ಬುಧವಾರ, ಜುಲೈ 28, 2021
21 °C

ಶ್ಯಾನುಭೋಗನಹಳ್ಳಿ: ಪ್ರತಿದಿನ 2500 ಲೀಟರ್ ಹಾಲು ನಷ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತಾಲ್ಲೂಕಿನ ಶ್ಯಾನುಭೋಗನಹಳ್ಳಿಯಲ್ಲಿ ಪ್ರತಿನಿತ್ಯ 2500 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಗ್ರಾಮದ ಯುವಕನೊಬ್ಬನಿಗೆ ಕೊರೊನಾ ವೈರಸ್ ಪತ್ತೆಯಾದ ನಂತರ ಈ ಹಾಲನ್ನು ರೈತರು ಪ್ರತಿದಿನ ನೆಲಕ್ಕೆ ಚೆಲ್ಲುವಂತಾಗಿದೆ.
ಗ್ರಾಮದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಜಿಲ್ಲಾಡಳಿತದ ಆದೇಶದಂತೆ ಮುಚ್ಚಲಾಗಿದೆ. ಗ್ರಾಮದಲ್ಲಿ ಉತ್ಪಾದನೆಯಾಗುವ ಹಾಲು ಕೇಳುವವರಿಲ್ಲದೆ ರೈತರು ಗಿಡಗಳಿಗೆ, ಬಾವಿಗೆ, ಹುತ್ತಗಳಿಗೆ ಹಾಕುವಂತಾಗಿದೆ.

ಗ್ರಾಮದಲ್ಲಿ ಹೈನುಗಾರಿಕೆ ಪ್ರಮುಖ ಕಸುಬಾಗಿದೆ. ಪ್ರತಿದಿನ ಬೆಳಿಗ್ಗೆ 1300 ಲೀಟರ್ ಹಾಗೂ ಸಂಜೆ 1200 ಲೀಟರ್ ಸೇರಿ ಒಟ್ಟು 2500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ವಿಧಿ ಇಲ್ಲದೆ ರೈತರು ನೆಲಕ್ಕೆ ಸುರಿಯುವಂತಾಗಿದೆ ಎಂದು ಗ್ರಾಮದ ಎಂಪಿಸಿಎಸ್ ಕಾರ್ಯದರ್ಶಿ ಮಾದಪ್ಪ ತಿಳಿಸಿದರು.

ಹಾಲು ಕರೆಯದೆ ಹೋದರೆ ಹಸುಗಳಿಗೆ ತೊಂದರೆಯಾಗುತ್ತದೆ. ರೋಗಗಳು ಬರುವ ಸಂಭವ ಹೆಚ್ಚು. ಹಾಲು ಕರೆದರೆ ಕೊಂಡುಕೊಳ್ಳಲು ಎಂಪಿಸಿಎಸ್ ಇಲ್ಲ. ಬೇರೆಡೆಗೆ ತೆಗೆದುಕೊಂಡು ಹೋಗಲು ಅಲ್ಲಿ ಕೊರೊನಾ ವೈರಸ್ ಗ್ರಾಮವೆಂದು ಹಾಲು ತೆಗೆದುಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಾಲು ಚೆಲ್ಲದೆ ವಿಧಿಯಿಲ್ಲ ಎಂದು ಗ್ರಾಮದ ರೈತರಾದ ರವಿ, ಸತೀಶ್, ಮಹೇಶ್ ತಿಳಿಸುತ್ತಾರೆ.

ಕಳೆದ ನಾಲ್ಕು ದಿನಗಳಿಂದ ಎಂಪಿಸಿಎಸ್ ಸ್ಥಗಿತವಾಗಿರುವ ಕಾರಣ ಗ್ರಾಮದ ರೈತರಿಗೆ 10 ಸಾವಿರ ಲೀಟರ್ ಹಾಲು ನಷ್ಟವಾಗಿದೆ. ಎಂಪಿಸಿಎಸ್ ಪುನರಾರಂಭವಾಗುವವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರೆಯುತ್ತದೆ. ಅಲ್ಲಿವರೆಗೆ ಹಾಲು ನೆಲಕ್ಕೆ ಚೆಲ್ಲುವುದು ಅನಿವಾರ್ಯವಾಗಿದೆ. ಹಾಲು ಚೆಲ್ಲುತ್ತಿರುವುದರಿಂದ ಹಣದ ಕೊರತೆ ಎದುರಾಗಿ ಹಸುಗಳಿಗೆ ಮೇವು ಹಾಕುವುದು ಕಷ್ಟವಾಗುತ್ತಿದೆ ಎಂದು ರೈತರು ನೋವು ತೋಡಿಕೊಂಡರು.

ಗ್ರಾಮಕ್ಕೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಆಗುತ್ತಿರುವ ಸಮಸ್ಯೆ ಮನವರಿಕೆ ಮಾಡಿಕೊಡಲಾಗಿದೆ. ಆದಷ್ಟು ಶೀಘ್ರ ಎಂಪಿಸಿಎಸ್ ತೆರೆಯುವ ಭರವಸೆ ಅವರು ನೀಡಿದ್ದಾರೆ ಎಂದು ಎಂಪಿಸಿಎಸ್ ಕಾರ್ಯದರ್ಶಿ ಮಾದಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು