ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ್‌ಗೆ ಮಾವನ ಆಶೀರ್ವಾದ; ಸುರೇಶ್‌ಗೆ ತಾಯಿ ಸಾಂತ್ವನ

ಸೋಲಿಗೆ ಬೆಂಬಲಿಗರ ಕಣ್ಣೀರು; ಕಾರ್ಯಕರ್ತರನ್ನು ಸಂತೈಸಿದ ಸುರೇಶ್
Published 7 ಜೂನ್ 2024, 4:37 IST
Last Updated 7 ಜೂನ್ 2024, 4:37 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಗುರುವಾರ ತಮ್ಮ ಮಾವ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮತ್ತೊಂದೆಡೆ ಕಾಂಗ್ರೆಸ್‌ನ ಪರಾಜಿತ ಡಿ.ಕೆ. ಸುರೇಶ್ ತಮ್ಮ ತಾಯಿ ಗೌರಮ್ಮ ಅವರನ್ನು ಭೇಟಿ ಮಾಡಿದರು. ಸೋತ ಮಗನಿಗೆ ತಾಯಿ ಸಾಂತ್ವನದ ಮಾತುಗಳನ್ನಾಡಿದರು.

ಪಕ್ಷದ ನಾಯಕರ ಭೇಟಿಗಾಗಿ ದೆಹಲಿಗೆ ಹೊರಡುವ ಮುನ್ನ, ಬೆಂಗಳೂರಿನಲ್ಲಿರುವ ದೇವೇಗೌಡರ ಅವರ ಮನೆಗೆ ಪತ್ನಿ ಅನಸೂಯ ಅವರೊಂದಿಗೆ ಮಂಜುನಾಥ್ ಬಂದರು. ಮಾವ ಮತ್ತು ಅತ್ತೆ ಚೆನ್ನಮ್ಮ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಪುತ್ರಿ ಮತ್ತು ಅಳಿಯನನ್ನು ಪ್ರೀತಿಯಿಂದ ಮಾತನಾಡಿಸಿದ ಗೌಡರು, ಅಳಿಯನನ್ನು ಬೀಳ್ಕೊಟ್ಟರು.

ಗೆದ್ದ ದಿನವೇ ಮಾವನ ಮನೆಗೆ ಭೇಟಿ ನೀಡಿದ್ದ ಮಂಜುನಾಥ್, ತಮ್ಮ ಗೆಲುವಿನ ಪ್ರಮಾಣಪತ್ರ ತೋರಿಸಿ ಆಶೀರ್ವಾದ ಪಡೆದಿದ್ದರು. ನಂತರ ಬಾಮೈದ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸಹ ಭೇಟಿ ಮಾಡಿ, ಕುಟುಂಬದೊಂದಿಗೆ ಗೆಲುವಿನ ಸಂತಸ ಹಂಚಿಕೊಂಡಿದ್ದರು.

ತಾಯಿ ಭೇಟಿ: ಸೋತ ಬಳಿಕ ಮೊದಲ ಸಲ ಕನಕಪುರಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ನ ಡಿ.ಕೆ. ಸುರೇಶರ್ ಮಧ್ಯಾಹ್ನ ಕೋಡಿಹಳ್ಳಿಯಲ್ಲಿರುವ ಮನೆಗೆ ಹೋಗಿ ತಾಯಿಯನ್ನು ಭೇಟಿ ಮಾಡಿದರು. ಅವರ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದರು. ಸೋಲಿನ ಬೇಸರದಲ್ಲಿದ್ದ ಪುತ್ರನಿಗೆ ತಾಯಿ ಗೌರಮ್ಮ ಅವರು ಸಾಂತ್ವನದ ಮಾತುಗಳನ್ನಾಡಿದರು.

ತಾಯಿ ಭೇಟಿ ಕುರಿತ ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಸುರೇಶ್, ‘ತಾಯಿಯ ಮಡಿಲಿನಲ್ಲಿ ಎಲ್ಲವನ್ನು ಮರೆಯುವ ಶಕ್ತಿ ಇದೆ. ತಾಯಿಯ ಪ್ರೀತಿಯಲ್ಲಿ ಎಲ್ಲವನ್ನು ಗೆಲ್ಲುವ ಶಕ್ತಿ ಇದೆ’ ಎಂದು ಬರೆದುಕೊಂಡಿದ್ದಾರೆ.

ಸುರೇಶ್ ಅವರು ಬಂದಿರುವ ವಿಷಯ ತಿಳಿದು ಸ್ಥಳೀಯ ಮುಖಡರು ಹಾಗೂ ಕಾರ್ಯಕರ್ತರು ಬಂದು ಭೇಟಿ ಮಾಡಿದರು. ಎಲ್ಲರ ಜೊತೆ ಕುಶಲೋಪರಿ ವಿಚಾರಿಸಿದರು. ‘ನನಗೀಗ ಐದು ವರ್ಷ ರೆಸ್ಟ್ ನೀಡಿದ್ದೀರಿ. ಮುಂದೆ ನಿಮ್ಮ ಜೊತೆಯಲ್ಲಿ ಇರುತ್ತೇನೆ’ ಎಂದು ತಿಳಿಸಿದ ಸುರೇಶ್, ‘ಭಾನುವಾರ ಕನಕಪುರದ ಮನೆಯಲ್ಲಿ ಸಭೆ ನಡೆಸುತ್ತೇನೆ. ಅಲ್ಲಿಗೆ ಎಲ್ಲರೂ ಬನ್ನಿ’ ಎಂದು ಆಹ್ವಾನಿಸಿದರು ಎಂದು ಮೂಲಗಳು ತಿಳಿಸಿವೆ.

ಕೋಡಿಹಳ್ಳಿಯಿಂದ ಸಂಜೆ ಕನಕಪುರಕ್ಕೆ ಬಂದ ಸುರೇಶ್ ಅವರನ್ನು ಸ್ಥಳೀಯ ಮುಖಂಡರು ಭೇಟಿ ಮಾಡಿ, ನೆಚ್ಚಿನ ನಾಯಕನ ಸೋಲಿನ ಕುರಿತು ಬೇಸರ ತೋಡಿಕೊಂಡರು. ಕೆಲವರು ಕಣ್ಣೀರು ಹಾಕಿದರು. ಅವರನ್ನು ಸಂತೈಸಿ, ಕೆಲ ನಿಮಿಷ ಮಾತನಾಡಿದ ಸುರೇಶ್ ಬೆಂಗಳೂರಿಗೆ ಹೊರಟರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಅವರು ತಮ್ಮ ತಾಯಿ ಗೌರಮ್ಮ ಅವರನ್ನು ಗುರುವಾರ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಭೇಟಿ ಮಾಡಿದರು
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಅವರು ತಮ್ಮ ತಾಯಿ ಗೌರಮ್ಮ ಅವರನ್ನು ಗುರುವಾರ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಭೇಟಿ ಮಾಡಿದರು

‘ಅಭಿವೃದ್ಧಿ ಸೋತಿದೆ-ಭಾವನಾತ್ಮಕ ವಿಚಾರ ಗೆದ್ದಿದೆ’

ಸುರೇಶ್ ಸೋಲಿನ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ‘ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರ ಬಂಧುಗಳಿಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ನನ್ನ ಧನ್ಯವಾದಗಳು. ನಮ್ಮ ನಾಯಕ ಡಿ‌.ಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹಗಲು–ರಾತ್ರಿ ಎನ್ನದೆ ಮಾಡಿದ ಸೇವೆಯನ್ನು ಮರೆಯುವಂತಿಲ್ಲ. ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಮುಂದೆಯೂ ನಮ್ಮ ನಾಯಕರು ಹಾಗೂ ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ. ನೂತನವಾಗಿ ಆಯ್ಕೆಯಾದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಅಭಿನಂದನೆಗಳು.ಸುರೇಶ್ ಅವರು ಚಾಲನೆ ನೀಡಿದಂತಹ ಕೆಲಸ ಕಾರ್ಯಗಳನ್ನು ತಾವು ಮುಂದುವರಿಸಿ ಎಂದು ಆಶಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಸಹಕಾರ ಇರುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT