ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಬಿಸಿಯೂಟಕ್ಕೆ ‘ಸಾರವರ್ಧಿತ ಅಕ್ಕಿ’: ಕೃತಕ ಕಾಳು ವಿನ್ಯಾಸ!

ಪೌಷ್ಟಿಕಾಂಶ ಸೇರಿಸಿ ಕೃತಕ ಕಾಳು ವಿನ್ಯಾಸ: ಶೇ 10ರಷ್ಟು ಮಿಶ್ರಣ
Last Updated 27 ಅಕ್ಟೋಬರ್ 2021, 21:00 IST
ಅಕ್ಷರ ಗಾತ್ರ

ರಾಮನಗರ: ಶಾಲಾ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಿಸಿಯೂಟದಲ್ಲಿ ‘ಸಾರವರ್ಧಿತ ಅಕ್ಕಿ’ ಸೇರ್ಪಡೆಗೊಳಿಸಿ ವಿತರಣೆ ಆರಂಭಿಸಿದೆ.

ಸದ್ಯ ರಾಜ್ಯದಾದ್ಯಂತ ಶಾಲೆಗಳು ಆರಂಭ ಆಗಿದ್ದು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಉಣ ಬಡಿಸಲಾಗುತ್ತಿದೆ. 1ರಿಂದ 8ನೇ ತರಗತಿ ಮಕ್ಕಳ ಬಿಸಿಯೂಟಕ್ಕೆ ಬೇಕಾದ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದರಲ್ಲಿ ಪ್ರತಿ ಕ್ವಿಂಟಲ್‌ಗೆ 10 ಕೆ.ಜಿ.ಯಂತೆ (ಶೇ 10) ಈ ‘ಸಾರವರ್ಧಿತ ಅಕ್ಕಿ’ ಬೆರೆಸಿ ಕೊಡಲಾಗಿದೆ.

ಕೃತಕ ಕಾಳು: ಅಂದ ಹಾಗೆ ಇದು ನಿಜವಾದ ಅಕ್ಕಿ ಅಲ್ಲ. ಅಕ್ಕಿ ರೂಪದಲ್ಲಿ ವಿನ್ಯಾಸಗೊಳಿಸಲಾದ ಸಾರವರ್ಧಿತ ಕಾಳು. ಕಬ್ಬಿಣಾಂಶ, ಸತು, ಪೋಲಿಕ್‌ ಆ್ಯಸಿಡ್, ವಿಟಮಿನ್ ಎ, ವಿಟಮಿನ್ ಬಿ12 ಮೊದಲಾದ ಅಂಶಗಳನ್ನು ಬೆರೆಸಿ ಅದಕ್ಕೆ ಅಕ್ಕಿಯ ಕಾಳಿನ ರೂಪ ಕೊಡಲಾಗಿದೆ. ನೋಡಲು ಸಾಮಾನ್ಯ ಅಕ್ಕಿಗಿಂತ ಕೊಂಚ ಉದ್ದ ಹಾಗೂ ದಪ್ಪವಿದೆ. ದೇಶದ ನಾನಾ ಭಾಗಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಮಕ್ಕಳ ಸೇವನೆಗೆ ಯೋಗ್ಯ ಎಂದು ಖಾತ್ರಿಯಾದ ಬಳಿಕವಷ್ಟೇ ಇದನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಲಕ್ಷಾಂತರ ಶಾಲಾ ಮಕ್ಕಳು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಸುತ್ತಿದ್ದಾರೆ. ಇಂತಹವರಿಗೆ ಪೌಷ್ಟಿಕಾಂಶದ ಮಾತ್ರೆಗಳನ್ನು ಕೊಟ್ಟರೂ ನುಂಗುವುದಿಲ್ಲ. ಹೀಗಾಗಿ ಮಾಮೂಲಿ ಅಕ್ಕಿಯ ಜೊತೆಯಲ್ಲೇ ಈ ಸಾರವರ್ಧಿತ ಕಾಳನ್ನು ಸೇರಿಸಿ ನೀಡಲಾಗುತ್ತಿದೆ. ಸದ್ಯ ಶಾಲೆಗೆ ಬಂದ ಮಕ್ಕಳ ದೇಹದ ತೂಕ ಪಡೆಯಲಾಗಿದ್ದು, ತಿಂಗಳು ಬಿಟ್ಟು ಮತ್ತೆ ಮಕ್ಕಳ ತೂಕ ಮಾಡಲಾಗುತ್ತದೆ. ಅವರಲ್ಲಿನ ಬದಲಾವಣೆ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಲಾಗುತ್ತದೆ ಎನ್ನುತ್ತಾರೆ ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು.

ಗೊಂದಲ ನಿವಾರಣೆ: ಬಿಸಿಯೂಟ ಆರಂಭದ ದಿನದಂದು ಶಾಲೆಗಳಲ್ಲಿನ ಅಡುಗೆ ಸಿಬ್ಬಂದಿ ಈ ಹೊಸ ಅಕ್ಕಿಯನ್ನು ಕಂಡು ಗಾಬರಿ ಬಿದ್ದಿದ್ದರು. ಪ್ಲಾಸ್ಟಿಕ್ ಅಕ್ಕಿ ಬೆರಕೆ ಆಗಿದೆ ಎನ್ನುವ ಗೊಂದಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮೈಸೂರಿನ ಪ್ರಯೋಗಾಲಯದಲ್ಲಿ ಬುಧವಾರ ಪರೀಕ್ಷೆಗೆ ಒಳಪಡಿಸಿ ಇದು ‘ಸಾರವರ್ಧಿತ ಅಕ್ಕಿ’ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿಕ್ಷಕರಿಗೆ ತಿಳಿವಳಿಕೆ ನೀಡುವುದಾಗಿ ಅಕ್ಷರ ದಾಸೋಹ ಯೋಜನೆಯ ಸಿಬ್ಬಂದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT