ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಡಿ.ಕೆ. ಸುರೇಶ್‌ ವಿರುದ್ಧ ಯೋಗೇಶ್ವರ್ ಮೈತ್ರಿ ಅಭ್ಯರ್ಥಿ?

ದುಬೈನಲ್ಲಿ ಕುಳಿತು ತಂತ್ರ ರೂಪಿಸಿದ ಎಚ್‌ಡಿಕೆ–ಸಿಪಿವೈ; ಡಿ.ಕೆ ಸಹೋದರರನ್ನು ಕಟ್ಟಿಹಾಕಲು ಕೈಜೋಡಿಸಿದ ನಾಯಕರು
Published 3 ನವೆಂಬರ್ 2023, 19:38 IST
Last Updated 3 ನವೆಂಬರ್ 2023, 19:38 IST
ಅಕ್ಷರ ಗಾತ್ರ

ರಾಮನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರನ್ನು ಸೋಲಿಸಲು ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್‌ ಅವರು ದುಬೈನಲ್ಲಿ ಕುಳಿತು ಹೊಸ ತಂತ್ರ ಹೆಣೆದಿದ್ದಾರೆ.

ಡಿ.ಕೆ. ಸುರೇಶ್‌ ಅವರಿಗೆ ಪ್ರಬಲ ಪೈಪೋಟಿ ನೀಡಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸಿ.ಪಿ. ಯೋಗೇಶ್ವರ್ ಅವರನ್ನು ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಬಹುತೇಕ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ.

ಕೆಂಪೇಗೌಡ ಜಯಂತಿ ನೆಪದಲ್ಲಿ ಇತ್ತೀಚೆಗೆ ದುಬೈಗೆ ತೆರಳಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಬಿಜೆಪಿಯ ಸಿ.ಪಿ. ಯೋಗೇಶ್ವರ್ ಈ ವಿಷಯದಲ್ಲಿ ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮೈತ್ರಿ ಬಳಿಕ ರಾಜಕೀಯ ವೈಷಮ್ಯ ಮರೆತು ಒಂದಾಗಿರುವ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರನ್ನು ಸೋಲಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ಮುಂದಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಅವರ ಭದ್ರಕೋಟೆ ರಾಮನಗರದಲ್ಲಿ ತಮ್ಮ ಕಟ್ಟಾ ಬೆಂಬಲಿಗ ಎಚ್‌.ಎ. ಇಕ್ಬಾಲ್ ಹುಸೇನ್ ಅವರನ್ನು ಡಿ.ಕೆ. ಸಹೋದರರು ಗೆಲ್ಲಿಸಿಕೊಂಡು ಬಂದಿದ್ದಾರೆ. ಇಡೀ ಜಿಲ್ಲೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸಹ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವ ಮತ್ತು ಸಾಮರ್ಥ್ಯ ಸಾಬೀತುಪಡಿಸಲು ಸಿಕ್ಕಿರುವ ಅವಕಾಶ ಎಂದು ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಭಾವಿಸಿದ್ದಾರೆ.

ಮೈತ್ರಿ ಏರ್ಪಟ್ಟ ಬೆನ್ನಲ್ಲೇ ಕುಮಾರಸ್ವಾಮಿ ಅವರು, ‘ಗ್ರಾಮಾಂತರ ಕ್ಷೇತ್ರದಿಂದ ನಮ್ಮ ಕುಟುಂಬದವರು ಕಣಕ್ಕಿಳಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಮತ್ತೊಂದೆಡೆ ಯೋಗೇಶ್ವರ್, ‘ನಮ್ಮಿಬ್ಬರ ಕಿತ್ತಾಟದಲ್ಲಿ ಮೂರನೇಯವರಾದ ಡಿ.ಕೆ. ಸಹೋದರರು ಲಾಭ ಪಡೆಯುತ್ತಿದ್ದರು. ನಾವಿಬ್ಬರೂ ಒಂದಾದರೆ, ಸಹೋದರರನ್ನು ಎದುರಿಸಿ ನಿಲ್ಲಬಹುದು. ಆ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸಲು ಸಿದ್ಧ’ ಎಂದು ಹೇಳುತ್ತಲೇ ಬಂದಿದ್ದಾರೆ.

ಅನಾರೋಗ್ಯ ನಿಮಿತ್ತ ಆಸ್ಪತ್ರೆ ಸೇರಿದ್ದ ಕುಮಾರಸ್ವಾಮಿ ಅವರನ್ನು ಯೋಗೇಶ್ವರ್ ಮೂರು ಸಲ ಭೇಟಿ ಮಾಡಿದ್ದರು. ತದ ನಂತರವೂ ಇಬ್ಬರ ಭೇಟಿ ಆಗಾಗ ನಡೆದಿದೆ.

ಕಾಂಗ್ರೆಸ್ ಬಲವೇ ಹೆಚ್ಚು
ಕ್ಷೇತ್ರದಾದ್ಯಂತ ಜೆಡಿಎಸ್ ತನ್ನ ನೆಲೆ ಹೊಂದಿದೆ. ಕನಕಪುರ ಹೊರತುಪಡಿಸಿ ಉಳಿದೆಡೆ ಬಿಜೆಪಿ ಸಹ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ (ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರಿನ ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್) ಎರಡು ಕಡೆ ಬಿಜೆಪಿ, ಒಂದು ಕಡೆ ಜೆಡಿಎಸ್ ಗೆದ್ದಿದ್ದರೆ, ಐದು ಕಡೆ ಕಾಂಗ್ರೆಸ್ ಗೆದ್ದಿದೆ.

‘ಅಧಿಕೃತ ಘೋಷಣೆಯೊಂದೇ ಬಾಕಿ’

‘ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಎಲ್ಲವನ್ನೂ ಮರೆತು ಒಂದಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಬಲಗೈ ಆಗಿರುವ ಸುರೇಶ್ ಅವರನ್ನು ಸೋಲಿಸಿ ಯೋಗೇಶ್ವರ್ ಅವರನ್ನು ಸಂಸತ್ತಿಗೆ ಕಳಿಸುವುದರಿಂದ ಮುಂದೆ ಚನ್ನಪಟ್ಟಣದಲ್ಲಿ ಜೆಡಿಎಸ್‌ ಹಾದಿ ಮತ್ತಷ್ಟು ಸುಗಮವಾಗಲಿದೆ. ಹಾಗಾಗಿ, ಅವರೇ ಅಭ್ಯರ್ಥಿಯಾಗಲಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯದಶಮಿ ಬಳಿಕ ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಎರಡೂ ಪಕ್ಷಗಳ ನಾಯಕರು ಹೇಳಿದ್ದರು. ಸದ್ಯ ಬಿಜೆಪಿ ನಾಯಕರು ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕ್ಷೇತ್ರ ಹಂಚಿಕೆ ಸ್ವಲ್ಪ ತಡವಾಗಬಹುದು. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯಬೇಕೆಂಬುದು ಈಗಾಗಲೇ ನಿರ್ಧಾರವಾಗಿದೆ ಎನ್ನುತ್ತವೆ ಎರಡೂ ಪಕ್ಷಗಳ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT