ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ವಿಷ ಕಾರುವ ಕಾರ್ಖಾನೆಗಳಿಗೆ ಪರಿಸರ ಆಹುತಿ

ಕೈಗಾರಿಕಾ ಪ್ರದೇಶ ಒಂದು ಕಡೆ ವರದಾನ, ಮತ್ತೊಂದಡೆ ಶಾಪಗ್ರಸ್ತ * ಜನರ ಆಕ್ರೋಶ
Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಹಾರೋಹಳ್ಳಿ (ಕನಕಪುರ): ಕೈಗಾರಿಕಾ ಪ್ರದೇಶ ಒಂದು ಕಡೆ ವರದಾನ. ಮತ್ತೊಂದಡೆ ಶಾಪಗ್ರಸ್ತವಾಗಿದೆ. ಸುತ್ತಲಿನ ಸುಂದರ ಪರಿಸರವನ್ನು ಆಹುತಿ ತೆಗೆದುಕೊಂಡು ಜನರ ಆರೋಗ್ಯ ಕಿತ್ತುಕೊಳ್ಳುತ್ತಿದೆ.

ಇಲ್ಲಿನ ಹಾರೋಹಳ್ಳಿ ಬೃಹತ್‌ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಕೈಗಾರಿಕೆಗಳು ಅಪಾರ ಪ್ರಮಾಣದ ವಿಷವನ್ನು ಕಾರುತ್ತಿವೆ. ವಿಷಕಾರಕ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸದೆ ಹೊರವಲಯದಲ್ಲಿರುವ ಕೆರೆ–ಕುಂಟೆ, ಹಳ್ಳ ಕೊಳ್ಳ, ನದಿಗಳಿಗೆ ತಂದು ಸುರಿಯಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಂಡಿದ್ದು ಜನ – ಜಾನುವಾರು ಸಾವನ್ನಪ್ಪುತ್ತಿವೆ.

ಅಂತರ್ಜಲದಲ್ಲೂ ವಿಷಕಾರಿ ಅಂಶಗಳು ಸೇರುತ್ತಿದ್ದು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯ ಅಲ್ಲ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ. ಪ್ರತಿ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕೈಗಾರಿಕಾ ಪ್ರದೇಶದ ಸುತ್ತಲಿನ ಜೀವಂತ ಕೆರೆಗಳು ನಾಶವಾಗಿವೆ. ನದಿಗಳು ಕಲುಷಿತವಾಗಿ ಜಲಜರಗಳು ನಾಶವಾಗಿವೆ. ಗಬ್ಬುನಾರುವ ಚರಂಡಿಗಳು, ಕಸದ ರಾಶಿಯಿಂದ ಕೂಡಿರುವ ರ‍ಸ್ತೆ ಇಕ್ಕೆಲು ಇಲ್ಲಿನ ಸಾಮಾನ್ಯ ದೃಶ್ಯವಾಗಿದೆ.

ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದು ಸ್ಥಳೀಯರ ಆರೋಪ.

ಕಾರ್ಖಾನೆಯಿಂದ ಬರುವ ತ್ಯಾಜ್ಯವನ್ನು ನೇರವಾಗಿ ಕಾಲುವೆ ಮುಖಾಂತರ ಕೆರೆಗಳಿಗೆ ಬಿಡಲಾಗುತ್ತಿದೆ. ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಅಗತ್ಯ ಕ್ರಮಕೈಗೊಂಡಿಲ್ಲ. ಕೈಗಾರಿಕೆ ಪ್ರದೇಶ ಈ ಜನರ ಬದುಕು ಮತ್ತು ಪರಿಸರವನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಹುಳುಗೊಂಡನಹಳ್ಳಿಯ ಚಂದ್ರಶೇಖರ್‌ ಆತಂಕ ವ್ಯಕ್ತಪಡಿಸಿದರು.

ಕೈಗಾರಿಕೆ ಆರಂಭ ಮಾಡುವ ಸಂದರ್ಭದಲ್ಲಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಆದರೆ, ಎಲ್ಲವನ್ನು ಗಾಳಿಗೆ ತೂರಲಾಗಿದೆ. ಕಾರ್ಖಾನೆಗಳ ಮಾಲೀಕರು ವ್ಯವಸ್ಥಿತವಾಗಿ ತ್ಯಾಜ್ಯವನ್ನು ಹೊರಗಡೆ ತಂದು ಸುರಿಯುತ್ತಿದ್ದಾರೆ. ಹಣ ಮಾಡುವ ಧಾವಂತದಲ್ಲಿ ಪರಿಸರ ನಾಶಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಗಮನಹರಿಸಿ ಕ್ರಮಜರುಗಿಸಬೇಕು ಎಂದು ಒತ್ತಾಯಿಸುತ್ತಾರೆ ಯುವ ಮುಖಂಡ ಗೌತಮ್‌ ಎಂ.ಗೌಡ.

ಕೈಗಾರಿಕೆ ತ್ಯಾಜ್ಯ ಹೊರಗಡೆ ತಂದು ಸುರಿಯಲು ಸ್ಥಳೀಯರೊಂದಿಗೆ ಮಾಲೀಕರು ಶಾಮೀಲಾಗಿದ್ದಾರೆ. ಇಲ್ಲವೇ ನಿರ್ಜನ ಪ್ರದೇಶದಲ್ಲಿ ಬೆಂಕಿ ಇಟ್ಟು ಸುಡಲಾಗುತ್ತಿದೆ. ಇವೆಲ್ಲವೂ ಪರಿಸರಕ್ಕೆ ಹಾನಿಕಾರಕ. ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುತ್ತಾರೆ ಬಿಜೆಪಿ ಮುಖಂಡ ಪ್ರಕಾಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT