ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಮುಂಗಾರು ಪೂರ್ವ ಬಿತ್ತನೆಗೆ ಮಳೆ ಕೊರತೆ

ಮೇನಲ್ಲಿ ವಾಡಿಕೆಗಿಂತ ಅರ್ಧದಷ್ಟು ಕಡಿಮೆ ವರ್ಷಧಾರೆ: ಎಳ್ಳು, ದ್ವಿದಳ ಧಾನ್ಯ ಕೃಷಿ ಕುಂಠಿತ
Last Updated 19 ಮೇ 2020, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಮುಂಗಾರು ಪೂರ್ವದಲ್ಲಿನ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಮುಂದಿನ ಕೆಲವು ದಿನ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಕಳೆದ ಏಪ್ರಿಲ್‌ನಲ್ಲಿ ಜಿಲ್ಲೆಯಾದ್ಯಂತ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿದಿತ್ತು. ಅದರಲ್ಲೂ ರಾಮನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿತ್ತು. ಇದರಿಂದಾಗಿ ಕೆರೆ-ಕಟ್ಟೆಗಳು ತಕ್ಕ ಮಟ್ಟಿಗೆ ನೀರು ಕಂಡಿದ್ದವು. ಈ ತಿಂಗಳಲ್ಲಿ 48 ಮಿ.ಮೀ. ವಾಡಿಕೆ ಮಳೆ ಇದ್ದು, ಅದಕ್ಕೆ ಪ್ರತಿಯಾಗಿ 83 ಮಿ.ಮೀ. ಮಳೆಯಾಗಿತ್ತು. ಆದರೆ, ಮೇನಲ್ಲಿ ವಾಡಿಕೆ ಮಳೆಗಿಂತ ಶೇ50ರಷ್ಟು ಮಳೆ ಪ್ರಮಾಣ ಕುಸಿದಿದೆ. ಈ ತಿಂಗಳ ಆರಂಭದಿಂದ ಮಳೆ ಕೊರತೆ ಇದ್ದು, ಹದಿನೈದು ಕಾರಣ ಮಳೆ ಬಿದ್ದಿರಲಿಲ್ಲ. ಕಳೆದ ಎರಡು ದಿನದ ಭಾಗಶಃ ಮಳೆ ಸುರಿದಿದ್ದು, ಚನ್ನಪಟ್ಟಣ ಉತ್ತಮ ಮಳೆ ಕಂಡಿದೆ. ಇದೇ 18ರವರೆಗೆ 66 ಮಿ.ಮೀ. ವಾಡಿಕೆ ಮಳೆ ಇದ್ದು, ಅದಕ್ಕೆ ಪ್ರತಿಯಾಗಿ 33 ಮಿ.ಮೀ. ಮಳೆ ಮಾತ್ರ ಬಿದ್ದಿದೆ.

ಬಿತ್ತನೆಗೆ ಹಿನ್ನೆಡೆ: ಮಳೆ ಕೊರತೆಯಾಗಿರುವ ಕಾರಣ ಸಹಜವಾಗಿಯೇ ಕೃಷಿ ಚಟುವಟಿಕೆಗೆ ಹಿನ್ನೆಡೆ ಆಗಿದೆ. ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಕೃಷಿಕರು ಈಗಾಗಲೇ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಮಳೆಯಿಲ್ಲದೆ ಜಮೀನು ಉಳುಮೆ ಮಾಡಲಾಗದೇ ಕೈ ಚೆಲ್ಲುವ ಪರಿಸ್ಥಿತಿ ಇದೆ. ಇದೇ 16ಕ್ಕೆ ಕೊನೆಗೊಂಡಂತೆ ರಾಮನಗರದಲ್ಲಿ 297 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳು, ಚನ್ನಪಟ್ಟಣದಲ್ಲಿ 155 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ದ್ವಿದಳ ಧಾನ್ಯ ಹಾಗೂ 133 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಸೇರಿದಂತೆ 291 ಹೆ.ನಲ್ಲಿ ಬಿತ್ತನೆ ನಡೆದಿದೆ.

ಕನಕಪುರದಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಳ್ಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ಬಾರಿ 3300 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಇದರಲ್ಲಿ 725 ಹೆಕ್ಟೇರ್‌ನಲ್ಲಿ ಮಾತ್ರ ಎಳ್ಳು ಬೆಳೆಯಲಾಗಿದೆ. ಮಾಗಡಿಯಲ್ಲಿ ಮುಂಗಾರು ಪೂರ್ವದಲ್ಲಿ ತೊಗರಿ, ಅಲಸಂದೆ ಮೊದಲಾದ ಧಾನ್ಯಗಳ ಬಿತ್ತನೆಯ ವಾಡಿಕೆ ಇದೆ. ಹೀಗಾಗಿ ಇಲ್ಲಿಯೂ 5 ಸಾವಿರ ಹೆಕ್ಟೇರ್‌ಗೆ ಪ್ರತಿಯಾಗಿ ಕೇವಲ 1200 ಹೆಕ್ಟೇರ್‌ನಲ್ಲಿ ಮಾತ್ರ ರೈತರು ದ್ವಿದಳ ಧಾನ್ಯಗಳನ್ನು ಬಿತ್ತಿದ್ದಾರೆ.

’ಈ ತಿಂಗಳ ಆರಂಭದ ಹದಿನೈದು ದಿನ ಮಳೆ ಇರಲಿಲ್ಲ. ಹೀಗಾಗಿ ಕನಕಪುರ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಸಾಕಷ್ಟು ಹಿನ್ನಡೆ ಆಗಿದೆ. ಆದರೆ, ಸದ್ಯ ಮಳೆಯ ವಾತಾವರಣ ಇದೆ. ಇನ್ನು ಕೆಲವು ದಿನ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನಮ್ಮಲ್ಲಿ ಜೂನ್‌ ಮಧ್ಯಭಾಗದಿಂದ ರಾಗಿ ಬಿತ್ತನೆ ಆರಂಭಗೊಳ್ಳಲಿದ್ದು, ಮುಂಗಾರು ಉತ್ತಮವಾದರೆ ಕೃಷಿ ಚಟುವಟಿಕೆಯೂ ಉತ್ತಮವಾಗಿ ಇರಲಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್‌. ರವಿ.

ಗೊಬ್ಬರ, ಬೀಜ ದಾಸ್ತಾನು: ಜಿಲ್ಲೆಯ ರೈತರಿಗೆ ಅಗತ್ಯವಾದಷ್ಟು ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ಜಿಲ್ಲೆಯಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 315 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನು ಸಂಗ್ರಹಿಸಲಾಗಿದ್ದು, ಇದರಲ್ಲಿ ಈಗಾಗಲೇ 146 ಕ್ವಿಂಟಲ್‌ ಅನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಇನ್ನೂ 168 ಕ್ವಿಂಟಲ್‌ ಬೀಜ ಉಳಿದಿದೆ.

*
ಮಳೆ ಕೊರತೆಯಿಂದ ಕನಕಪುರದಲ್ಲಿ ಎಳ್ಳು ಹಾಗೂ ಮಾಗಡಿಯಲ್ಲಿ ದ್ವಿದಳ ಧಾನ್ಯ ಹೆಚ್ಚು ಬಿತ್ತನೆ ಆಗಿಲ್ಲ. ಮುಂದಿನ ಕೆಲ ದಿನದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ.
-ಕೆ.ಎಚ್. ರವಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT