ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಓದುಗರ ವಲಯ ವಿಸ್ತರಿಸಿದ ತೇಜಸ್ವಿ’

ಕಸಾಪದಿಂದ ತೇಜಸ್ವಿ ಸಾಹಿತ್ಯಯಾನ– ಯುವಸ್ಪಂದನ ಕಾರ್ಯಕ್ರಮ
Published : 28 ಸೆಪ್ಟೆಂಬರ್ 2024, 7:09 IST
Last Updated : 28 ಸೆಪ್ಟೆಂಬರ್ 2024, 7:09 IST
ಫಾಲೋ ಮಾಡಿ
Comments

ರಾಮನಗರ: ‘ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರ ಸಂಖ್ಯೆಯನ್ನು ಅಪಾರವಾಗಿ ವಿಸ್ತರಿಸಿದ ಕೀರ್ತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರದ್ದು. ನೆಲಮೂಲದ ಸಂಸ್ಕೃತಿ, ಪರಿಸರ ಕಾಳಜಿಯನ್ನು ತಮ್ಮ ಬರಹಗಳಲ್ಲಿ ಅನಾವರಣಗೊಳಿಸಿದ ಅವರು ಇಂದಿನ ಯುವಪೀಳಿಗೆಯ ಆಶಾಕಿರಣವಾಗಿದ್ದಾರೆ’ ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ನ್ಯೂ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ತೇಜಸ್ವಿ ಸಾಹಿತ್ಯಯಾನ ಹಾಗೂ ಯುವಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ತೇಜಸ್ವಿ ಅವರು ನಾಡಿನ ಸಾಂಸ್ಕೃತಿ ರಾಯಭಾರಿ ಕುವೆಂಪು ಅವರ ಪುತ್ರನಾದರೂ, ತಂದೆಯ ಯಾವುದೇ ಛಾಯೆಯನ್ನೂ ಮೈಗೂಡಿಸಿಕೊಳ್ಳಲಿಲ್ಲ’ ಎಂದರು.

‘ತಾನು ನಡೆದದ್ದೇ ದಾರಿ ಎಂಬಂತೆ ನಡೆದ ತೇಜಸ್ವಿ, ಹತ್ತಾರು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡಿದರು. ಅನ್ಯ ಭಾಷೆಯಲ್ಲಿನ ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದರು. ಪರಿಸರ ಕುರಿತು ಬರೆದು ಕಾಡಿನ ಸಾಹಿತಿಯಾದರು. ಈಗಲೂ ಅವರ ಸಾಹಿತ್ಯ ಕೃತಿಗಳು ಕನ್ನಡದ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿವೆ’ ಎಂದು ಬಣ್ಣಿಸಿದರು.

ಸನ್ಮಾನ: 2023ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಸಿದ್ಧರಾಜು ಅವರನ್ನು ಗೌರವಿಸಲಾಯಿತು. 7 ಚಿನ್ನದ ಪದಕ ಪಡೆದ ವಿಶಾಲಾಕ್ಷಿ ವೈ.ಬಿ ಮತ್ತು 1 ಚಿನ್ನದ ಪದಕ ಪಡೆದ ಸಾಗರ್ ಬಿ.ಸಿ ಅವರನ್ನು ಗೌರವಿಸಲಾಯಿತು.

ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಟಿ. ನಾಗೇಶ್ ಮತ್ತು ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಮಾತನಾಡಿದರು. ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಡಾ. ಡಿ.ಆರ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಆರ್.ಎನ್. ಶ್ರೀನಿವಾಸ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ವನರಾಜು, ಪರಿಷತ್ತಿನ ಗೌರವ ಕೋಶಾಧ್ಯಕ್ಷ ನಂಜುಂಡಿ ಬಾನಂದೂರು, ಸಂಚಾಲಕ ಬಿ.ಟಿ. ರಾಜೇಂದ್ರ, ಕೂಟಗಲ್ ಹೋಬಳಿ ಅಧ್ಯಕ್ಷ ದೇವರಾಜ್, ಪ್ರಕಾಶ್, ಕುಮಾರ್ ಇದ್ದರು.

ಹಿರಿಯ ಗಾಯಕ ಚೌ.ಪು. ಸ್ವಾಮಿ ಗಾಯನ ನಡೆಸಿಕೊಟ್ಟರು. ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಅರುಣ್ ಆನುಮಾನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಉಪ ಪ್ರಾಂಶುಪಾಲ ಚಂದ್ರಶೇಖರ್ ವಂದನಾರ್ಪಣೆ ಮಾಡಿದರು.

‘ಸಮೂಹವಾದದ ಚಿಂತನೆ ಬಿತ್ತಿದ ಕವಿ’

‘ಪ್ರಗತಿಪರ ಚಳುವಳಿಯ ಧಾರೆಗೆ ಧುಮುಕಿದ ತೇಜಸ್ವಿ ಸಮೂಹವಾದದ ಚಿಂತನೆಗಳನ್ನು ಬಿತ್ತಿದರು. ಸರಳ ಬರಹದ ಸಂಕೀರ್ಣ ವಿಚಾರಧಾರೆಗಳ ಚಿಂತಕರಾಗಿದ್ದ ಅವರು ಹಿಂದಿನ ಬೆಂಚಿನ ವಿದ್ಯಾರ್ಥಿಯಾಗಿದ್ದರು. ಹಲವು ಸಂಕರಗಳ ನಡುವೆ ತಮ್ಮ ಚಿಂತನೆಯ ಮೊನಚು ಹಂಚಿಕೊಂಡರು. ಕತೆಗಾರರಾಗಿ ಪರಿಸರ ತಜ್ಞರಾಗಿ ಪಕ್ಷಿಲೋಕದ ಸಂಶೋಧಕರಾಗಿ ಸೂಕ್ಷ್ಮ ಸಂವೇದನೆಯ ದೊಡ್ಡ ವ್ಯಕ್ತಿಯಾಗಿ ತೇಜಸ್ವಿ ಅವರು ರೂಪುಗೊಂಡದ್ದು ಇತಿಹಾಸ. ನಾಡಿನಲ್ಲಿ ಬಾಲ್ಯ ಕಳೆದು ಕಾಡಿಗೆ ಬಂದು ಇಡೀ ಜಗತ್ತನ್ನು ನಿರುತ್ತರದ ಮೂಲಕ ಕನ್ನಡ ಜಗತ್ತಿಗೆ ತೆರೆದು ತೋರಿಸಿದ ಅವರ ಬರಹಗಳು ಇಂದಿಗೂ ಆಯಸ್ಕಾಂತದಂತೆ ಓದುಗರನ್ನು ಹಿಡಿದಿಟ್ಟಕೊಳ್ಳುತ್ತವೆ’ ಎಂದು ಸಾಹಿತಿ ಜಿ.ಎಚ್. ರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT