ಕನಿಷ್ಠ ಕೂಲಿ, ಸೌಲಭ್ಯ ಮರೀಚಿಕೆ; ಅಸಂಘಟಿತ ಕಾರ್ಮಿಕರ ಬದುಕಿಗಿಲ್ಲ ರಕ್ಷಣೆ

ಶನಿವಾರ, ಮೇ 25, 2019
27 °C

ಕನಿಷ್ಠ ಕೂಲಿ, ಸೌಲಭ್ಯ ಮರೀಚಿಕೆ; ಅಸಂಘಟಿತ ಕಾರ್ಮಿಕರ ಬದುಕಿಗಿಲ್ಲ ರಕ್ಷಣೆ

Published:
Updated:
Prajavani

ಅಂಕಿ–ಅಂಶ

* ಜಿಲ್ಲೆಯಲ್ಲಿನ ನೋಂದಾಯಿತ ಕಾರ್ಮಿಕರು

* 40,007 –ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು

* 822–ಇತರೆ ಅಸಂಘಟಿತ ಕಾರ್ಮಿಕರು

* 18,400–ನರೇಗಾ ಕಾರ್ಮಿಕರು

* 59,229–ಒಟ್ಟು ನೋಂದಾಯಿತ ಕಾರ್ಮಿಕರು

ರಾಮನಗರ: ಫಿಲೇಚರ್‌ಗಳ ಉರಿಯಲ್ಲಿ ಬೇಯುತ್ತಾ ನೂಲು ತೆಗೆಯುವ ಮಾತೆಯರು, ಇಟ್ಟಿಗೆ ಕಾರ್ಖಾನೆಗಳ ಒಳಗೆ ಬೆವರು ಹರಿಸುವ ಕಾರ್ಮಿಕರು, ಕಾರ್ಖಾನೆಗಳಲ್ಲಿ ದಿನಗೂಲಿಗೆ ದುಡಿಯುತ್ತಾ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಜೀವಗಳು...

ಹೀಗೆ ಜಿಲ್ಲೆಯ ನಾನಾ ವಲಯಗಳಲ್ಲಿ ದುಡಿಯುತ್ತಿರುವವರಲ್ಲಿ ಅಸಂಘಟಿತ ಕಾರ್ಮಿಕರೇ ಬಹುಸಂಖ್ಯಾತರಾಗಿದ್ದಾರೆ. ತಿಂಗಳಿಗೆ ಸಂಬಳ ಪಡೆಯುವವರಿಗಿಂತ ದಿನದ ಕೂಲಿ ಲೆಕ್ಕಕ್ಕೆ ಕೈ ಒಡ್ಡುವವರೇ ಹೆಚ್ಚು. ವೈಟ್‌ ಕಾಲರ್ ನೌಕರರಿಗೆ ಸಿಗುವ ಸಂಬಳ–ಸೌಲಭ್ಯಗಳು ಇವರಿಂದ ಇನ್ನೂ ದೂರವೇ ಉಳಿದಿವೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಮಿಕ ಕಲ್ಯಾಣಕ್ಕೆ ಹಲವು ಕಾನೂನುಗಳನ್ನು ಜಾರಿಗೆ ತಂದಿವೆ. ಕನಿಷ್ಠ ಕೂಲಿ, ದುಡಿಯುವ ಅವಧಿ, ವಾರಕ್ಕೊಂದು ರಜೆ ಎಂಬೆಲ್ಲ ನಿಯಮಗಳು ಇದ್ದರೂ ಅಂಸಘಟಿತ ವಲಯದಲ್ಲಿ ಅದು ಇನ್ನೂ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎನ್ನುವುದು ಕಾರ್ಮಿಕರ ಬೇಸರದ ನುಡಿಗಳು.

ಕಡಿಮೆ ಕೂಲಿ: ದಿನಗೂಲಿ ಲೆಕ್ಕದಲ್ಲಿ ನಡೆಯುವ ವ್ಯವಹಾರಗಳ ಕಡೆ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಮರೀಚಿಕೆಯಾಗಿವೆ. ಫಿಲೇಚರ್, ಇಟ್ಟಿಗೆ ಕಾರ್ಖಾನೆ ಮೊದಲಾದ ಕಡೆಯಲ್ಲೆಲ್ಲ ಶ್ರಮಕ್ಕೆ ತಕ್ಕಂತೆ ಕೂಲಿ ಪಾವತಿಯ ವ್ಯವಸ್ಥೆ ಇದೆ. ದಂಪತಿ ಇಬ್ಬರು ಸೇರಿ ದಿನಕ್ಕೆ ಸಾವಿರ ಇಟ್ಟಿಗೆ ಮಾಡಿದರೆ ₨500 ಕೂಲಿ ಸಿಗುತ್ತದೆ. ಕಟ್ಟಡ ಕಾರ್ಮಿಕರಿಗೆ ಕೊಂಚ ಬೇಡಿಕೆ ಇದ್ದು, ಅಲ್ಲಿ ದಿನದ ಪೂರ್ತಿ ದುಡಿಮೆಗೆ ವೇತನದ ವ್ಯವಸ್ಥೆ ಇದೆ.

ಕಣ್ಣು ಮುಚ್ಚಿ ಕುಳಿತ ಕಾರ್ಮಿಕ ಇಲಾಖೆ: ಕಾರ್ಮಿಕರ ಹಿತ ಕಾಯಬೇಕಾದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನುವುದು ನೌಕರ ಕಾರ್ಮಿಕ ಆರೋಪ.

ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದ ಶ್ರಮಜೀವಿಗಳ ನೋಂದಣಿ ಕಾರ್ಯ ನಡೆಸಿದ್ದು, ಕೇವಲ ಕಟ್ಟಡ ನಿರ್ಮಾಣ ಕಾರ್ಮಿಕರು ಮಾತ್ರವೇ ನೋಂದಣಿ ಆಗಿದ್ದಾರೆ. ಉಳಿದ ಶ್ರಮಜೀವಿಗಳ ಬಗ್ಗೆ ಸರ್ಕಾರದ ಅಧಿಕಾರಿಗಳು ಗಮನ ಹರಿಸಿಲ್ಲ. ಫಿಲೇಚರ್‌ಗಳಲ್ಲಿ ಗಾಳಿ, ಬೆಳಕು, ಶೌಚಾಲಯದ ವ್ಯವಸ್ಥೆಯೇ ಇಲ್ಲದೇ ದುಡಿಯುವ ಸ್ತ್ರೀಯರ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಂಡಿಲ್ಲ ಎಂದು ಮುಖಂಡರಾದ ಶಂಕರ್ ಆರೋಪಿಸುತ್ತಾರೆ.

ಅಸಂಘಟತ ಕಾರ್ಮಿಕರಿಗೂ ಸರ್ಕಾರದ ನೆರವಿನಿಂದ ಇಎಸ್‌ಐ, ಪಿಎಫ್‌ ಸೌಲಭ್ಯ ಕಲ್ಪಿಸಬಹುದಾಗಿದೆ. ಇನ್ನೂ ಹತ್ತು ಹಲವು ಸೌಲಭ್ಯಗಳ ಬಗ್ಗೆ ಇಲಾಖೆಯು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ದೂರುತ್ತಾರೆ.

ಖಾಸಗಿ ವಲಯದಲ್ಲಿಲ್ಲ ಕನಿಷ್ಠ ವೇತನ

ರಾಜ್ಯ ಸರ್ಕಾರವು ಪ್ರತಿ ಕಾರ್ಮಿಕನಿಗೆ ತಿಂಗಳಿಗೆ ಕನಿಷ್ಠ ₨14ರಿಂದ 18 ಸಾವಿರದಷ್ಟು ಕನಿಷ್ಠ ವೇತನ ಗೊತ್ತುಪಡಿಸಿದೆ. ಆದರೆ ಇಷ್ಟು ಪ್ರಮಾಣದ ವೇತನ ನೀಡುವ ಸಂಸ್ಥೆಗಳು ಬೆರಳೆಣಿಕೆಯಷ್ಟಿವೆ. ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೂ ₨7–8 ಸಾವಿರಕ್ಕೆ ಶಿಕ್ಷಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಹೋಟೆಲ್‌ನಲ್ಲಿ ಸಪ್ಲೆಯರ್‌ ಆಗಿರುವ ಹುಡುಗನ ಸಂಬಳವು ₨6–7 ಸಾವಿರದಷ್ಟಿದೆ. ಚಿಲ್ಲರೆ ಅಂಗಡಿಗಳು, ಮೊಬೈಲ್‌ ಶಾಪ್‌ಗಳಲ್ಲಿಯೂ ಕೆಲವೇ ಸಾವಿರಕ್ಕೆ ದುಡಿಯುವ ವರ್ಗದ ಸಂಖ್ಯೆ ಸಾಕಷ್ಟಿದೆ.

ಸರ್ಕಾರದ ಮಟ್ಟದಲ್ಲೇ ಅನ್ಯಾಯ!

ಜಿಲ್ಲಾ ಪಂಚಾಯಿತಿಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ದುಡಿಸಿಕೊಳ್ಳುತ್ತಿದ್ದು, ಸರ್ಕಾರದ ಮಟ್ಟದಲ್ಲಿಯೇ ವಂಚನೆ ನಡೆಯುತ್ತಿದೆ.

ಆರೋಗ್ಯ ಇಲಾಖೆಯಲ್ಲಿ ಈಚೆಗೆ ಗುತ್ತಿಗೆ ನೌಕರರಿಗೆ ಸಂಬಂಧಿಸಿದ ಏಜೆನ್ಸಿ ನಾಲ್ಕೈದು ತಿಂಗಳು ಸಂಬಳವನ್ನೇ ನೀಡದೇ, ಪಿಎಫ್‌ ಸೌಲಭ್ಯವನ್ನೂ ಕಲ್ಪಿಸದೇ ವಂಚಿಸಿದ್ದು ಬೆಳಕಿಗೆ ಬಂದು ಚರ್ಚೆಯಾಗಿತ್ತು. ಇನ್ನೂ ಸಾಕಷ್ಟು ಇಲಾಖೆಗಳಲ್ಲಿ ಸರ್ಕಾರ ಗೊತ್ತುಪಡಿಸಿದ್ದಕ್ಕಿಂತ ಕಡಿಮೆ ವೇತನ ನೀಡಿ ವಂಚಿಸಿದ ಬಗ್ಗೆ ಜಿ.ಪಂ. ಸಭೆಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೆ ಕಠಿಣ ಕ್ರಮ ಕೈಗೊಂಡ ಉದಾಹರಣೆಗಳು ಕಡಿಮೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !