ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿವರೆಗೂ ಮೆಟ್ರೊ ಮಾರ್ಗ: ಡಿ.ಕೆ. ಶಿವಕುಮಾರ್‌

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ
Published 11 ನವೆಂಬರ್ 2023, 0:30 IST
Last Updated 11 ನವೆಂಬರ್ 2023, 0:30 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರಿನ ಸಂಚಾರ ದಟ್ಟನೆ ತಪ್ಪಿಸಲು ಬಿಡದಿಯವರೆಗೂ ‘ನಮ್ಮ ಮೆಟ್ರೊ’ ರೈಲು ಸಂಚಾರ ವಿಸ್ತರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.  

ಬಿಡದಿ ಯೋಜನಾ ಪ್ರಾಧಿಕಾರ ರದ್ದು ಮಾಡಿ, ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ವಾಗಿ ಪರಿವರ್ತಿಸಲು ಆದೇಶ ಮಾಡಲಾಗಿದೆ ಎಂದು ಅವರು ಹೇಳಿದರು.

ಬಿಡದಿಯ ಟೊಯೋಟಾ-ಕಿರ್ಲೋಸ್ಕರ್ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾದ ತರಬೇತಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 

‘ಬಿಡದಿಯ ತನಕ ಮೆಟ್ರೊ ಮಾರ್ಗ ವಿಸ್ತರಣೆಗೆ ಈಗಾಗಲೇ ಸರ್ವೇ ಮಾಡಿಸಲಾಗುತ್ತಿದೆ. ಈ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಸೂಚಿಸಿದ್ದೇನೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್‌ ಹೇಳಿದರು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಮೆಟ್ರೊ ಮಾರ್ಗ ವಿಸ್ತರಿಸುವಂತೆ ಶಾಸಕರು ಮತ್ತು ಸಂಸದರು ಮನವಿ ಸಲ್ಲಿಸಿದ್ದರು ಎಂದರು. 

ಬಿಡದಿಯಲ್ಲಿ 10 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇದುವರೆಗೂ ಯಾವುದೇ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಈ ಭಾಗಕ್ಕೂ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ಭಾಗದ ಆಸ್ಪತ್ರೆ, ವಿದ್ಯಾಸಂಸ್ಥೆ, ಕಾರ್ಮಿಕರು, ಅವರ ಮಕ್ಕಳು ಹೀಗೆ ಎಲ್ಲರಿಗೂ ಹೊಸ ಶಕ್ತಿ ತುಂಬಲು ಸರ್ಕಾರ ಈ ಎರಡೂ ಯೋಜನೆ ರೂಪಿಸಿದೆ ಎಂದು ಅವರು ಸಮರ್ಥಿಸಿಕೊಂಡರು.

‘ಮೆಟ್ರೊ ವಿಸ್ತರಣೆಗೆ ಸಂಬಂಧಿಸಿದಂತೆ ಸ್ಥಳೀಯರ ಅಭಿಪ್ರಾಯ ಪಡೆಯಲಾಗುವುದು. ನಂತರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಇಡುತ್ತೇನೆ. ಇದರೊಂದಿಗೆ ಭೂಸ್ವಾಧೀನ ತಪ್ಪಿಸುವುದು ಹೇಗೆ ಎಂಬ ಚಿಂತನೆಯೂ ನಡೆದಿದೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಹೊರಗಿನಿಂದ ಬರುವವರು ಬಿಡದಿ ಮೆಟ್ರೊ ನಿಲ್ದಾಣದ ಬಳಿ ವಾಹನ ನಿಲ್ಲಿಸಿ ಮೆಟ್ರೊ ರೈಲಿನಲ್ಲಿ ಬೆಂಗಳೂರಿಗೆ ತೆರಳಬಹುದು. ಇದರಿಂದ ಬೆಂಗಳೂರು ನಗರದ ವಾಹನ ದಟ್ಟಣೆ ನಿಯಂತ್ರಣವಾಗಲಿದೆ. ಮೆಟ್ರೊ ನಿಲ್ದಾಣದ ಬಳಿ ವಾಹನ ನಿಲುಗಡೆಗೆ ವಿಶಾಲ ಜಾಗ ನೀಡುವುದು ಸೇರಿದಂತೆ ಅನೇಕ ಹೊಸ ಆಲೋಚನೆಗಳಿವೆ. ಎಲ್ಲವನ್ನೂ ವ್ಯವಸ್ಥಿತವಾಗಿ ಪ್ಲಾನ್ ಮಾಡಲಾಗುತ್ತಿದೆ’ ಎಂದರು.

‘ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸಿದ ಮಾತ್ರಕ್ಕೆ ಇಲ್ಲಿಗೆ ಕೈಗಾರಿಕೆ ಬರುತ್ತವೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವೆಲ್ಲರೂ ಬೆಂಗಳೂರಿನವರು. ನಮ್ಮ ಜಿಲ್ಲಾ ಕೇಂದ್ರ ರಾಮನಗರದಲ್ಲೇ ಇರಲಿ. ಅದಕ್ಕೆ ಅಭ್ಯಂತರವಿಲ್ಲ. ಬೆಂಗಳೂರು ಬ್ರಾಂಡ್‌ ಹೆಸರು ಕಳೆದುಕೊಳ್ಳಲು ನಾವು ಇಷ್ಟಪಡುವುದಿಲ್ಲ’ ಎಂದರು.

ಹೇಗೆ ಗ್ರೇಟರ್ ಬೆಂಗಳೂರು ಮಾಡ್ತಾರೋ ನೋಡೋಣ: ಎಚ್‌ಡಿಕೆ ಸವಾಲು

ಚನ್ನಪಟ್ಟಣ: ‘ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ನನ್ನ ಯಾವುದೇ ತಕರಾರಿಲ್ಲ. ಆದರೆ ಬಿಡದಿಯನ್ನು ಯಾವ ರೀತಿ ಗ್ರೇಟರ್ ಬೆಂಗಳೂರು ಮಾಡುತ್ತಾರೋ ಮಾಡಲಿ, ನೋಡೋಣ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಚನ್ನಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು,‘ಇಂತಹ ಇನ್ನೂ ಇಪ್ಪತ್ತು ಘೋಷಣೆ ಮಾಡಲಿ, ಜಿಲ್ಲೆಯ ಅಭಿವೃದ್ಧಿ ಮಾಡಲಿ’ ಎಂದು ವ್ಯಂಗ್ಯವಾಗಿ ಹಾರೈಸಿದರು.

‘ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದಾದರೂ ನಾಮಕರಣ ಮಾಡಲಿ, ದೆಹಲಿ ಅಥವಾ ದುಬೈ ಎಂದಾದರೂ ಕರೆಯಲಿ. ಬರೀ ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಮಳೆ ಬಂದಾಗೊಮ್ಮೆ ಬೆಂಗಳೂರು ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. 2004ರಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದಿದ್ದರು. ಮಳೆ ಆದಾಗ ಏನಾಯಿತು? ಇದೇ ಗ್ರೇಟರ್ ಬೆಂಗಳೂರು. ನಾನು ಕಾಣದೇ ಇರೋದಾ ಇದೆಲ್ಲಾ’ ಎಂದರು.

ಮೆಟ್ರೊ ಸೇವೆ ವಿಸ್ತರಣೆ ಮತ್ತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಿಂದ ಈ ಭಾಗ ಅಭಿವೃದ್ಧಿ ಆಗುತ್ತದೆ. ಅದರೊಂದಿಗೆ ಈ ಭಾಗದ ಜನರ ಆಸ್ತಿ ಮೌಲ್ಯವೂ ಹೆಚ್ಚಾಗುತ್ತದೆ.
-ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದಾದರೂ ನಾಮಕರಣ ಮಾಡಲಿ, ದೆಹಲಿ ಅಥವಾ ದುಬೈ ಎಂದಾದರೂ ಕರೆಯಲಿ. ಬರೀ ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಆಗುತ್ತದೆಯೇ?
-ಎಚ್‌.ಡಿ. ಕುಮಾರಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT