ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಬಸ್ ಕೊರತೆ: ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ

Published 18 ಜನವರಿ 2024, 6:53 IST
Last Updated 18 ಜನವರಿ 2024, 6:53 IST
ಅಕ್ಷರ ಗಾತ್ರ

ರಾಮನಗರ: ನಗರದಿಂದ ಬೆಂಗಳೂರಿಗೆ ಹೋಗಲು ಬೆಳಿಗ್ಗೆ ಒಂದು ಗಂಟೆಯಾದರೂ ಕೆಎಸ್ಆರ್‌ಟಿಸಿ ಬಸ್‌ಗಳು ಸರಿಯಾಗಿ ಬಾರದಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು, ಇಲ್ಲಿನ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕೆಲಸಕ್ಕೆ ಹೋಗುವ ಉದ್ಯೋಗಿಗಳು, ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ 300ಕ್ಕೂ‌ ಹೆಚ್ಚು ಜನರು ಬೆಳಿಗ್ಗೆ 7ರಿಂದಲೇ ನಿಲ್ದಾಣದಲ್ಲಿ ಜಮಾಯಿಸಿದ್ದರು. ಸಮಯಕ್ಕೆ ಸರಿಯಾಗಿ ಬಸ್‌ಗಳು ಬರಲಿಲ್ಲ. ಕಾದು‌ ಹೈರಾಣಾದ ಪ್ರಯಾಣಿಕರು ಪ್ರತಿಭಟನೆ ಆರಂಭಿಸಿದರು.

ಆಗಷ್ಟೇ ಬಂದ ಹತ್ತಲು ಜಾಗವಿಲ್ಲದಂತೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ಸು ತಡೆದು ಆಕ್ರೋಶ ಹೊರಹಾಕಿದರು. ನಿಲ್ದಾಣದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಮನಗರಕ್ಕೆ ಮೈಸೂರು ಕಡೆಯಿಂದ ಬರುವ ಬಸ್‌ಗಳು ಕಿಕ್ಕಿರಿದು ತುಂಬಿದ್ದು ರಾಮನಗರದಲ್ಲಿ ಬಸ್‌ ಹತ್ತಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ, ಸಮಸ್ಯೆ ಬಗೆಹರಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಬಸ್ ತಡೆಯದಂತೆ ಉದ್ರಿಕ್ತ ಪ್ರಯಾಣಿಕರ ಮನವೊಲಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಜನರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ, ಸಂಚಾರ ಠಾಣೆ ಪಿಎಸ್ಐ ಅಲ್ಲಾವುದ್ದೀನ್ ಅವರು ಪ್ರಯಾಣಿಕರನ್ನು ಸಮಾಧಾನಪಡಿಸಿದರು. ನಂತರ ಜನರು ಪ್ರತಿಭಟನೆ ನಿಲ್ಲಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT