾಡಿದ್ದು, ಆ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಗರಸಭೆ ಆಯುಕ್ತೆ ಶುಭಾ.

"ಪ್ರತಿ ವಾರ್ಡಿಗೂ ನಗರಸಭೆಯ ಮಾಜಿ ಸದಸ್ಯರು, ಹಿರಿಯರು ಹಾಗೂ ಆಸಕ್ತರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರತಿ ಸೋಮವಾರ ಸಭೆ ನಡೆಸಲಿದ್ದು, ತನ್ನ ವ್ಯಾಪ್ತಿಯಲ್ಲಿನ ಜನರ ಆರೋಗ್ಯದ ಮೇಲೆ ನಿಗಾ ವಹಿಸಲಿದೆ. ಅನಾರೋಗ್ಯ ಪೀಡಿತರನ್ನು ಗುರುತಿಸಿ, ಅವರನ್ನು ಆಕ್ಸಿಮೀಟರ್‌ ಸಹಾಯದಿಂದ ಪರೀಕ್ಷೆ ನಡೆಸಿ, 90ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಹೊಂದಿರುವವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಈ ಸಮಿತಿ ಮಾಡಲಿದೆ. ಇದಲ್ಲದೆ ಬೂತ್‌ ಮಟ್ಟದ ಸಮಿತಿ ಸಹ ಇದ್ದು, ಇದೂ ಸಹ ಪ್ರತಿ ಬುಧವಾರ ಹಾಗೂ ಶನಿವಾರ ಸಭೆ ನಡೆಸಲಿದೆ’ ಎನ್ನುತ್ತಾರೆ ಅವರು.

36 ಮಂದಿಯಲ್ಲಿ ಸೋಂಕು

ಜಿಲ್ಲೆಯಲ್ಲಿ ಬುಧವಾರ 36 ಮಂದಿಯಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 866ಕ್ಕೆ ಏರಿಕೆಯಾಗಿದೆ.

ರಾಮನಗರದಲ್ಲಿ 12, ಕನಕಪುರದಲ್ಲಿ 13, ಚನ್ನಪಟ್ಟಣದಲ್ಲಿ 10 ಹಾಗೂ ಮಾಗಡಿಯಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನೂ ಕೋವಿಡ್‌ ರೆಫರಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ದಿನ 204 ಮಂದಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿದ್ದು, ಇದೂ ಸೇರಿದಂತೆ ಇನ್ನು 313 ಪ್ರಕರಣಗಳ ವರದಿಯಷ್ಟೇ ಬರಬೇಕಿದೆ.

***

ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಗುಂಪಾಗಿ ಸೇರುವುದನ್ನು ತಪ್ಪಿಸಿ, ಮನೆಯಲ್ಲೇ ಉಳಿದರೆ ಸೋಂಕು ನಿಯಂತ್ರಣ ಯಶಸ್ವಿ ಆಗುತ್ತದೆ

- ಶುಭಾ, ಆಯುಕ್ತೆ, ರಾಮನಗರ ನಗರಸಭೆ

ತಾಲ್ಲೂಕುವಾರು ಸೋಂಕಿತರ ವಿವರ

ತಾಲ್ಲೂಕು; ಸೋಂಕಿತರು; ಗುಣಮುಖ: ಸಕ್ರಿಯ ಪ್ರಕರಣ; ಸಾವು
ಚನ್ನಪಟ್ಟಣ: 181; 86; 95; 0
ಕನಕಪುರ; 180; 145; 33; 2
ಮಾಗಡಿ; 219; 106; 104; 9
ರಾಮನಗರ; 286; 142; 140; 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT