ಕುದೂರು (ಮಾಗಡಿ ತಾಲ್ಲೂಕು): ಇಲ್ಲಿನ ಭದ್ರಾಪುರ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬರು ಪುರುಷರಿದ್ದು, ಎಲ್ಲರೂ ಮಾಗಡಿಯವರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಮೃತರೆಲ್ಲರೂ ಹುಲಿಯೂರು ದುರ್ಗ ಸಮೀಪದ ಹುಲಿವಾಹನ ಗ್ರಾಮದವರಾಗಿದ್ದು, ಬೆಂಗಳೂರಿನ ಬಾಗಲಗುಂಟೆಯಲ್ಲಿ ನೆಲೆಸಿದ್ದರು. ಪೂಜಾ ಕಾರ್ಯ ನಿಮಿತ್ತ ಗ್ರಾಮಕ್ಕೆ ಕಾರಿನಲ್ಲಿ ಬಂದಿದ್ದ ಕುಟುಂಬದವರು, ವಾಪಸ್ ಹೋಗುವಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.