ಮಂಗಳವಾರ, ಏಪ್ರಿಲ್ 20, 2021
27 °C

ಕೆಂಪು–ಹಳದಿ ಶಾಲು ಹಾಕಿಕೊಂಡವರನ್ನು ಕಂಡರೆ ಭಯ: ಸುದೀಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಈಗೀಗ ಯಾರಾದರೂ ಕೆಂಪು–ಹಳದಿ ಶಾಲು ಹಾಕಿಕೊಂಡು ನನ್ನ ಮನೆ ಮುಂದೆ ಬಂದು ನಿಂತರೆ ನನಗೆ ಭಯ–ಗೊಂದಲ ಆಗುತ್ತಿದೆ’ ಎಂದು ನಟ ಸುದೀಪ್‌ ನಗೆ ಚಟಾಕಿ ಹಾರಿಸಿದರು.

ದುಬೈನ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಕನ್ನಡ ಬಾವುಟ ಪ್ರದರ್ಶನ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ಈ ಶಾಲು ಹಾಕಿಕೊಂಡವರನ್ನು ಕಂಡರೆ ಅವರು ನಮ್ಮನ್ನು ಹೊಗಳಲು ಬಂದಿದ್ದಾರ ಇಲ್ಲ ಹೊಡೆಯಲು ಬಂದಿದ್ದಾರ ಎನ್ನುವ ಗೊಂದಲ ಆಗುತ್ತದೆ’ ಎಂದರು.

ಜಗ್ಗೇಶ್‌ರಿಗೆ ದರ್ಶನ್‌ ಅಭಿಮಾನಿಗಳಿಂದ ಘೇರಾವ್ ಕುರಿತು ಮಾತನಾಡಿದ ಸುದೀಪ್‌ ‘ಒಬ್ಬ ಕಲಾವಿದನಿಗೆ ನಾಡಿನಾದ್ಯಂತ ಸಾವಿರಾರು ಅಭಿಮಾನಿಗಳು ಇದ್ದಾರೆ. ನೀವು ಆ ಕಲಾವಿದನಿಗೆ ಬಯ್ಯಲು ಬಂದಾಗ ಅವನೊಬ್ಬನೇ ಇರಬಹುದು. ಯಾವುದೇ ವ್ಯಕ್ತಿಯಿಂದ ತಪ್ಪಾದರೂ ಅದರ ವಿರುದ್ಧ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ರಿಯಿಸಬೇಡಿ. ಸಮಾಧಾನವಾಗಿ ಕುಳಿತು ಆ ಬಗ್ಗೆ ವಿಚಾರ ಮಾಡಿ ನಂತರ ತೀರ್ಮಾನಕ್ಕೆ ಬನ್ನಿ’ ಎಂದು ಸಂಘಟನೆಗಳ ಸದಸ್ಯರಿಗೆ ಸಲಹೆ ನೀಡಿದರು.

ಗೊಂದಲ ಬಗೆಹರಿಸಿಕೊಳ್ಳಿ: ನಾಡಿನ ಕನ್ನಡಪರ ಸಂಘಟನೆಗಳಲ್ಲೇ ಗೊಂದಲ ಇದೆ. ಮೊದಲು ನೀವು ಕುಳಿತುಕೊಂಡು ಮಾತನಾಡಿ ನಿಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಸುದೀಪ್‌ ಕಿವಿಮಾತು ಹೇಳಿದರು.

‘ಕನ್ನಡ ಮಾತನಾಡಲು ಬಂದರೆ ಬಯ್ಯುತ್ತೀರಾ. ಬರದೇ ಹೋದರೂ ಬಯ್ಯುತ್ತೀರಾ. ಅನ್ಯಭಾಷಿಕರು ನಮ್ಮಲ್ಲಿ ಬಂದು ಕನ್ನಡ ಮಾತನಾಡುತ್ತಾರೆ ಎಂದರೆ ಅವರನ್ನು ಹಂಗಿಸಬಾರದು. ಅವರು ಯಾವ ರೀತಿ ಮಾತನಾಡುತ್ತಾರೆ ಎಂಬುದು ಮುಖ್ಯ ಅಲ್ಲ. ಅವರ ಪ್ರಯತ್ನವನ್ನು ಶ್ಲಾಘಿಸಬೇಕು. ಎಲ್ಲ ಭಾಷೆ ಬಗ್ಗೆ ನಮಗೆ ಅಭಿಮಾನ ಇರಬೇಕು’ ಎಂದರು.

"ಕನ್ನಡವನ್ನು ಉಳಿಸಬೇಕು ಎಂದು ಯಾರೂ ಹೇಳಬಾರದು. ಏಕೆಂದರೆ ನಮ್ಮ ಭಾಷೆಯನ್ನು ಕಿತ್ತುಕೊಳ್ಳುವ ತಾಕತ್ತು ಯಾರಿಗೂ ಇಲ್ಲ. ಹೀಗಾಗಿ ನಾವೆಲ್ಲ ಕನ್ನಡ ಬೆಳೆಸೋಣ ಎನ್ನಬೇಕು. ಭಾಷೆ ಬರದವರಿಗೆ ಕನ್ನಡ ಕಲಿಸುವ ಪ್ರಯತ್ನ ಆಗಬೇಕು’ ಎಂದು ಆಶಿಸಿದರು.

ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಈ ಸಂದರ್ಭ ಸುದೀಪ್‌ರನ್ನು ಅಭಿನಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು