ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ, ಪೋಷಕಾಂಶಯುಕ್ತ ಆಹಾರ ಸೇವಿಸಿ

ಬಿಡದಿಯಲ್ಲಿ ಪೌಷ್ಟಿಕ ಆಹಾರ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ
Last Updated 27 ನವೆಂಬರ್ 2019, 13:05 IST
ಅಕ್ಷರ ಗಾತ್ರ

ಬಿಡದಿ: ‘ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಆರೋಗ್ಯವಂತ ಸಮಾಜದ ಹೆಗ್ಗುರುತು’ ಎಂದು ಬಾಷ್ ಇಂಡಿಯಾ ಪ್ರತಿಷ್ಠಾನದ ಸಮುದಾಯ ಅಭಿವೃದ್ಧಿ ಅಧಿಕಾರಿ ಸುದರ್ಶನ್ ತಿಳಿಸಿದರು.

ಬಿಡದಿ ಮುತ್ತರಾಯನಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಪೌಷ್ಟಿಕ ಆಹಾರ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ವೈಯಕ್ತಿಕ ಶುಚಿತ್ವ ಮತ್ತು ಪೌಷ್ಟಿಕ ಆಹಾರ ಸೇವನೆ ಮನುಷ್ಯನ ಆರೋಗ್ಯವನ್ನು ವೃದ್ಧಿಸುವುದಲ್ಲದೆ, ತನ್ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೂ ಕಾರಣವಾಗುತ್ತದೆ. ಈ ದಿಕ್ಕಿನಲ್ಲಿ ತಾಯಂದಿರು ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಜತೆಗೆ, ಮಕ್ಕಳಿಗೂ ಬಾಲ್ಯದಿಂದಲೇ ಸ್ವಚ್ಛತೆ ಹಾಗೂ ಪೋಷಕಾಂಶವುಳ್ಳ ಆಹಾರವನ್ನು ಸೇವಿಸುವ ಬಗ್ಗೆ ತಿಳಿ ಹೇಳಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ರೈತ ಸಂಘ- ಹಸಿರು ಸೇನೆ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಮಾತನಾಡಿ, ರಾಗಿ ಮುದ್ದೆ, ಸಿರಿಧಾನ್ಯ ತಿನ್ನುವವರನ್ನು ಬಡವರು ಎಂದು ಭಾವಿಸುವ ಕಾಲವೊಂದಿತ್ತು. ಆದರೆ, ಈಗ ಸಾವಯವ ಸಿರಿಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಬಹುಮುಖ್ಯ ಎಂದು ವೈದ್ಯರೇ ಶಿಫಾರಸು ಮಾಡುತ್ತಿದ್ದಾರೆ. ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರ ನವಧಾನ್ಯಗಳನ್ನು ಬೆಳೆಯುವ ರೈತರಿಗೆ ಬೆಂಬಲ ಬೆಲೆ ನೀಡುವ ಜೊತೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಆರೋಗ್ಯವಂತ ಕೃಷಿಕ ಹಾಗೂ ರೈತ ಮಹಿಳೆ ದೇಶದ ಬೆನ್ನುಲುಬು. ಈ ದಿಕ್ಕಿನಲ್ಲಿ ಗ್ರಾಮೀಣ ಭಾಗದ ತಾಯಂದಿರು ಸ್ವತಃ ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಮಕ್ಕಳಿಗೂ ಪರಿಸರ ಜಾಗೃತಿಯ ಜತೆಗೆ ಸಾವಯವ ಬೇಸಾಯದ ಬಗ್ಗೆಯೂ ಅರಿವು ಮೂಡಿಸಬೇಕು ಎಂದು ತಿಳಿ ಹೇಳಿದರು. ಕ್ಯಾನ್ಸರ್ ಕೇರ್ ಇಂಡಿಯಾದ ಡಾ.ಕಾಮೇಶ್ವರಿ, ವೈಯಕ್ತಿಕ ಸ್ವಚ್ಛತೆ ಹಾಗೂ ಪೌಷ್ಟಿಕ ಆಹಾರ ಸೇವನೆ ಕುರಿತು ಉಪನ್ಯಾಸ ನೀಡಿ, ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗ್ರಾಮೀಣ ಭಾಗದ ಮಹಿಳೆಯರಿಗೆ ಪೌಷ್ಟಿಕ ಆಹಾರ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಆರೋಗ್ಯ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬಾಷ್ ಲಿಮಿಟೆಡ್, ಬಾಷ್ ಇಂಡಿಯಾ ಪ್ರತಿಷ್ಠಾನದ ಕ್ಷೇತ್ರ ನಿರ್ದೇಶಕ ಡಾ.ಪುಂಡಲೀಕ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರೈತ ಸಂಘ- ಹಸಿರು ಸೇನೆಯ ಬಿಡದಿ ಘಟಕದ ಅಧ್ಯಕ್ಷ ಜಯರಾಮ್, ಹೆಜ್ಜಾಲ ಘಟಕದ ಎಚ್.ನರಸಿಂಹಮೂರ್ತಿ, ಪದಾಧಿಕಾರಿಗಳಾದ ರವಿಕುಮಾರ್, ಎನ್.ನರಸಿಂಹಮೂರ್ತಿ, ಶಿವಣ್ಣ, ರಂಗಸ್ವಾಮಯ್ಯ, ವೆಂಕಟರಾಮಪ್ಪ, ಬಾಷ್ ಕಂಪನಿ ಸಿಬ್ಬಂದಿ ಪ್ರಕಾಶ್, ದಯಾನಂದ್, ರತನ್, ಮಮತಾ, ಕ್ಯಾನ್ಸರ್ ಕೇರ್ ಇಂಡಿಯಾದ ಆಶಾ, ಮಮತಾ ಉಪಸ್ಥಿತರಿದ್ದರು.

ಬಾಷ್ ಲಿಮಿಟೆಡ್, ಬಾಷ್ ಇಂಡಿಯಾ ಪ್ರತಿಷ್ಠಾನ, ಕ್ಯಾನ್ಸರ್ ಕೇರ್ ಇಂಡಿಯಾ, ಬಿಡದಿ ಕೈಗಾರಿಕೆಗಳ ಸಂಘ ಹಾಗೂ ಕರ್ನಾಟಕ ರೈತ ಸಂಘ- ಹಸಿರು ಸೇನೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT