ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಆದೇಶ ಹಿಂಪಡೆಯದಿದ್ದರೆ ಧರಣಿ ಎಚ್ಚರಿಕೆ

ಡಿ.ಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಿರ್ಬಂಧಕ್ಕೆ ಸಂಘಟನೆಗಳ ವಿರೋಧ
Published : 30 ಆಗಸ್ಟ್ 2024, 5:14 IST
Last Updated : 30 ಆಗಸ್ಟ್ 2024, 5:14 IST
ಫಾಲೋ ಮಾಡಿ
Comments

ರಾಮನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಕಚೇರಿ ಸುತ್ತ 100 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಆದೇಶಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ ಕಚೇರಿ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿವೆ.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ‘ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ಸೆ. 9ರಂದು ಕನ್ನಡಪರ, ದಲಿತಪರ, ರೈತಪರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಡಿ.ಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಹೇಳಿದರು.

‘ಸಂವಿಧಾನವು ಜನರಿಗೆ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುವ ಹಕ್ಕು ನೀಡಿದೆ. ಅಂತಹ ಸಾಂವಿಧಾನಿಕ ಹಕ್ಕನ್ನು ಜಿಲ್ಲಾಧಿಕಾರಿ ಮೊಟಕುಗೊಳಿಸಲು ಮುಂದಾಗಿದ್ದಾರೆ. ಬೇರಾವ ಜಿಲ್ಲೆಯಲ್ಲೂ ಇರದ ನಿರ್ಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಲ್ಲಿ ಮಾತ್ರ ಯಾಕೆ? ಜನರ ಸಮಸ್ಯೆಗಳ ಪರವಾಗಿ ದನಿ ಎತ್ತುವ ಸಂಘಟನೆಗಳ ದನಿ ಹತ್ತಿಕ್ಕುವ ಈ ನಡೆ ಖಂಡನೀಯ’ ಎಂದರು.

ರೈತ ಸಂಘದ ಮುಖಂಡ ಮಲ್ಲಯ್ಯ ಮಾತನಾಡಿ, ‘ಜಿಲ್ಲಾಧಿಕಾರಿ ಆದೇಶವು ಸರ್ವಾಧಿಕಾರಿತನಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಜನಪರವಾಗಿರಬೇಕು. ಅನ್ಯಾಯಕ್ಕೊಳಗಾದವರು ಕಚೇರಿಗೆ ಬಂದಾಗ ಅವರ ಅಳಲು ಆಲಿಸಿ ಸ್ಪಂದಿಸಬೇಕು. ಅದು ಬಿಟ್ಟು ತಮ್ಮ ಬಳಿಗೆ ಬರಬಾರದು ಎಂದರೆ ಹೇಗೆ? ಡಿ.ಸಿ ತಮ್ಮ ಆದೇಶವನ್ನು ಹಿಂಪಡೆಯದಿದ್ದರೆ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು’ ಎಂದು ಹೇಳಿದರು.

‘ಅಧಿಕಾರಿಗಳು ಜನರನ್ನು ಅಲೆಸದೆ ಸಕಾಲದಲ್ಲಿ ಕೆಲಸಗಳನ್ನು ಮಾಡಿಕೊಟ್ಟರೆ ಯಾರೂ ಪ್ರತಿಭಟನೆ ಅಥವಾ ಹೋರಾಟಕ್ಕಿಳಿಯುವುದಿಲ್ಲ. ಜಿಲ್ಲಾಧಿಕಾರಿ ಮೊದಲು ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಜನರ ಕೆಲಸಗಳು ಆಗುತ್ತಿವೆಯೇ ಎಂಬುದನ್ನು ಮೊದಲು ಗಮನಿಸಬೇಕು’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ) ಬಣದ ಜಿಲ್ಲಾಧ್ಯಕ್ಷ ರಾಜು ಎಂ.ಎನ್‌.ಆರ್, ‘ಸರ್ಕಾರಿ ಕಚೇರಿಗಳಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರಕ್ಕೆ ಜಿಲ್ಲಾಧಿಕಾರಿ ಮೊದಲು ಕಡಿವಾಣ ಹಾಕಲಿ. ಅನ್ಯಾಯದ ವಿರುದ್ಧ ತಮ್ಮ ಕಚೇರಿ ಬಳಿ ಪ್ರತಿಭಟಿಸುವ ಜನರಿಗೆ ನಿರ್ಬಂಧ ವಿಧಿಸುವ ಜಿಲ್ಲಾಧಿಕಾರಿ ಆದೇಶ ಜನವಿರೋಧಿಯಾಗಿದ್ದು, ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶಿವುಗೌಡ, ವಿವಿಧ ಸಂಘಟನೆಗಳ ಮುಖಂಡರಾದ ನರಸಿಂಹಮೂರ್ತಿ, ಚೀಲೂರು ಮುನಿರಾಜು, ಜಯಕುಮಾರ್, ಕೆಂಪರಾಜು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT