ಶುಕ್ರವಾರ, ಜೂನ್ 18, 2021
24 °C
ದೊಡ್ಡ ಗಣಪನ ತಯಾರಿಕೆ ಬಂದ್‌; ಸಣ್ಣ ಮೂರ್ತಿಗಳ ತಯಾರಿಕೆಗಿಲ್ಲ ವಿಘ್ನ

ರಾಮನಗರ: ಗಣೇಶ ಮೂರ್ತಿಗೂ ಕೊರೊನಾ ಕಂಟಕ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಹಲವು ನಿರ್ಬಂಧ ಹೇರಿದೆ. ಹೀಗಾಗಿ ದೊಡ್ಡ ಗಾತ್ರದ ಮೂರ್ತಿಗಳ ಉತ್ಪಾದನೆಯೇ ಬಂದ್‌ ಆಗಿದ್ದು, ಮಣ್ಣಿನಲ್ಲಿ ಮಾಡಿದ, ಪರಿಸರ ಸ್ನೇಹಿ ಪುಟ್ಟ ಗಣಪನ ಮೂರ್ತಿಗಳು ಮನೆಯಂಗಳ ಸೇರಲು ಅಣಿಯಾಗುತ್ತಿವೆ.

ತಾಲ್ಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿರುವ ಮೂರ್ನಾಲ್ಕು ಮನೆಗಳ ಅಂಗಳದಲ್ಲಿ ಈಗಾಗಲೇ ಮಣ್ಣಿನ ಗಣಪಗಳು ಬಿಸಿಲು ಕಾಯುತ್ತ ನಿಂತಿವೆ. ಮೂರ್ತಿ ತಯಾರಿಕೆ ಮುಗಿದಿದ್ದು, ಕಲಾವಿದರು ಅವುಗಳಿಗೆ ಬಣ್ಣ ಹಚ್ಚತೊಡಗಿದ್ದಾರೆ. ಪ್ರತಿ ವರ್ಷ ಮನೆಯಲ್ಲಿ ಕೂರಿಸುವ ಸಣ್ಣ ಮೂರ್ತಿಗಳ ಜೊತೆಗೆ ಸಾರ್ವಜನಿಕ ಉತ್ಸವಗಳಿಗೆಂದೇ ದೊಡ್ಡ ಗಾತ್ರದ ಮೂರ್ತಿಗಳನ್ನೂ ಇಲ್ಲಿ ಸಿದ್ದಪಡಿಸಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಮಹಾಮಾರಿ ಕಲಾವಿದರ ಬದುಕಿಗೂ ಸಂಕಷ್ಟ ತಂದೊಡ್ಡಿದೆ. ಬೇಡಿಕೆಯೇ ಇರದ ಕಾರಣ ಇಂತಹ ಮೂರ್ತಿಗಳ ತಯಾರಿಕೆಯನ್ನೇ ಈ ಕುಟುಂಬಗಳು ನಿಲ್ಲಿಸಿವೆ. ಬದಲಾಗಿ ಮನೆಯಲ್ಲಿ ಪ್ರತಿಷ್ಟಾಪಿಸಲು ಅನುವಾಗುವಂತೆ ಸಣ್ಣ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಹಬ್ಬ ಹತ್ತಿರವಾದಂತೆ ಇವುಗಳಿಗೆ ಬೇಡಿಕೆಯೂ ಬರತೊಡಗಿದೆ.

ಪರಿಸರ ಸ್ನೇಹಿ: ಬನ್ನಿಕುಪ್ಪೆ ಗ್ರಾಮದಲ್ಲಿನ ಈ ಕುಟುಂಬಗಳು ಹಲವು ತಲೆಮಾರುಗಳಿಂದಲೂ ಗೌರಿ-ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಹಬ್ಬಕ್ಕೆ ಮೂರು ತಿಂಗಳು ಮುಂಚೆಯೇ ಊರಿನ ಕೆರೆಯಿಂದ ಜೇಡಿ ಮಣ್ಣು ತಂದು, ಅದನ್ನು ಹದ ಮಾಡಿ ಮೂರ್ತಿ ತಯಾರಿಕೆ ಆರಂಭಿಸುತ್ತಾರೆ. ಹಬ್ಬ ಸಮೀಪಿಸಿದಂತೆಲ್ಲ ಕೆಲಸ ಹೆಚ್ಚುತ್ತ ಹೋಗುತ್ತದೆ. ಮನೆಯ ಮಹಿಳೆಯರು, ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಇಲ್ಲಿನ ವಿಶೇಷ. ಅಂತೆಯೇ ಪರಿಸರಕ್ಕೆ ಹಿತವಾದ ಬಣ್ಣಗಳನ್ನೇ ಕಲಾವಿದರು ಬಳಸುತ್ತ ಬಂದಿದ್ದಾರೆ. ರಾಮನಗರ, ಚನ್ನಪಟ್ಟಣ ಮೊದಲಾದ ತಾಲ್ಲೂಕುಗಳ ನಾನಾ ಊರುಗಳ ಜನರು ಪ್ರತಿ ವರ್ಷ ಇಲ್ಲಿಗೇ ಬಂದು ಮೂರ್ತಿ ಖರೀದಿ ಮಾಡಿ ಹೋಗುತ್ತಾರೆ. ಕೆಲವರು ತಿಂಗಳಿಗೆ ಮುಂಚೆಯೇ ಬೇಡಿಕೆ ಸಲ್ಲಿಸಿ ಹೋಗುತ್ತಾರೆ.

ಕೈ ಹಿಡಿಯಷ್ಟು ಪುಟ್ಟ ಗಾತ್ರದ ಗೌರಿಗೆ ₨10-20 ಬೆಲೆಯಿಂದ ಹಿಡಿದು ದೊಡ್ಡ ಸೊಂಡಿಲು, ಹಾವಿನ ಹೆಡೆ ಹೊತ್ತ ದೊಡ್ಡ ಗಾತ್ರದ ಗಣಪನ ಮೂರ್ತಿಗೆ 5 ಸಾವಿರದವರೆಗೂ ಬೆಲೆ ಇದೆ. ಕೊಡುವ ಹಣದ ಮೌಲ್ಯಕ್ಕೆ ತಕ್ಕಂತೆ ಮೂರ್ತಿಗಳ ಗಾತ್ರವೂ ಹೆಚ್ಚುತ್ತ ಹೋಗುತ್ತದೆ.

'ಮೂರ್ನಾಲ್ಕು ತಲೆಮಾರುಗಳಿಂದಲೂ ನಮ್ಮ ಕುಟುಂಬಗಳು ಗ್ರಾಮದಲ್ಲಿ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಹಬ್ಬಕ್ಕೆ ಹಲವು ತಿಂಗಳ ಮುಂಚೆಯೇ ಸಿದ್ಧತೆ ಆರಂಭಗೊಂಡು, ಮನೆ ಮಂದಿಯೆಲ್ಲ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ. ಸಂಪೂರ್ಣ ಜೇಡಿಮಣ್ಣಿನಿಂದ ಮಾಡಿದ ಗಣಪ ನಮ್ಮಲ್ಲಿನ ವಿಶೇಷ. ಕೆಲವರು ಸಾಕಷ್ಟು ಮುಂಚೆಯೇ ಕಾಯ್ದಿರಿಸಿ ಹಬ್ಬದಂದು ಮೂರ್ತಿ ಒಯ್ಯುತ್ತಾರೆ’ ಎನ್ನುತ್ತಾರೆ ಬನ್ನಿಕುಪ್ಪೆ ಗ್ರಾಮದ ಗಣಪತಿ ತಯಾರಕ ಆನಂದ್‌.

'ಈ ಬಾರಿ ಕೊರೊನಾದಿಂದ ದೊಡ್ಡ ಮೂರ್ತಿಗಳಿಗೆ ಬೇಡಿಕೆ ಇಲ್ಲ. ಹೀಗಾಗಿ ಮಧ್ಯಮ ಹಾಗೂ ಸಣ್ಣ ಗಾತ್ರದ ಮೂರ್ತಿಗಳನ್ನಷ್ಟೇ ಮಾಡುತ್ತಿದ್ದೇವೆ. ಕೈಗೆಟಕುವ ದರದಲ್ಲಿ ಮಾರುತ್ತೇವೆ’ ಎನ್ನುತ್ತಾರೆ ಅವರು.

ಕುದುರಲಿದೆಯೇ ಬೇಡಿಕೆ?

ಈ ಬಾರಿಯ ಸಂಕಷ್ಟಹರನ ಚತುರ್ಥಿ ಕೋವಿಡ್ ಸಂಕಷ್ಟ ಕಳೆಯಲಿ ಎಂಬುದು ಜನರ ಮನದ ಬೇಡಿಕೆ. ಗಣೇಶ ಮೂರ್ತಿ ತಯಾರಕರೂ ಅದೇ ವಿಶ್ವಾಸದಲ್ಲಿ ಇದ್ದು, ಹಬ್ಬದ ಹಿಂದಿನ ಕೆಲವು ದಿನಗಳಲ್ಲಾದರೂ ಬೇಡಿಕೆ ಕುದುರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. "ಕಳೆದ ವರ್ಷಗಳಿಗೆ ಹೋಲಿಸಿದರೆ ಸದ್ಯಕ್ಕೆ ಮೂರ್ತಿಗಳಿಗೆ ಬೇಡಿಕೆ ಇಲ್ಲ. ಕೇವಲ ಮನೆಯಲ್ಲಿ ಪೂಜಿಸುವಂತಹ ಮೂರ್ತಿಗಳನ್ನು ಹೆಚ್ಚು ಮಾಡಿದ್ದೇವೆ. ಹೀಗಾಗಿ ಹಬ್ಬದ ಮುನ್ನಾ ದಿನ ಮಾರಾಟ ಹೆಚ್ಚಾಗುವ ನಿರೀಕ್ಷೆ ನಮ್ಮದು’ ಎಂದು ಗಣಪತಿ ತಯಾರಕರಾದ ರಾಮಮೂರ್ತಿ ಹೇಳುತ್ತಾರೆ.

***
ಸರ್ಕಾರದ ನಿಷೇಧದ ಕಾರಣ ಈ ಬಾರಿ ದೊಡ್ಡ ಮೂರ್ತಿಗಳನ್ನು ಮಾಡಿಲ್ಲ. ಸಣ್ಣ ಮೂರ್ತಿಗಳಿಗೆ ಇನ್ನಷ್ಟೇ ಬೇಡಿಕೆ ಬರಬೇಕು
-ಆನಂದ್‌ ಕಲಾವಿದ, ಬನ್ನಿಕುಪ್ಪೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು