ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತೆ ಮರೀಚಿಕೆ

Published 9 ಮೇ 2024, 7:47 IST
Last Updated 9 ಮೇ 2024, 7:47 IST
ಅಕ್ಷರ ಗಾತ್ರ

ಹಾರೋಹಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತೆ ಮರೀಚಿಕೆಯಾಗಿದ್ದು ದಿನೇ ದಿನೇ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ.

ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209 ಕಾಮಗಾರಿ ಮುಗಿಯುವ ಹಂತ ತಲುಪಿದ್ದು ಸಮಸ್ಯೆಗಳ ಸರಮಾಲೆಯಿಂದಾಗಿ ಪ್ರಯಾಣಿಕರು ಮತ್ತು ಸಾರ್ವಜನಿಕರು ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆ ಏನು?: ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ( 209) 167 ಕಿ.ಮೀ ದೂರ ಹಾದು ಹೋಗುತ್ತದೆ. 2012-13 ರಲ್ಲಿ ಟೆಂಡರ್ ಕರೆದು 2014ರಲ್ಲಿ ಹೆದ್ದಾರಿ ಅಭಿವೃಧ್ದಿಪಡಿಸಲು ಆದೇಶ ನೀಡಲಾಗಿತ್ತು. ಆದರೂ ಸಹ ಇಂದಿಗೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹಳ್ಳಿಗಳಲ್ಲಿ ಅವೈಜ್ಣಾನಿಕವಾಗಿ ಯು ಟರ್ನ್ ನಿರ್ಮಾಣ, ಅಲ್ಲಲ್ಲಿ ತಗ್ಗುಗಳು, ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ನಿಯಮ ಪಾಲಿಸದಿರುವುದು. ಸಾರ್ವಜನಿಕರಿಗೆ ರಸ್ತೆ ದಾಟಲು ಸರಿಯಾದ ಅವಕಾಶ ಕಲ್ಪಿಸದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿವೆ. ಇದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ದ್ದಾರಿಯಲ್ಲಿ ಸಂಚರಿಸಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರಾಂತ್ಯದಲ್ಲಿ ಅತಿ ಹೆಚ್ಚು ವಾಹನಗಳು: ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸರಾಸರಿ 25-30 ಸಾವಿರ ವಾಹನಗಳು ಸಂಚರಿಸುತ್ತಿದ್ದು ವಾರಾಂತ್ಯದಲ್ಲಿ ಹಾಗೂ ಸರಣಿ ರಜಾ ದಿನಗಳಲ್ಲಂತೂ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ಜಿಲ್ಲೆಯ ಪ್ರವಾಸಿ ತಾಣಗಳು, ಚಾಮರಾಜನಗರ, ಮಂಡ್ಯ, ಮೈಸೂರು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಸಹಜವಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಿದ್ದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಅಭಿವೃಧ್ಧಿಪಡಿಸಲು ಗುತ್ತಿಗೆ ಪಡೆದಿರುವ ಕಂಪನಿ ಮಾತ್ರ ಪ್ರಯಾಣಿಕರ ಮತ್ತು ಸಾರ್ವಜನಿಕರ ಸುರಕ್ಷತೆ ಕಡೆ ಗಮನಹರಿಸುತ್ತಿಲ್ಲ.

ಆಮೆಗತಿಯಲ್ಲಿ ಕಾಮಗಾರಿ; ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಒಟ್ಟು 167 ಕಿ.ಮೀ. ವರೆಗೆ ಅಭಿವೃಧ್ಧಿಪಡಿಸುವ ಕಾಮಗಾರಿಯನ್ನು ಒಟ್ಟು ₹ 1,967 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ರಸ್ತೆ ಅಭಿವೃಧ್ಧಿ ಪಡಿಸುವ ಕಾಮಗಾರಿಯನ್ನು ಮೊದಲಿಗೆ ಬೆಂಗಳೂರಿನ ಕಂಪನಿಗೆ ನೀಡಲಾಗಿತ್ತು. ಕಾಮಗಾರಿ ನಡೆಯತ್ತಿರುವಾಗಲೇ ಕಂಪನಿಯ ಮಾಲೀಕ ನಿಧನ ಹೊಂದಿದ ಹಿನ್ನೆಲೆಯಲ್ಲಿ ಕಾಮಗಾರಿಯೂ ಕೂಡ ಸ್ಥಗಿತಗೊಂಡಿತ್ತು. ಇದಾದ ಬಳಿಕ ಮತ್ತೊಂದು ಕಂಪನಿಗೆ ಗುತ್ತಿಗೆ ನೀಡಿದ್ದು, ಇದೀಗ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಅದೇ ವೆಚ್ಚದಲ್ಲಿಯೇ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಕಂಪನಿಯ ಮಾಲೀಕ ಯಾವುದೇ ನಿಯಮ ಪಾಲಿಸದೇ ಸುರಕ್ಷತಾ ನಿಯಮಗಳನ್ನು ಕೈಗೊಳ್ಳದೇ ರಸ್ತೆ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಭಯಭೀತರಾದ ಜನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮಗಳ ಜನರು ರಸ್ತೆ ದಾಟಲು ಭಯಪಡುತ್ತಿದ್ದಾರೆ. ಅಡ್ಡಾದಿಡ್ಡಿಯಾಗಿ ವಾಹನಗಳು ಬರುವುದರಿಂದ ಜನರಿಗೆ ರಸ್ತೆ ದಾಟಲು ಆಗುತ್ತಿಲ್ಲ.

ಹೆಚ್ಚಾಗುತ್ತಿವೆ ಅಪಘಾತಗಳು: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮಗಿಯವ ಹಂತಕ್ಕೆ ತಲುಪಿದಂತೆ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಪ್ರತಿದಿನ ಒಂದಲ್ಲ ಒಂದು ಹಾಗೂ ವಾರದ ಕೊನೆಯ ದಿನಗಳಲ್ಲಿ 5-6 ಅಪಘಾತಗಳು ನಡೆಯುತ್ತಿವೆ.

ಯಾವುದೇ ಸೂಚನಾ ಫಲಕಗಳಿಲ್ಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಹಾಗೂ ರಸ್ತೆ ದಾಟುವ ಸಾರ್ವಜನಿಕರಿಗೆ ಸುರಕ್ಷತಾ ನಿಯಮಗಳ ತೋರಿಸುವ ಯಾವುದೇ ರೀತಿಯ ಸೂಚನಾ ಫಲಕಗಳ ಹಾಕದಿರುವುದು ಅಪಘಾತಗಳಿಗೆ ಅದು ಕೂಡ ಕಾರಣವಾಗಿದೆ.

ವೇಗ ನಿಯಂತ್ರಣ ಹಂಪ್ಸ್‌ ಹಾಕಿ: ವಾಹನ ಸವಾರರು ಹೆದ್ದಾರಿಯಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದು ಇದರಿಂದ ಕೂಡ ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ಸಾರ್ವಜನಿಕರಿಗೆ ವೇಗವಾಗಿ ಗುದ್ದಿ ಕೆಲವರು ಕಾಲು, ಕೈ ಮುರಿದು ಆಸ್ಪತ್ರೆ ಸೇರುತ್ತಿರುವ ಪ್ರಮಾಣ ಕೂಡ ಬಹಳಷ್ಟು ಹೆಚ್ಚಾಗಿದೆ. ಇವುಗಳಿಗೆ ನಿಯಂತ್ರಣ ಮಾಡಲು ಗ್ರಾಮಗಳ ಬಳಿ ವೇಗ ನಿಯಂತ್ರಣ ಹಂಪ್ಸ್ ಹಾಕಬೇಕು.

ಜೈನ್ ಹಾಗೂ ದಯಾನಂದ ಸಾಗರ್ ಕಾಲೇಜು ಬಳಿ ಸ್ಕೈ ವಾಕ್ ಅಳವಡಿಸುವಂತೆ ಹಾಗೂ ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿಗಳ ಮಾಡುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. -ಕೃಷ್ಣಕುಮಾರ್ ಇನ್‌ಸ್ಪೆಕ್ಟರ್ ಹಾರೋಹಳ್ಳಿ ಪೋಲಿಸ್ ಠಾಣೆ

ರಾಷ್ಟೀಯ ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ಓಡಾಡುತ್ತಿದ್ದು ಜನರು ರಸ್ತೆ ದಾಟಲು ತೊಂದರೆಯಾಗುತ್ತಿದೆ. ಆದಷ್ಟು ಶೀಘ್ರವಾಗಿ ವೇಗ ನಿಯಂತ್ರಣ ಹಂಪ್ಸ್‌ ಹಾಕಬೇಕು.

-ನವೀನ್ ಕುಮಾರ್ ಜಕ್ಕಸಂದ್ರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT