ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯ ಸರಿಪಡಿಸುವಂತೆ ಒತ್ತಾಯ

371 ಜೆ. ವಿಶೇಷ ಕಾಯ್ದೆಯಿಂದ ದಕ್ಷಿಣ ಕರ್ನಾಟಕದ ಜನತೆಗೆ ಅನ್ಯಾಯ ಆರೋಪ
Published 30 ಮೇ 2024, 7:17 IST
Last Updated 30 ಮೇ 2024, 7:17 IST
ಅಕ್ಷರ ಗಾತ್ರ

ಕನಕಪುರ: ‘ಉತ್ತರ ಕರ್ನಾಟಕದ ಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳು, 371 ಜೆ ವಿಶೇಷ ಕಾಯ್ದೆಯಿಂದ ದಕ್ಷಿಣ ಕರ್ನಾಟಕದ ಜನತೆಗೆ ಅನ್ಯಾಯ ಆಗುತ್ತಿದೆ’ ಎಂದು ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಹಸಿರು ಪ್ರತಿಷ್ಠಾನ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 371 ಜೆ ಕಾಯ್ದೆ ಕೈಬಿಡುವಂತೆ ಒತ್ತಾಯಿಸಿ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.

ಸರ್ಕಾರವು ಉತ್ತರ ಕರ್ನಾಟಕದ ಜನತೆ ಅತ್ಯಂತ ಹಿಂದುಳಿದಿದ್ದಾರೆ ಎಂದು ಅವರ ಅಭಿವೃದ್ಧಿಗೆ 371 ಜೆ ವಿಶೇಷ ಕಾಯ್ದೆ ಜಾರಿಗೊಳಿಸಿದೆ. ಆದರೆ ಇದರಿಂದ ರಾಜ್ಯದ 7 ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಯ ಜನತೆಗೆ ಎಲ್ಲಾ ಹಂತದಲ್ಲೂ ಅನ್ಯಾಯ ಆಗುತ್ತಿದೆ ಎಂದು ದೂರಿದರು.

ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ ಮಾತನಾಡಿ, ಆ ಭಾಗದ ಜನರಿಗೆ ಅವಕಾಶ ಕೊಡುವುದು ಬೇಡವೆಂದು ಹೇಳುವುದಿಲ್ಲ. ಆದರೆ ಅದರ ಹೆಸರಿನಲ್ಲಿ ರಾಜ್ಯದ 24 ಜಿಲ್ಲೆಯ ಜನತೆಗೆ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರ ಗಮನಿಸಬೇಕಿದೆ ಎಂದರು.

ಸರ್ಕಾರಿ ಉದ್ಯೋಗ ಪಡೆಯುವುದರಲ್ಲಿ, ಶಿಕ್ಷಣ ಪಡೆಯುವುದರಲ್ಲಿ, ಉದ್ಯೋಗದಲ್ಲಿ ಮುಂಬಡ್ತಿ ಪಡೆಯುವುದರಲ್ಲಿ ಕಲ್ಯಾಣ ಕರ್ನಾಟಕದ ಜನತೆಗೆ ಮಾತ್ರ ಲಾಭವಾಗುತ್ತಿದೆ. ಉಳಿದ ಜಿಲ್ಲೆಯ ಜನತೆಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಸಾವಿರಾರು ಕೋಟಿ ಅನುದಾನವನ್ನು ಪ್ರತಿ ವರ್ಷ ಕೊಡಲಾಗುತ್ತಿದೆ. ಆದರೆ ಅಲ್ಲಿ ಶ್ರೀಮಂತರಾದವರೇ ಶ್ರೀಮಂತರಾಗುತ್ತಿದ್ದಾರೆ ಎಂದು ದೂರಿದರು.

ಹೈದರಾಬಾದ್ ಕರ್ನಾಟಕ ಹುದ್ದೆಗಳನ್ನು ಪ್ರತ್ಯೇಕವಾಗಿ ನೇಮಕ ಮಾಡುತ್ತಿರುವುದರಿಂದ ಕರ್ನಾಟಕದ ಇತರೆ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಅದೇ ರೀತಿ ಹುದ್ದೆಯಲ್ಲಿ ಬಡ್ತಿ ಕೊಡುತ್ತಿರುವುದರಿಂದ ಅನ್ಯಾಯವಾಗುತ್ತಿದೆ. ಈ ಅಸಮತೋಲನ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಅರ್ಹತೆ ಮತ್ತು ಜ್ಯೇಷ್ಠತೆ ಮೇಲೆ ಅವಕಾಶ ಕಲ್ಪಿಸಬೇಕು. ಇದರ ವಿರುದ್ಧ ಸರ್ಕಾರಿ ನೌಕರರು ಧ್ವನಿ ಎತ್ತಬೇಕು. ಶಾಸಕರು, ಸಂಸದರು ಸದನದಲ್ಲಿ ಇದರ ಬಗ್ಗೆ ಮಾತನಾಡಿ ಅಸಮತೋಲನವನ್ನು ಸರಿಪಡಿಸಬೇಕಿದೆ ಎಂದು ಆಗ್ರಹಿಸಿದರು.

ಒತ್ತಾಯದ ಮನವಿ ಪತ್ರವನ್ನು ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಗ್ರೇಡ್ 2 ತಹಶೀಲ್ದಾರ್ ವಸಂತ ಮನವಿ ಸ್ವೀಕರಿಸಿದರು.

ಚಿಕ್ಕೆಂಪೇಗೌಡ, ನಾಗರಾಜು, ಕೂಗಿ ಗಿರಿಯಪ್ಪ, ಯು.ಎ.ಸ್ವಾಮಿಗೌಡ, ಕಾಂತರಾಜು, ಆನಮಾನಹಳ್ಳಿ ನಾಗರಾಜು, ಎಲ್ಲೇಗೌಡ ಬೆಸಗರಹಳ್ಳಿ, ಕೆ.ಆರ್.ಸುರೇಶ್, ಜೀರ್ಣಕುಪ್ಪೆ ರಾಜೇಶ್, ಚಿಕ್ಕರಂಗೆಗೌಡ, ಪ್ರಶಾಂತ್, ಅಜ್ಗರ್ ಖಾನ್, ಗಿರೀಶ್, ಚೀಲೂರು ಮುನಿರಾಜು, ನಲ್ಲಳ್ಳಿ ಶ್ರೀನಿವಾಸ್, ಶ್ರೀನಿವಾಸ್, ರವೀಶ್ ಗೌಡ, ವೇಣುಗೋಪಾಲ್, ಮಂಜುನಾಥ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT