ಬುಧವಾರ, ಸೆಪ್ಟೆಂಬರ್ 22, 2021
23 °C

ಕನಕಪುರ: ಕಾಡಾನೆ ದಾಳಿ; ಬಾಳೆ ತೋಟ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಸೋಮೆದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಬಾಳೆ ತೋಟವನ್ನು ನಾಶಪಡಿಸಿವೆ.

ಗ್ರಾಮದ ರೈತ ಬಿ.ಕೆ. ಮುತ್ತುರಾಜು ಅವರಿಗೆ ಸೇರಿದ ಬಾಳೆ ತೋಟ ನಾಶವಾಗಿದೆ. ಸುಮಾರು 2 ಎಕರೆ ಜಮೀನಿನಲ್ಲಿ 2 ಸಾವಿರ ಬಾಳೆ ಬೆಳೆದಿದ್ದರು. ಕಾಡಾನೆಗಳ ದಾಳಿಗೆ ಸುಮಾರು 500 ಬಾಳೆ ಗಿಡಗಳು ನಾಶವಾಗಿದ್ದು, ₹ 5 ಲಕ್ಷ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಜತೆಗೆ ಮುತ್ತುರಾಜು ಅವರ ಸಹೋದರ ದೊರೆಸ್ವಾಮಿ ಅವರ 3 ತೆಂಗಿನ ಮರ, 100 ಬಾಳೆಗಿಡಗಳು ನಾಶವಾಗಿದ್ದು, ಸುಮಾರು ₹ 1 ಲಕ್ಷ ನಷ್ಟವಾಗಿದೆ.

ಒಂದು ಬಾಳೆ ಸಸಿಗೆ ₹ 25 ಕೊಟ್ಟು ನರ್ಸರಿಯಿಂದ ತಂದು ಬೇಸಾಯ ಮಾಡಲಾಗಿದೆ. ಒಂದು ಗಿಡ ಬಾಳೆ ಬೆಳೆಯಲು ಸುಮಾರು ₹ 400 ಖರ್ಚಾಗಿದ್ದು, ಉತ್ತಮ ಫಸಲು ಬಂದಿದ್ದರಿಂದ ಒಂದು ಗೊನೆಗೆ ₹ 1000 ಸಿಗುತ್ತಿತ್ತು. ಒಂದು ತಿಂಗಳ ಹಿಂದೆ ಇದೇ ಬಾಳೆ ತೊಟಕ್ಕೆ ಆನೆಗಳು ನುಗ್ಗಿ ಸ್ವಲ್ಪ ಬೆಳೆಯನ್ನು ನಾಶ ಮಾಡಿದ್ದವು. ಈಗ ಎರಡನೇ ಬಾರಿಗೆ ಮತ್ತೆ ದಾಳಿ ನಡೆಸಿವೆ. ಮುಂದೆಯೂ ಆನೆಗಳು ದಾಳಿ ಇಡುವ ಸಾಧ್ಯತೆಯಿದೆ ಎಂದು ನೋವು ತೋಡಿಕೊಂಡರು.

‘ಕಾಡಾನೆಗಳಿಂದ ಬಾಳೆ ನಾಶವಾಗಿರುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಒಂದು ಗಿಡಕ್ಕೆ ₹ 100 ರಂತೆ ಪರಿಹಾರ ಸಿಗಲಿದೆ. ನಷ್ಟವಾಗಿರುವ ಸಂಬಂಧ ಇಲಾಖೆಗೆ ಅರ್ಜಿ ಹಾಕುವಂತೆ ಹೇಳಿದ್ದಾರೆ. ಅರ್ಜಿ ಹಾಕಿ ಪರಿಹಾರ ಪಡೆಯಬೇಕಾದರೆ ನಮಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತದೆ. ಮತ್ತೆ ನಮಗೇನು ಸಿಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಲಾಕ್‌ಡೌನ್‌ ಸಮಯದಲ್ಲಿ ಸುಮಾರು ಮಂದಿ ಬೆಂಗಳೂರಿನಿಂದ ವಾಪಸ್‌ ಹಳ್ಳಿಗೆ ಬಂದು ವ್ಯವಸಾಯ ಮಾಡುತ್ತಿದ್ದಾರೆ. ಮುತ್ತುರಾಜು ಯುವ ರೈತನಾಗಿದ್ದು, ಪ್ರಗತಿಪರ ರೈತನಾಗಬೇಕೆಂದು ಬಾಳೆ ಬೇಸಾಯ ಮಾಡಿದ್ದಾರೆ. ಕಾಡಾನೆಗಳು ಅವರು ಬೆಳೆದ ಬೆಳೆಯನ್ನು ನಾಶ ಮಾಡಿವೆ. ಅರಣ್ಯ ಇಲಾಖೆಯವರು ಇಲ್ಲಿರುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಗ್ರಾಮಸ್ಥ ಕುಮಾರ್‌ ಬಿ.ಎಚ್‌. ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.