ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಮನೆ ಮನೆ ತಲುಪದ ಕಸದ ಡಬ್ಬಿ

Published 22 ನವೆಂಬರ್ 2023, 5:25 IST
Last Updated 22 ನವೆಂಬರ್ 2023, 5:25 IST
ಅಕ್ಷರ ಗಾತ್ರ

ರಾಮನಗರ: ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆಗೆ ಪೂರಕವಾಗಿ, ಮನೆ ಮನೆಗೆ ಹಂಚಲು ನಗರಸಭೆಯು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿರುವ ಕಸದ ಡಬ್ಬಿಗಳು ಇನ್ನೂ ಮನೆಗಳನ್ನು ತಲುಪಿಲ್ಲ.

ಕಸವನ್ನು ಮೂಲದಲ್ಲಿ ವಿಂಗಡಿಸಿ ವಿಲೇವಾರಿ ಮಾಡಬೇಕೆಂಬ ಉದ್ದೇಶದಿಂದ ನಗರಸಭೆಯು ಮನೆಮನೆಗೆ ಕಸದ ಡಬ್ಬಿ ವಿತರಿಸಲು ಮುಂದಾಗಿದೆ. ನಗರಸಭೆ ಕೊಡುವ ತಲಾ ಎರಡು ಕಸದ ಡಬ್ಬಿಗಳಲ್ಲಿ ವಿಂಗಡಿತ ಕಸವನ್ನು ಸಂಗ್ರಹಿಸುವ ನಾಗರಿಕರು, ನಿತ್ಯ ತಮ್ಮ ಮನೆ ಬಾಗಿಲಿಗೆ ಬರುವ ಆಟೊ ಟಿಪ್ಪರ್‌ಗೆ ಕಸ ತಂದು ಕೊಡಬೇಕು.

ಘನ ತ್ಯಾಜ್ಯ ನಿರ್ವಹಣೆಯನ್ನು ಸರಾಗಗೊಳಿಸುವುದಕ್ಕಾಗಿ ಮನೆಗಳಿಗೆ ಕಸದ ಡಬ್ಬಿಗಳನ್ನು ಹಂಚುವ ಕಾರ್ಯಕ್ಕೆ, ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಆ. 28ರಂದೇ ಚಾಲನೆ ನೀಡಿದ್ದರು. ಆದರೆ, ಮೂರೂವರೆ ತಿಂಗಳಿಂದ ಹಂಚಿಕೆ ಕಾರ್ಯ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಸಹ ನೆಪ ಹೇಳಿಕೊಂಡು ಬರುತ್ತಿದ್ದಾರೆ.

10 ಸಾವಿರ ವಿತರಣೆ: ‘ಕಸ ವಿಂಗಡಣೆಗಾಗಿ ನೀಲ್‌ ಕಮಲ್‌ ಕಂಪನಿಯ ಡಬ್ಬಿಗಳನ್ನು ಖರೀದಿಸಲಾಗಿದೆ. ಟೆಂಡರ್‌ ಪಡೆದಿರುವವರು ಇದುವರೆಗೆ 22 ಸಾವಿರ ಸಾವಿರ ಕಸದ ಡಬ್ಬಿಗಳನ್ನು ಪೂರೈಕೆ ಮಾಡಿದ್ದಾರೆ. ಆ ಪೈಕಿ, ಇದುವರೆಗೆ ನಗರದ 5 ಸಾವಿರ ಮನೆಗಳಿಗೆ ತಲಾ ಎರಡರಂತೆ 10 ಸಾವಿರ ಡಬ್ಬಿಗಳನ್ನು ವಿತರಣೆ ಮಾಡಲಾಗಿದೆ’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ಸುಬ್ರಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಸಭೆ ಸದಸ್ಯರ ಮೂಲಕವೇ ಕೆಲ ವಾರ್ಡ್‌ಗಳಲ್ಲಿ ಹಂಚಿಕೆ ಕಾರ್ಯ ನಡೆದಿದೆ. ಯಾರಿಗೆ ವಿತರಣೆ ಮಾಡಲಾಗಿದೆಯೋ ಅವರ ಹೆಸರನ್ನು ಸಹ ದಾಖಲಿಸಿಕೊಳ್ಳುತ್ತಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಬಾಕಿ ಉಳಿದಿರುವ ಡಬ್ಬಿಗಳ ವಿತರಣೆ ಕಾರ್ಯಕ್ರಮವನ್ನು ಸಹ ಸದಸ್ಯರ ಮೂಲಕವೇ ವಿತರಣೆ ಮಾಡಲಾಗುವುದು’ ಎಂದರು.

‘ಕಸದ ಡಬ್ಬಿಯನ್ನು ವಿತರಿಸಲೇಬೇಕು ಎಂದೇನಿಲ್ಲ. ಆದರೆ, ನಾಗರಿಕರಲ್ಲಿ ಕಸ ವಿಂಗಡಣೆಯ ಪ್ರಜ್ಞೆ ಬೆಳೆಸಬೇಕಾದರೆ, ಇಂತಹ ಕೆಲಸಗಳು ಅನಿವಾರ್ಯ. ಕಸದ ಡಬ್ಬಿಯನ್ನು ಕೊಟ್ಟು, ವಿಂಗಡಿತ ಕಸವನ್ನು ಕೊಡಿ ಎಂದಾಗ ಅವರಲ್ಲೊಂದು ಕರ್ತವ್ಯ ಪ್ರಜ್ಞೆ ಬೆಳೆಯುತ್ತದೆ. ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಅರಿವು ಮೂಡುತ್ತದೆ’ ಎಂದು ಹೇಳಿದರು.

ಬೇಕಾಬಿಟ್ಟಿ ಮಾಡಬಾರದು: ‘ಕಸ ವಿಂಗಡಣೆ, ಸಂಗ್ರಹಣೆ, ವಿಲೇವಾರಿ ಎಲ್ಲವೂ ವ್ಯವಸ್ಥಿತವಾಗಿ ನಡೆಯಬೇಕು. ಈ ಮೂರರ ಪೈಕಿ ಯಾವ ಹಂತದಲ್ಲಿ ವಿಫಲವಾದರೂ, ಎಲ್ಲವೂ ವ್ಯರ್ಥವಾಗಲಿದೆ. ತ್ಯಾಜ್ಯ ನಿರ್ವಹಣೆ ಕುರಿತು ಈಗಾಗಲೇ ಬೇರೆ ನಗರಗಳಲ್ಲಿ ನಡೆದಿರುವ ಕೆಲಸಗಳನ್ನು ಗಮನಿಸಿ, ನಮ್ಮಲ್ಲೂ ಅಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು’ ಎಂದು ನಗರಸಭೆಯ ಮಾಜಿ ಸದಸ್ಯ ರವಿ ತಿಳಿಸಿದರು.

‘ಘನ ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಅದನ್ನು ಚಾಚು ತಪ್ಪದೆ ಮಾಡಬೇಕಾದ ಜಬಾಬ್ದಾರಿ ಸ್ಥಳೀಯ ಆಡಳಿತ ಸಂಸ್ಥೆಗಳ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.

ಅಧಿಕಾರಿಗಳು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕಸದ ಡಬ್ಬಿಗಳ ಹಂಚಿಕೆ ವಿತರಣೆ ವಿಳಂಬವಾಗಿದೆ. ತ್ವರಿತವಾಗಿ ಮನೆಮನೆಗೆ ತಲುಪಿಸುವಂತೆ ಸೂಚಿಸಲಾಗುವುದು
– ವಿಜಯಕುಮಾರಿ, ಅಧ್ಯಕ್ಷೆ ನಗರಸಭೆ
ಕಸದ ಡಬ್ಬಿ ಪೂರೈಕೆಯ ಟೆಂಡರು ಪಡೆದಿರುವವು ಸದ್ಯ ಒಂದು ಲೋಡ್ ಪೂರೈಕೆ ಮಾಡಿದ್ದು ಮತ್ತೊಂದು ಸದ್ಯದಲ್ಲೇ ಬರಲಿದೆ. ಬಂದ ಬಳಿಕ ಸದಸ್ಯರ ಮೂಲಕ ವಿತರಿಸಲಾಗುವುದು
– ಎಲ್. ನಾಗೇಶ್ ಪೌರಾಯುಕ್ತ ನಗರಸಭೆ

ಸಂಗ್ರಹ ವಿಲೇವಾರಿ ಹಂತದಲ್ಲೇ ವಿಂಗಡಣೆ ಸಮಸ್ಯೆ

ಮನೆ ಮನೆಗಳಿಂದ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಸಂಗ್ರಹಿಸಲು ಮುಂದಾಗಿರುವ ನಗರಸಭೆಯು ತಾನು ಮಾತ್ರ ಅದಕ್ಕಿನ್ನೂ ಪೂರ್ಣವಾಗಿ ತಯಾರಾಗಿಲ್ಲ. ಸದ್ಯ ನಾಗರಿಕರ ಮನೆ ಬಾಗಿಲಿಗೆ ಬರುವ ಆಟೊ ಟಿಪ್ಪರ್‌ಗಳಲ್ಲೂ ವಿಂಗಡಿತ ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಂಡಿಲ್ಲ. ಪೌರ ಕಾರ್ಮಿಕರು ಎಲ್ಲಾ ಕಸವನ್ನು ಒಂದೇ ಕಡೆ ಸುರಿದುಕೊಂಡು ಹೋಗುತ್ತಾರೆ. ಇನ್ನು ನಗರಸಭೆಗೆ ತನ್ನದೇ ಆದ ತ್ಯಾಜ್ಯ ವಿಲೇವಾರಿ ಘಟಕವೂ ಇಲ್ಲ. ಸದ್ಯ ವಿಲೇವಾರಿ ಆಗುತ್ತಿರುವ ಖಾಸಗಿ ಜಾಗದಲ್ಲಿ ಯಾವ ವಿಂಗಡಣೆ ಕೆಲಸವೂ ನಡೆಯುತ್ತಿಲ್ಲ. ಎಲ್ಲಾ ರೀತಿಯ ತ್ಯಾಜ್ಯವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಸುರಿಯಲಾಗುತ್ತಿದೆ. ಇದಕ್ಕೆಲ್ಲಾ ಅಗತ್ಯ ಸಂಖ್ಯೆಯ ಪೌರ ಕಾರ್ಮಿಕರು ಕಸ ಸಂಗ್ರಹಿಸುವ ವಾಹನಗಳು ಹಾಗೂ ಸೂಕ್ತ ಜಾಗ ಬೇಕು. ಅಂತಹ ಮಾನವ ಸಂಪನ್ಮೂಲ ಮತ್ತು ಸೌಕರ್ಯಗಳ ಕೊರತೆಯನ್ನು ನಗರಸಭೆ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT