ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸಿಯುವ ಭೀತಿಯಲ್ಲಿ ಪೆಟ್ಟಾ ಸರ್ಕಾರಿ ಶಾಲೆ

ಸೋರುತ್ತಿವೆ ಶಾಲೆಯ ಹತ್ತು ಕೊಠಡಿಗಳು; ಆತಂಕದಲ್ಲಿ ವಿದ್ಯಾರ್ಥಿಗಳು
Published 30 ಜೂನ್ 2024, 5:20 IST
Last Updated 30 ಜೂನ್ 2024, 5:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ಸುಮಾರು 75 ವರ್ಷಗಳಷ್ಟು ಹಳೆಯದಾದ ನಗರದ ಪೆಟ್ಟಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವು ಶಿಥಿಲವಾಗಿದ್ದು, ಬೀಳುವ ಹಂತ ತಲುಪಿದೆ. ಮಳೆ ಬಂದಾಗ ಚಾವಣಿಯಿಂದ ಸೋರುವ ನೀರು ಲೆಕ್ಕಸದೆ, ಚಾವಣಿ ಕಳಚಿ ಬೀಳುವ ಆತಂಕದಲ್ಲಿಯೇ ವಿದ್ಯಾರ್ಥಿಗಳು ಪಾಠ ಕಲಿಯುವ ಪರಿಸ್ಥಿತಿ ಎದುರಾಗಿದೆ.

ಶಾಲೆಯಲ್ಲಿ 1ರಿಂದ ಏಳನೇ ತರಗತಿವರೆಗೆ ಸುಮಾರು 147 ವಿದ್ಯಾರ್ಥಿಗಳಿದ್ದಾರೆ. ಶಾಲಾ ಕಟ್ಟಡದಲ್ಲಿ 10 ಕೊಠಡಿಗಳಿವೆ. ಮಳೆ ಬಂದರೆ ಬಹುತೇಕ ಕೊಠಡಿಗಳು ಸೋರುತ್ತವೆ. ಇದರಿಂದಾಗಿ ಕಲಿಕೋಪಕರಣಗಳು ಹಾಗೂ ಪಿಠೋಪಕರಣಗಳು ಸಹ ಮಳೆಯಲ್ಲೆ ನೆನೆದು ಹಾನಿಗೊಳ್ಳುತ್ತಿವೆ. ಸೋರಿಕೆಯಿಂದಾಗಿ ಗೋಡೆಗಳ ಬಣ್ಣ ಬದಲಾಗಿದೆ.

ಕೊಠಡಿಗಳ ಕೊರತೆ: ‘ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ. ಆದರೆ ‘ಡಿ’ ಗ್ರೂಪ್ ನೌಕರರನ್ನು ಕೊಟ್ಟಿಲ್ಲ. ಪ್ರತಿ ವರ್ಷವೂ ಸ್ಥಳೀಯ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುತ್ತಾರೆ. ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ.ಯನ್ನು ಹೊಸದಾಗಿ ಆರಂಭಿಸಲಾಗಿದ್ದು, ಸುಮಾರು 20 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ, ಹೊಸ ತರಗತಿಗಳನ್ನ ನಡೆಸಲು ಬೇಕಾದ ಕೊಠಡಿಗಳೇ ಇಲ್ಲವಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಚಲುವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಟ್ಟಡದ ದುಃಸ್ಥಿತಿ ಗಮನಿಸಿದ ಶಿಕ್ಷಣ ಇಲಾಖೆಯು, ಕಳೆದ ವರ್ಷ ಜಿಲ್ಲಾ ಪಂಚಾಯಿತಿ ವತಿಯಿಂದ ಕೊಠಡಿಗಳನ್ನು ನಿರ್ಮಿಸಿದೆ. ಆದರೆ, ಈ ಕೊಠಡಿಗಳು ಮೂರಂಕಿ ಮಕ್ಕಳಿಗೆ ಸಾಲದಾಗಿದೆ. ಹಾಗಾಗಿ, ವಿಧಿ ಇಲ್ಲದೆ ಶಿಥಿಲ ಕೊಠಡಿಗಳನ್ನೇ ಆಶ್ರಯಿಸುವಂತಾಗಿದೆ. ಮಕ್ಕಳನ್ನು ನೆಲದ ಮೇಲೆಯೇ ಕೂರಿಸಿ ಪಾಠ ಹೇಳಿ ಕೊಡುವ ಸ್ಥಿತಿ ಇಲ್ಲಿದೆ’ ಎಂದು ಹೇಳಿದರು.

ಸೌಕರ್ಯಗಳಿಲ್ಲ: ಶಾಲೆಯಲ್ಲಿ ಮೂಲಕೌಕರ್ಯಗಳ ಕೊರತೆಯೂ ಇದೆ. ಕುಡಿಯುವ ನೀರಿನ ಜೊತೆಗೆ, ವ್ಯವಸ್ಥಿತವಾದ ಶೌಚಾಲಯವಿಲ್ಲ. ಶಾಲೆಗೆ ಮುಖ್ಯವಾಗಿ ಕಾಂಪೌಂಡ್ ಇಲ್ಲದಿರುವುದರಿಂದ ಹೊರಗಿನವರು ಸಹ ಶಾಲಾವರಣಕ್ಕೆ ಬರುವುದು ಸಾಮಾನ್ಯವಾಗಿದೆ. ಶಾಲೆಯು ರಸ್ತೆಗೆ ಹೊಂದಿಕೊಂಡಂತೆ ಇರುವ ಕಾರಣ ಮಕ್ಕಳನ್ನು ನೋಡಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ’ ಎಂದು ಶಾಲೆಯ ಶಿಕ್ಷಕರಾದ ಎಂ. ರಮೇಶ್, ಎನ್. ಮಮತಾ, ವಿ. ಲಕ್ಷ್ಷ್ಮಮ್ಮ ಅಳಲು ತೋಡಿಕೊಂಡರು.

‘ದುಃಸ್ಥಿತಿಯಲ್ಲಿರುವ ಶೌಚಾಲಯದ ಬಾಗಿಲನ್ನು ಒಡೆದು ಹಾಕಲಾಗಿದೆ. ಕಾಂಪೌಂಡ್ ಇಲ್ಲದ ಕಾರಣ ಶಾಲೆಯ ಆವರಣ ಬೀದಿ ನಾಯಿಗಳ, ಹಂದಿಗಳ ಆವಾಸ ಸ್ಥಳವಾಗಿದೆ. ಶಾಲೆಯ ಆವರಣದಲ್ಲಿ ಹಾಕುವ ಕಸದ ರಾಶಿಗೆ ಬೀದಿನಾಯಿಗಳು, ಹಂದಿಗಳು ಮುತ್ತಿಗೆ ಹಾಕುತ್ತವೆ’ ಎಂದು ಸಾರ್ವಜನಿಕರು ದೂರಿದರು.

ಪ್ರತಿಭಟಿಸಿದ್ದ ಪೋಷಕರು: ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡವನ್ನು ತಕ್ಷಣ ದುರಸ್ತಿ ಮಾಡಬೇಕು ಹಾಗೂ ಹೊಸ ಕಟ್ಟಡವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಎರಡು ವರ್ಷದ ಹಿಂದೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳಕ್ಕೆ ಬಂದಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು, ತಹಶೀಲ್ದಾರ್, ಕಟ್ಟಡ ದುರಸ್ತಿಯ ಭರವಸೆ ನೀಡಿದ್ದರು.

ಜೊತೆಗೆ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಜಿಲ್ಲಾಧಿಕಾರಿ ಮುಂತಾದವರು ಭೇಟಿ ನೀಡಿ ಶಾಲೆಯ ದುಃಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆಗಿನ ಶಾಸಕ ಎಚ್.ಡಿ. ಕುಮಾರಸ್ವಾಮಿ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಷ್ಟಾದರೂ ನೂತನ ಕಟ್ಟಡ ಕಟ್ಟಿಸುವ ಅಥವಾ ಇರುವ ಕಟ್ಟಡ ದುರಸ್ತಿ ಮಾಡಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಎಂದು ಪೋಷಕರಾದ ಹಿದಾಯತ್, ಸಲೀಂ, ಮುನಾವರ್ ಬೇಸರ ವ್ಯಕ್ತಪಡಿಸಿದರು.

ಶಿಥಿಲ ಕಟ್ಟಡದಲ್ಲಿ ಏನಾದರೂ ಅನಾಹುತ ಸಂಭವಿಸುವುದಕ್ಕೆ ಮುಂಚೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಿಸಬೇಕು. ಆ ಮೂಲಕ ಶಾಲೆಯ ಮಕ್ಕಳ ಮತ್ತು ಶಿಕ್ಷಕರ ಪ್ರಾಣವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಶಾಲೆಯ ಸ್ಥಿತಿ ಕುರಿತು ಪ್ರತಿಕ್ರಿಯೆ ಕೇಳಲು ಬಿಇಒ ಮರೀಗೌಡ ಅವರ ಮೊಬೈಲ್ ಸಂಖ್ಯೆಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ಶಾಲಾ ಕಟ್ಟಡ ಸಂಪೂರ್ಣ ಶಿಥಿಲವಾಗಿ ಗೋಡೆ ಬಿರುಕು ಬಿಟ್ಟಿರುವುದು
ಶಾಲಾ ಕಟ್ಟಡ ಸಂಪೂರ್ಣ ಶಿಥಿಲವಾಗಿ ಗೋಡೆ ಬಿರುಕು ಬಿಟ್ಟಿರುವುದು
ಶಾಲಾ ಕಟ್ಟಡದ ಚಾವಣಿಯ ಕಾಂಕ್ರೀಟ್ ಕಳಚಿ ಬಿದ್ದು ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ
ಶಾಲಾ ಕಟ್ಟಡದ ಚಾವಣಿಯ ಕಾಂಕ್ರೀಟ್ ಕಳಚಿ ಬಿದ್ದು ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ
ಶಾಲೆಯ ಕೊಠಡಿಯೊಂದರ ಚಾವಣಿಯ ದುಃಸ್ಥಿತಿ
ಶಾಲೆಯ ಕೊಠಡಿಯೊಂದರ ಚಾವಣಿಯ ದುಃಸ್ಥಿತಿ
ಶಾಲಾವರಣದಲ್ಲಿ ನಿರ್ಮಿಸಿರುವ ಮೂರು ಕೊಠಡಿಗಳ ಬಳಿ ಇರುವ ಕಸದ ರಾಶಿಯು ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಸಿದೆ
ಶಾಲಾವರಣದಲ್ಲಿ ನಿರ್ಮಿಸಿರುವ ಮೂರು ಕೊಠಡಿಗಳ ಬಳಿ ಇರುವ ಕಸದ ರಾಶಿಯು ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಸಿದೆ
ನೆಲದಲ್ಲಿ ಕುಳಿತು ಪಾಠ ಕೇಳುತ್ತಿರುವ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳು
ನೆಲದಲ್ಲಿ ಕುಳಿತು ಪಾಠ ಕೇಳುತ್ತಿರುವ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳು
ಟಿ. ಚಲುವರಾಜು ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆಟ್ಟಾ
ಟಿ. ಚಲುವರಾಜು ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆಟ್ಟಾ
ಎಂ. ರಮೇಶ್ ಹಿರಿಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆಟ್ಟಾ
ಎಂ. ರಮೇಶ್ ಹಿರಿಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆಟ್ಟಾ

ಶಾಲೆಯಲ್ಲಿ ಛಾವಣಿ ಕಳಚಿ ಬೀಳುತ್ತಿರುವ ಕೊಠಡಿಗಳಲ್ಲಿಯೆ ಪಾಠಪ್ರವಚನ ನಡೆಯುತ್ತಿದ್ದು, ಈ ಕೊಠಡಿಗಳಲ್ಲಿಯೆ ಕಚೇರಿ, ಕಂಪ್ಯೂಟರ್ ಕೊಠಡಿ, ಕ್ರೀಡಾ ಸಾಮಗ್ರಿ ಕೊಠಡಿಗಳನ್ನು ವಿಭಾಗ ಮಾಡಿಕೊಂಡು ಪಾಠ ಮಾಡುವಂತಾಗಿದೆ ಎಂದು ಇಲ್ಲಿನ ಶಿಕ್ಷಕರು ತಿಳಿಸುತ್ತಾರೆ.

ಕಟ್ಟಡ ಮಾತ್ರವಲ್ಲದೆ ಶಾಲೆಯಲ್ಲಿ ಕಲಿಕಾ ಸೌಲಭ್ಯಗಳು ಸರಿಯಾಗಿಲ್ಲ. ಮಕ್ಕಳು ಭಯದ ವಾತಾವರಣದಲ್ಲಿ ನೆಲದಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು
ಸಲ್ಮಾ ಬಾನು ಅಧ್ಯಕ್ಷೆ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆಟ್ಟಾ

ಕೊಠಡಿ ಪಕ್ಕದಲ್ಲೆ ಕಸದ ರಾಶಿ ಶಾಲೆಯ ಕೊಠಗಳ ದುಃಸ್ಥಿತಿಯ ಒಂದು ಸಮಸ್ಯೆಯಾದರೆ ಜಿಲ್ಲಾ ಪಂಚಾಯಿತಿವರು ಮೂರು ಕೊಠಡಿಗಳ ಬಳಿ ಕಸದ ರಾಶಿ ಇರುವುದು ಮತ್ತೊಂದು ಸಮಸ್ಯೆ. ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಕೊಠಡಿಗಳ ಬಳಿಯೇ ಸ್ಥಳೀಯರು ಕಸ ತಂದು ಎಸೆಯುತ್ತಿದ್ದಾರೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ನಗರಸಭೆಯವರು ಕಸವನ್ನು ನಿತ್ಯ ತೆರವು ಮಾಡುವ ಬದಲು ಮೂರ್ನಾಲ್ಕು ದಿನಕ್ಕೊಮ್ಮೆ ವಿಲೇವಾರಿ ಮಾಡುತ್ತಾರೆ. ಇದರಿಂದಾಗಿ ಮೂರ್ನಾಲ್ಕು ದಿನ ಒಂದೇ ಕಡೆ ಇರುವ ಕಸವು ಗಬ್ಬೆದ್ದು ನಾರುತ್ತದೆ. ಕೊಠಡಿಗಳ ಕಿಟಕಿ ಬಾಗಿಲು ತೆಗೆದರು ದುರ್ನಾತ ಬೀರುತ್ತದೆ. ಇದರಿಂದಾಗಿ ಕಿಟಕಿ ಬಾಗಿಲು ಮುಚ್ಚಿಕೊಂಡೇ ಪಾಠ ಮಾಡಬೇಕಿದೆ. ಜೊತೆಗೆ ಶಾಲೆಯ ಮೈದಾನದಲ್ಲಿ ಅಲ್ಲಲ್ಲಿ ಹಳೆಯ ಕಟ್ಟಡಗಳ ಕಲ್ಲು ಮಣ್ಣು ಸಿಮೆಂಟ್ ಅವಶೇಷಗಳ ಕಸವನ್ನು ಸಹ ಸುರಿಯಲಾಗುತ್ತಿದೆ ಎಂದು ಶಾಲೆಯ ಶಿಕ್ಷಕರು ಅಳಲು ತೋಡಿಕೊಂಡರು. ಹೊಸ ಕಟ್ಟಡಕ್ಕೆ ಕಂಪನಿ ಸಹಾಯಹಸ್ತ  ‘ಶಾಲೆಯ ದುಸ್ಥಿತಿ ತಿಳಿದು ಬಿಡದಿಯ ಟಯೋಟಾ ಕಿರ್ಲೋಸ್ಕರ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸ ಕೊಟ್ಟಡ ನಿರ್ಮಿಸಲು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕಟ್ಟಡ ನಿರ್ಮಾಣ ಮಾಡಲು ಈ ಜಾಗ ಶಾಲೆಯ ಹೆಸರಿನಲ್ಲಿ ಇಲ್ಲದಿರುವುದು ಅಡ್ಡಿಯಾಗಿದೆ. ಶಾಲೆಯ ಆಸ್ತಿ ಈಗಲೂ ಸರ್ಕಾರಿ ಗೋಮಾಳದ ಹೆಸರಲ್ಲಿ ಉಳಿದಿದೆ. ಶಾಲೆ ಮತ್ತು ಆಟದ ಮೈದಾನ ಸೇರಿ 3 ಎಕರೆ ಜಮೀನು ಇದೆ. ಜಾಗವನ್ನು ಶಾಲೆಯ ಹೆಸರಿಗೆ ಮಾಡಿಸಿಕೊಂಡರೆ ಕಂಪನಿಯಿಂದ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಜಾಗವನ್ನು ಶಾಲೆ ಹೆಸರಿಗೆ ನೋಂದಣಿ ಮೊದಲು ದಾಖಲೆಗಳ ಸಮೇತ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದೆವು. ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಜಾಗ ನಗರಸಭೆಗೆ ಸೇರಿದ್ದು ಎಂದು ತಿಳಿಸಿದರು. ಈಗ ನಗರಸಭೆಗೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದೇವೆ. ಶಾಲೆಯ ಹೆಸರಿಗೆ ಜಾಗ ಖಾತೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಮುಖ್ಯ ಶಿಕ್ಷಕ ಚಲುವರಾಜು ತಿಳಿಸಿದರು.

‘ಮಕ್ಕಳ ಕಲಿಕೆಗೆ ಯೋಗ್ಯವಾಗಿಲ್ಲ’ ‘ಶಿಥಿಲವಾಗಿರುವ ಶಾಲಾ ಕಟ್ಟಡದಲ್ಲಿರುವ ಯಾವುದೇ ಕೊಠಡಿಗಳು ಮಕ್ಕಳ ಕಲಿಕೆಗೆ ಯೋಗ್ಯವಾಗಿಲ್ಲ. ಮಳೆ ಬಂದಾಗ ಕೊಠಡಿಗಳು ಸೋರಲಾರಂಭಿಸಿದಾಗ ಒಂದು ಮೂಲೆಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡಬೇಕು. ಚಾವಣಿ ಯಾವಾಗ ಕಳಚಿ ಬೀಳುತ್ತದೋ ಎಂಬ ಭಯದಲ್ಲಿಯೇ ನಾವು ಪಾಠ ಮಾಡಬೇಕಿದೆ. ಶಿಕ್ಷಕರು ಮತ್ತು ಮಕ್ಕಳು ಜೀವ ಕೈಯಲ್ಲಿಡಿದುಕೊಂಡು ಕಟ್ಟಡದೊಳಗೆ ಕಾಲ ಕಳೆಯಬೇಕಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಟಿ. ಚಲುವರಾಜು ಒತ್ತಾಯಿಸಿದರು. ‘ಬೇಗ ಹೊಸ ಕಟ್ಟಡ ನಿರ್ಮಿಸಿ’ ‘ಜೋರಾದ ಮಳೆ ಮತ್ತು ಗಾಳಿ ಬೀಸಿದಾಗಲೆಲ್ಲ ಶಿಥಿಲವಾಗಿರುವ ಕಟ್ಟಡದ ಕಾಂಕ್ರೀಟ್‌ನ ಚೂರುಗಳು ಆಗಾಗ ಕಳಚಿ ಬೀಳುತ್ತವೆ. ಕೆಲವೊಮ್ಮೆ ಮಕ್ಕಳ ಮೇಲೂ ಬಿದ್ದಿವೆ. ಮಳೆ ಬಂದರೆ ಚಾವಣಿ ಮತ್ತು ಗೋಡೆಗಳಲ್ಲಿ ನೀರು ಜಿನುಗುತ್ತದೆ. ಬಡವರ ವಿದ್ಯಾ ದೇಗುಲವಾಗಿರುವ ಶಾಲಾ ಕಟ್ಟಡವು ಹಳೆಯದಾಗಿರುವುದರಿಂದ ಅದನ್ನು ಕೆಡವಿ ಹೊಸದಾಗಿಯೇ ನಿರ್ಮಾಣ ಮಾಡಬೇಕಿದೆ. ಏನಾದರೂ ಅನಾಹುತ ಸಂಭವಿಸುವುದಕ್ಕೆ ಮುಂಚೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕಿದೆ’ ಎಂದು ಶಾಲೆಯ ಹಿರಿಯ ಶಿಕ್ಷಕ ಎಂ. ರಮೇಶ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT