ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಕ್ತಿ ಕೇಂದ್ರ’ ರಾಮನಗರ ಜಿಲ್ಲೆಯಲ್ಲೀಗ ರಾಜಕೀಯ ತಲ್ಲಣ!

ಕಾರ್ಯಕ್ರಮ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿದ ಡಿಕೆಶಿ: ಪ್ರತಿ ತಂತ್ರಗಾರಿಕೆ ಕಸರತ್ತು
Last Updated 7 ಜುಲೈ 2019, 9:47 IST
ಅಕ್ಷರ ಗಾತ್ರ

ರಾಮನಗರ: ಸಮ್ಮಿಶ್ರ ಸರ್ಕಾರದ ಶಕ್ತಿ ಕೇಂದ್ರದಂತೆ ಇರುವ ರಾಮನಗರ ಜಿಲ್ಲೆಯಲ್ಲಿ ಸದ್ಯದ ರಾಜಕೀಯ ಬೆಳವಣಿಗೆಗಳು ತಲ್ಲಣ ಮೂಡಿಸಿವೆ.

ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಅವರ ಪತ್ನಿ ಅನಿತಾ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಜಿಲ್ಲೆಯ ಶಾಸಕರೇ ಆಗಿದ್ದಾರೆ. ಮಾಗಡಿ ಶಾಸಕ ಎ.ಮಂಜು ಸಹ ಜೆಡಿಎಸ್‌ನವರು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ ಕೆಲವು ಬದಲಾವಣೆ ಆಗುತ್ತಿವೆ. ದಶಕದಿಂದ ನನೆಗುದಿಗೆ ಬಿದ್ದ ಯೋಜನೆಗಳಿಗೆ ಮತ್ತೆ ಚಾಲನೆ ದೊರೆಯುತ್ತಿದೆ. ನೀರಾವರಿ ಯೋಜನೆಗಳು, ರಸ್ತೆ ವಿಸ್ತರಣೆ ಮೊದಲಾದವುಗಳಿಗೆ ಮುಖ್ಯಮಂತ್ರಿ ಸಾವಿರಾರು ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಆದರೆ ಯಾವೊಂದು ಕಾಮಗಾರಿಗೂ ಸ್ಪಷ್ಟ ರೂಪ ಸಿಕ್ಕಿಲ್ಲ. ಇಂತಹ ಹೊತ್ತಲ್ಲಿ ಸರ್ಕಾರ ಉರುಳಿದ್ದೇ ಆದಲ್ಲಿ ಜಿಲ್ಲೆಯ ಅಭಿವೃದ್ಧಿ ಹಿನ್ನಡೆ ಆಗಲಿದೆ ಎನ್ನುವುದು ಜನರ ಆತಂಕ.

ಜಿಲ್ಲೆಯಲ್ಲಿ ಮೂವರು ಜೆಡಿಎಸ್‌ ಹಾಗೂ ಒಬ್ಬರು ಕಾಂಗ್ರೆಸ್‌ ಶಾಸಕರು ಇದ್ದಾರೆ. ಈ ಪೈಕಿ ಮೂವರಂತೂ ಸರ್ಕಾರದ ಅವಿಭಾಜ್ಯ ಅಂಗದಂತೆ ಇದ್ದಾರೆ. ಮಾಗಡಿ ಶಾಸಕ ಎ.ಮಂಜುನಾಥ್‌ ಬಿಜೆಪಿ ಸೇರ್ಪಡೆ ಸಾಧ್ಯತೆಯೂ ಕಡಿಮೆ. ಹೀಗಾಗಿ ಜಿಲ್ಲೆಯಲ್ಲಿ ಸದ್ಯಕ್ಕೆ ಪಕ್ಷಾಂತರ ಪರ್ವ ಸಾಧ್ಯತೆಗಳು ಇಲ್ಲ.

ಹೀಗೂ ಇದೆ ಇತಿಹಾಸ

ಸರ್ಕಾರ ರಚನೆಯ ಏಳು–ಬೀಳುಗಳ ಸಂದರ್ಭಗಳಲ್ಲಿ ಇಲ್ಲಿನ ಶಾಸಕರೂ ಪಕ್ಷಾಂತರ ಮಾಡಿದ ಉದಾಹರಣೆಗಳು ಇವೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳೇ ಅದಲು ಬದಲಾಗಿದ್ದು ಕುತೂಹಲ ಮೂಡಿಸಿತ್ತು. ಜೆಡಿಎಸ್‌ನಿಂದ ಶಾಸಕರಾಗಿದ್ದ ಎಚ್‌.ಸಿ. ಬಾಲಕೃಷ್ಣ ಕಾಂಗ್ರೆಸ್‌ಗೆ ಜಿಗಿದಿದ್ದರು. ಹೀಗಾಗಿ ಕಾಂಗ್ರೆಸ್‌ ಮುಖಂಡ ಎ.ಮಂಜುನಾಥ್‌ ಜೆಡಿಎಸ್‌ನ ಕದ ತಟ್ಟಿದ್ದರು.

ಚನ್ನಪಟ್ಟಣದ ಮುಖಂಡ ಸಿ.ಪಿ. ಯೋಗೇಶ್ವರ್‌ ಸಹ ಬಿಜೆಪಿಯ ಸೆಳೆತಕ್ಕೆ ಒಳಗಾದವರು. ಕಾಂಗ್ರೆಸ್ ಪಾಳಯದಿಂದ ಬಿಜೆಪಿಗೆ ಜಿಗಿದು ಸಚಿವರೂ ಆದವರು. ನಂತರದಲ್ಲಿ ಮತ್ತೆ ಬಿಎಸ್ಪಿ, ಕಾಂಗ್ರೆಸ್ ಸಖ್ಯ ಬೆಳೆಸಿ ಇದೀಗ ಬಿಜೆಪಿಯಲ್ಲಿಯೇ ಮುಂದುವರಿದಿದ್ದಾರೆ. ಚನ್ನಪಟ್ಟಣದಿಂದ ಶಾಸಕರಾದ ಎಂ.ಸಿ. ಅಶ್ವಥ್‌ ಸಹ ಶಾಸಕರಾಗಿದ್ದಾಗಲೇ ರಾಜೀನಾಮೆ ನೀಡಿ ಬಿಜೆಪಿಯ ಸಖ್ಯ ಬೆಳೆಸಿದ್ದರು.

ಕಳೆದ ರಾಮನಗರ ವಿಧಾನಸಭೆ ಉಪ ಚುನಾವಣೆ ಮತ್ತೊಂದು ರಾಜಕೀಯ ನಾಟಕಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್‌ನ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್‌. ಚಂದ್ರಶೇಖರ್ ಬಿಜೆಪಿಗೆ ಜಿಗಿದು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೂ ಆದರು. ಮತದಾನಕ್ಕೆ ಇನ್ನೆರಡು ದಿನ ಇರುವಾಗ ಚುನಾವಣೆ ಕಣದಿಂದ ನಿವೃತ್ತಿಯಾಗಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.

ಸುದ್ದಿ ಕೇಳಿ ಡಿಕೆಶಿ ಶಾಕ್‌

ಶನಿವಾರ ಕನಕಪುರ ತಾಲ್ಲೂಕಿನಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಜನಸಂಪರ್ಕ ಸಭೆ ಹಮ್ಮಿಕೊಂಡಿದ್ದರು. ಕನಕಪುರದಲ್ಲಿಯೇ ಉಳಿದಿದ್ದ ಅವರು ಮುಂಜಾನೆ ಖುಷಿಯಾಗಿ ಜಾಗ್‌ ಮಾಡಿ ಜನರನ್ನು ಮಾತನಾಡಿಸಿದ್ದರು. ಆದರೆ ಶಾಸಕರ ರಾಜೀನಾಮೆ ಸುದ್ದಿ ತಿಳಿಯುತ್ತಲೇ ಕಾರ್ಯಕ್ರಮ ಮೊಟಕುಗೊಳಿಸಿ, ದಿಢೀರ್‌ ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿಗೆ ದೌಡಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು ‘ಬಿಜೆಪಿಯವರು ಶಾಸಕರನ್ನು ದನ–ಕುರಿಗಳಂತೆ ಖರೀದಿ ಮಾಡಬೇಕೆಂದು ಬೆಂಗಳೂರಿನ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿದ್ದಾರೆ. ಆದರೆ ನಮ್ಮ ಶಾಸಕರು ಅದಕ್ಕೆ ಮಣಿಯುವುದಿಲ್ಲ. ಸರ್ಕಾರ ಉಳಿಯುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮತ್ತೆ ನಡೆಯುತ್ತಾ ರೆಸಾರ್ಟ್‌ ರಾಜಕೀಯ?

ಸರ್ಕಾರ ಅಸ್ಥಿರಗೊಳ್ಳುವ ಸೂಚನೆ ಸಿಗುತ್ತಿದ್ದಂತೆ ರೆಸಾರ್ಟ್‌ ರಾಜಕೀಯವೂ ಮತ್ತೆ ಮುನ್ನಲೆಗೆ ಬರುತ್ತಿದೆ. ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ ಈಗಾಗಲೇ ಅಂತಹ ಹಲವು ಸಂದರ್ಭಗಳಲ್ಲಿ ಆತಿಥ್ಯ ವಹಿಸಿದೆ. ಕರ್ನಾಟಕದ ಕಾಂಗ್ರೆಸ್‌ ಶಾಸಕರ ಜೊತೆಗೆ ಗುಜರಾತ್‌ ಶಾಸಕರಿಗೂ ಆತಿಥ್ಯ ಉಣಬಡಿಸಿದೆ. ಆದರೆ ಕಳೆದ ರೆಸಾರ್ಟ್‌ ವಾಸ್ತವ್ಯದ ವೇಳೆ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವಿನ ಹೊಡೆದಾಟ ಘಟನೆಯು ರೆಸಾರ್ಟ್‌ ವಾಸ್ತವ್ಯಕ್ಕೆ ಕಪ್ಪುಚುಕ್ಕಿ ಉಳಿಯಿತು. ಈ ಬಾರಿ ಕಾಂಗ್ರೆಸ್‌ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಮತ್ತೆ ರೆಸಾರ್ಟಿಗೆ ಮೊರೆ ಹೋದರೂ ಈಗಲ್‌ಟನ್‌ಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

*ಶಾಸಕರು ಕೊಟ್ಟ ರಾಜೀನಾಮೆ ಅಂಗೀಕಾರಕ್ಕೆ ಸಾಕಷ್ಟು ಪ್ರಕ್ರಿಯೆಗಳಿವೆ. ಸರ್ಕಾರ ಕೆಡವಲು ಬಿಜೆಪಿಯವರು ಗುತ್ತಿಗೆದಾರರ ಬಳಿ ಹಣ ವಸೂಲಿ ಮಾಡಿದ್ದಾರೆ
–ಡಿ.ಕೆ. ಶಿವಕುಮಾರ್‌
ಜಲ ಸಂಪನ್ಮೂಲ ಸಚಿವ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT