ಶನಿವಾರ, ಜೂನ್ 19, 2021
27 °C

ಹಬ್ಬದ ಖರೀದಿಗೆ ಮುಗಿಬಿದ್ದ ಗ್ರಾಹಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಯುಗಾದಿ ಮುನ್ನಾ ದಿನವಾದ ಮಂಗಳವಾರ ಗ್ರಾಹಕರು ಪಟ್ಟಣದಲ್ಲಿ ದಿನಸಿ ಸಾಮಗ್ರಿ, ಹೂವು, ಹಣ್ಣು, ಬಟ್ಟೆ ಮತ್ತು ಪೂಜಾ ಸಾಮಗ್ರಿ ಖರೀದಿಸಲು ಮುಗಿಬಿದ್ದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿರುವ ಕಾರಣ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹಬ್ಬದ ವಸ್ತುಗಳ ಖರೀದಿಗಾಗಿ ಗ್ರಾಹಕರು ಪರಿತಪಿಸಬೇಕಾಯಿತು. ಅಲ್ಲಲ್ಲಿ ತೆರೆದಿದ್ದ ಅಂಗಡಿಗಳಲ್ಲಿ ದಿನಸಿ ಮತ್ತಿತರ ವಸ್ತುಗಳನ್ನು ಕೊಳ್ಳಲು ಗ್ರಾಹಕರು ಗುಂಪುಗುಂಪಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪಟ್ಟಣದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಪೇಟೆಬೀದಿಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಅದರಲ್ಲೂ ಬೀದಿ ಬದಿಯ ವ್ಯಾಪಾರಿಗಳ ಭರಾಟೆ ಹೆಚ್ಚಾಗಿದ್ದು ಜನ ಅಲ್ಲಿಯೂ ಖರೀದಿಸಲು ಮುಗಿಬಿದ್ದರು.

ಮಂಗಳವಾರದಿಂದ ಲಾಕ್‌ಡೌನ್ ಆಗಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಸೋಮವಾರ ರಾತ್ರಿಯವರೆಗೂ ಗ್ರಾಹಕರು ವ್ಯಾಪಾರದಲ್ಲಿ ತೊಡಗಿದ್ದರು.  ತಾಲ್ಲೂಕಿನ ಪ್ರಮುಖ ವ್ಯಾಪಾರ ಕೇಂದ್ರಗಳಾದ ಕೋಡಂಬಹಳ್ಳಿ ಹಾಗೂ ಹೊಂಗನೂರು ಗ್ರಾಮಗಳಲ್ಲಿಯೂ ವ್ಯಾಪಾರ ಭರಾಟೆ ಜೋರಾಗಿತ್ತು.

ಅಧಿಕಾರಿಗಳ ಕಾರ್ಯಾಚರಣೆ

ಕರ್ನಾಟಕ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಬಿಗಿ ಕ್ರಮವಹಿಸಿದ್ದು, ತಹಶೀಲ್ದಾರ್ ಸುದರ್ಶನ್, ಪೌರಾಯುಕ್ತ ಶಿವನಾಂಕರಿಗೌಡ ಮತ್ತು ಡಿವೈಎಸ್ಪಿ ಓಂಪ್ರಕಾಶ್ ಒಗ್ಗೂಡಿ ಕಾರ್ಯಾಚರಣೆಗೆ ಇಳಿದಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ತಾಲ್ಲೂಕಿನ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು ಕೋಲೂರು ಮತ್ತು ಕಣಿಮಿಣಿಕೆ ಗ್ರಾಮಗಳ ಬಳಿ ಬೆಂಗಳೂರಿಗೆ ಹೋಗುವವರರನ್ನು ತಡೆಹಿಡಿದು ವಾಪಸ್ಸು ಕಳುಹಿಸಲಾಯಿತು. ಹಾಗೆಯೇ ಪಟ್ಟಣಕ್ಕೆ ಬರುತ್ತಿರುವ ವಾಹನಗಳನ್ನು ತಡೆಹಿಡಿದು ವಿಡಿಯೊ ಮಾಡಿಕೊಳ್ಳುತ್ತಿದ್ದರು.

ಪ್ರಯಾಣಿಕರ ಪರದಾಟ

ಸಾರಿಗೆ ಮತ್ತು ರೈಲು ಸಂಚಾರ ನಿಷೇಧ ಇರುವುದರಿಂದ ಪಟ್ಟಣದ ಷೇರು ಹೋಟೆಲ್, ಸಾತನೂರು ಸರ್ಕಲ್, ಬಸ್ ನಿಲ್ದಾಣದ ಮುಂಭಾಗ, ಎಸ್.ಬಿ.ಎಂ ನಿಲ್ದಾಣ ಹಾಗೂ ಮಂಗಳವಾರಪೇಟೆ ಹೆದ್ದಾರಿಯ ಬದಿಯಲ್ಲಿ ಊರಿಗೆ ತೆರಳಲು ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು