ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ‘ಆನೆ ಕಾರ್ಯಪಡೆ’ ರಚನೆಗೆ ಸಿಗದ ಅಸ್ತು

Published 23 ಜೂನ್ 2023, 5:11 IST
Last Updated 23 ಜೂನ್ 2023, 5:11 IST
ಅಕ್ಷರ ಗಾತ್ರ

ರಾಮನಗರ: ಹೆಚ್ಚಾಗಿರುವ ಕಾಡಾನೆಗಳ ದಾಳಿ ತಡೆಗೆ ಕಡಿವಾಣ ಹಾಕಲು ಕಾರ್ಯಾಚರಣೆಗೆ ಇಳಿಯಬೇಕಿದ್ದ ‘ಆನೆ ಕಾರ್ಯಪಡೆ’ ಇನ್ನೂ ರಚನೆಯಾಗಿಲ್ಲ. ಕಾರ್ಯಪಡೆ ರಚನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಸಿದ್ಧಪಡಿಸಿ ಕಳಿಸಿರುವ ಪ್ರಸ್ತಾವಕ್ಕೆ ಮೇಲಧಿಕಾರಿಗಳಿಂದ ಅನುಮೋದನೆ ಸಿಕ್ಕಿಲ್ಲ.

ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕಿನ ಎರಡು ಕಡೆ, ಒಂದೇ ವಾರದಲ್ಲಿ ಇಬ್ಬರನ್ನು ಒಂಟಿ ಸಲಗವೊಂದು ತುಳಿದು ಸಾಯಿಸಿತ್ತು. ಘಟನೆಯ ಮಾರನೇಯ ದಿನವೇ ಜಿಲ್ಲೆಗೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದ ಅರಣ್ಯ ಸಚಿವಈಶ್ವರ ಖಂಡ್ರೆ ಅವರು, ಗಜಗಳ ಹಾವಳಿ ತಡೆಗೆ ‘ಆನೆ ಕಾರ್ಯಪಡೆ’ ರಚನೆಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು.

ಸಚಿವರ ಭೇಟಿ ನೀಡಿ ಹದಿನಾರು ದಿನಗಳಾಗುತ್ತಾ ಬಂದರೂ ಕಾರ್ಯಪಡೆ ಮಾತ್ರ ರಚನೆಯಾಗಿಲ್ಲ. ಇದೀಗ, ಕನಕಪುರದ ಅಚ್ಚಲು ಗ್ರಾಮದಲ್ಲಿ ನಡೆದ ಒಂಟಿಯಾನೆ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಹೇಗಿರಲಿದೆ ಕಾರ್ಯಪಡೆ?: ‘ಕಾಡಾನೆಗಳ ನಿಯಂತ್ರಣಕ್ಕಾಗಿಯೇ ರಚಿಸುವ ಈ ಕಾರ್ಯಪಡೆಗೆ ಸ್ಥಳೀಯವಾಗಿಯೇ 40 ಯುವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆನೆಗಳನ್ನು ನಿಯಂತ್ರಿಸುವ ಬಗ್ಗೆ ಕುರಿತು ಅವರಿಗೆ ವಿಶೇಷ ತರಬೇತಿ ಕೂಡ ನೀಡಲಾಗುತ್ತದೆ. ತಂಡಗಳಾಗಿ ಕೆಲಸ ಮಾಡುವ ಈ ಕಾರ್ಯಪಡೆಯು, ಆನೆಗಳ ಕಾಣಿಸಿಕೊಂಡ ಸ್ಥಳಗಳಲ್ಲಿ ಕಾರ್ಯಾಚರಣ ನಡೆಸುತ್ತದೆ’ ಎಂದು ಡಿಸಿಎಫ್ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ತಂಡದಲ್ಲಿ ಶಸ್ತ್ರಾಸ್ತ್ರ ಹೊಂದಿರುವ ನಮ್ಮ ಇಲಾಖೆಯ ಗಾರ್ಡ್ಸ್ ಇರಲಿದ್ದಾರೆ. ಆನೆ ಇರುವ ಸ್ಥಳಕ್ಕೆ ತಕ್ಷಣ ತಲುಪಲು ವಾಹನ ಒದಗಿಸಲಾಗುವುದು. ಎಲ್ಲರಿಗೂ ಸಮವಸ್ತ್ರ ವಿತರಿಸಲಾಗುವುದು. ಆನೆಗಳು ನಾಡಿಗೆ ಯಾವ ಮಾರ್ಗದಿಂದ ಬರಲಿವೆ? ಚಲನವಲನ ಹೇಗಿದೆ ಎಂಬುದರ ಮಾಹಿತಿ ಹೊಂದಿರಲಿರುವ ಕಾರ್ಯಪಡೆಯು, ಆನೆಗಳನ್ನು ಮತ್ತೆ ಕಾಡಿಗೆ ಹೋಗುವಂತೆ ಮಾಡಿ ಪ್ರಾಣಹಾನಿ ಮತ್ತು ಬೆಳೆಹಾನಿಯಾಗದಂತೆ ನೋಡಿಕೊಳ್ಳಲಿದೆ’ ಎಂದರು.

ವನ್ಯಜೀವಿಗಳ ತಾಣ: ‘ಕನಕಪುರ ಮತ್ತು ರಾಮನಗರದ ಅರಣ್ಯ ಪ್ರದೇಶವು ದ್ವೀಪ ಪ್ರದೇಶದಂತಿದೆ. ಆರೇಳು ಕಿಲೋಮೀಟರ್‌ಗೆ ಅರಣ್ಯ ಪ್ರದೇಶ ಸಿಗುತ್ತದೆ. ಕಬ್ಬಾಳು, ನರಿಕಲ್ಲು ಗುಡ್ಡು, ತೆಂಗಿನಕಲ್ಲು ಗುಡ್ಡ, ಹಂದಿಗುಂದಿ, ಅಚ್ಚಲು ಸೇರಿದಂತೆ ಹೀಗೆಯೇ ಹಲವು ಅರಣ್ಯಗಳು ಸಿಗುತ್ತವೆ. ಪ್ರಾಣಿಗಳಿಗೆ ಕುಡಿಯಲು ಬೇಕಾದ ನೀರಿನ ವ್ಯವಸ್ಥೆ ಕೂಡ ಇಲ್ಲಿದೆ. ಹಾಗಾಗಿ, ಈ ಅರಣ್ಯ ಪ್ರದೇಶಗಳು ವನ್ಯಜೀವಿಗಳ ತಾಣವಾಗಿವೆ’ ಎಂದರು.

‘ಆನೆಗಳ ಕಾಟ ಇರುವ ಕಡೆ ಜನರು ಬೆಳಿಗ್ಗೆ 7.30 ಗಂಟೆ ನಂತರ ಜಮೀನಿಗೆ ಹೋಗಬೇಕು. ಸಂಜೆ 6.30ರೊಳಗೆ ಮನೆ ಸೇರಿಕೊಳ್ಳಬೇಕು. ಆನೆ ಓಡಾಟ ಇರುವ ಜಾಗಗಳಲ್ಲಿ ಎಚ್ಚರಿಕೆಯಿಂದ ಓಡಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT