ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಳಿಗೆ 300ಕ್ಕೂ ಹೆಚ್ಚು ವಿದ್ಯುತ್ ಕಂಬ ಧರೆಗೆ: ಬೆಸ್ಕಾಂಗೆ ₹1.40 ಕೋಟಿ ನಷ್ಟ

Published 18 ಮೇ 2024, 4:44 IST
Last Updated 18 ಮೇ 2024, 4:44 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆರಾಯ, ಒಂದೆಡೆ ರೈತರ ಮೊಗದಲ್ಲಿ ಉತ್ತಮ ಮಳೆಯಾಗುವ ಭರವಸೆಯ ಮುಗುಳ್ನಗೆ ಮೂಡಿಸಿದ್ದಾನೆ. ಆದರೆ, ಮತ್ತೊಂದೆಡೆ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಯು ನಷ್ಟದ ಬರೆಯನ್ನು ಎಳೆದಿದೆ. ಜಿಲ್ಲೆಯಾದ್ಯಂತ ಬೆಸ್ಕಾಂಗೆ ಅಂದಾಜು ₹ 1.40 ಕೋಟಿ ನಷ್ಟವಾಗಿದೆ.

ಭಾರಿ ಗಾಳಿಯ ಅಬ್ಬರದೊಂದಿಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರು ಳಿವೆ. ಕೆಲವೆಡೆ ಕಂಬಗಳು ಅರ್ಧಕ್ಕೆ ಮುರಿದು ಹೋಗಿದ್ದರೆ, ಉಳಿದೆಡೆ ಪೂರ್ಣವಾಗಿ ನೆಲ ಕಚ್ಚಿವೆ. ಬಿರುಸಾದ ಗಾಳಿ ಏಟು ತಡೆಯಲಾಗದೆ ಹಲವೆಡೆ ವಿದ್ಯುತ್ ಪರಿವರ್ತಕಗಳು ಸಹ ಬಿದ್ದು ಹೋಗಿವೆ. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ, ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

₹ 88 ಲಕ್ಷ ನಷ್ಟ: ‘ರಾಮನಗರ ಉಪ ವಿಭಾಗದಲ್ಲಿ ಮಳೆ ಮತ್ತು ಗಾಳಿಯಿಂದಾಗಿ 215 ಕಂಬಗಳು ಸಂಪೂರ್ಣ ಹಾನಿಗೊಂಡಿವೆ. ಈ ಪೈಕಿ ರಾಮನಗರ ತಾಲ್ಲೂಕಿನಲ್ಲಿ 70 ಹಾಗೂ ಚನ್ನಪಟ್ಟಣದಲ್ಲಿ 145 ಕಂಬಗಳು ಧರೆಗುರುಳಿವೆ. ರಾಮನಗರಕ್ಕಿಂತ ಚನ್ನಪಟ್ಟಣ ದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದ್ದರಿಂದ ಅಲ್ಲಿಯೇ ಹೆಚ್ಚು ಹಾನಿ ಯಾಗಿದೆ’ ಎಂದು ಬೆಸ್ಕಾಂ ರಾಮನಗರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಬಗಳಷ್ಟೇ ಅಲ್ಲದೆ, ಎರಡೂ ತಾಲ್ಲೂಕುಗಳಲ್ಲಿ ಒಟ್ಟು 45 ವಿದ್ಯುತ್ ಪರಿವರ್ತಕಗಳು ಹಾಗೂ 39 ಎರಡು ಕಂಬಗಳ ಸ್ಟ್ರಕ್ಚರ್‌ ಗಳು ಸಹ ಹಾನಿಗೊಂಡಿವೆ. ವಿಷಯ ತಿಳಿಯುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಕಂಬಗಳು ಹಾಗೂ ಪರಿವರ್ತಕ ಗಳನ್ನು ತೆರವುಗೊಳಿಸಿದ್ದಾರೆ. ಮಳೆ–ಗಾಳಿಯಿಂದಾಗಿ ಅಂದಾಜು ₹ 88 ಲಕ್ಷ ನಷ್ಟವಾಗಿದೆ’ ಎಂದು ಹೇಳಿದರು.

ರಾಮನಗರ ತಾಲ್ಲೂಕಿನ ಕೋಡಿಪುರದಲ್ಲಿ ಧರೆಗುರುಳಿದ್ದ ವಿದ್ಯುತ್ ಕಂಬದ ಜಾಗದಲ್ಲಿ ಹೊಸ ಕಂಬ ಅಳವಡಿಸಿದ ಬೆಸ್ಕಾಂ ಸಿಬ್ಬಂದಿ

ರಾಮನಗರ ತಾಲ್ಲೂಕಿನ ಕೋಡಿಪುರದಲ್ಲಿ ಧರೆಗುರುಳಿದ್ದ ವಿದ್ಯುತ್ ಕಂಬದ ಜಾಗದಲ್ಲಿ ಹೊಸ ಕಂಬ ಅಳವಡಿಸಿದ ಬೆಸ್ಕಾಂ ಸಿಬ್ಬಂದಿ

₹ 25 ಲಕ್ಷ ನಷ್ಟ: ‘ಮಾಗಡಿ ತಾಲ್ಲೂಕಿನಲ್ಲಿ ಗಾಳಿ–ಮಳೆ ಅಬ್ಬರಕ್ಕೆ 25 ಕಂಬಗಳು ನೆಲ ಕಚ್ಚಿವೆ. ಸುಮಾರು 15 ಟ್ರಾನ್ಸ್‌ ಫಾರ್ಮರ್‌ಗಳು ಹಾನಿಗೊಂಡಿವೆ. ಇದರಿಂದಾಗಿ ಸುಮಾರು ₹ 25 ಲಕ್ಷದಷ್ಟು ನಷ್ಟವಾಗಿದೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಹಾನಿಯಾಗಿದೆ’ ಎಂದು ಬೆಸ್ಕಾಂ ಮಾಗಡಿ ಉಪ ವಿಭಾಗದ ಜೆಇ ಶಿವರಾಜ್ ಮಾಹಿತಿ ನೀಡಿದರು.

‘ಕುದೂರು ಹೋಬಳಿ ಮತ್ತು ಆಸುಪಾಸಿನಲ್ಲಿ ಸುಮಾರು 6 ಕಂಬಗಳು ಸಂಪೂರ್ಣವಾಗಿ ಹಾನಿಗೊಂಡಿರುವ ವರದಿಯಾಗಿದ್ದು, ₹ 70 ಸಾವಿರ ನಷ್ಟ ವಾಗಿದೆ. ವಿದ್ಯುತ್ ಪರಿವರ್ತಕಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮುಂಚಿತ ವಾಗಿಯೇ ವಿದ್ಯುತ್ ತಂತಿಗಳು ಸಾಗಿರುವ ಮಾರ್ಗಕ್ಕೆ ಅಡಚಣೆ ಯಾಗಿದ್ದ ಮರದ ಕೊಂಬೆಗಳನ್ನು ತೆರವು ಮಾಡಿದ್ದರಿಂದ ಹೆಚ್ಚು ಹಾನಿ ಸಂಭವಿ ಸಿಲ್ಲ’ ಎಂದು ಬೆಸ್ಕಾಂ ಕುದೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಟಿ. ನಾಯಕ್ ತಿಳಿಸಿದರು.

₹ 28 ಲಕ್ಷ ಬರೆ: ‘ಕನಕಪುರ ತಾಲ್ಲೂಕಿನ ಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿಯೂ ಮಳೆ–ಗಾಳಿಯಿಂದಾಗಿ ಅಲ್ಲಿಯೂ 55 ಕಂಬಗಳು ಮುರಿದು ಬಿದ್ದಿದ್ದರೆ, 16 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ. ಸುಮಾರು ₹ 28 ಲಕ್ಷ ನಷ್ಟವಾಗಿದೆ’ ಎಂದು ಬೆಸ್ಕಾಂ ಕನಕಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ್ ಹೇಳಿದರು.

ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳಿಗೆ ಹಾನಿಯಾಗಿದ್ದರಿಂದ ಗ್ರಾಮೀಣ ಭಾಗದ ಜನರು ಒಂದೆರಡು ದಿನ ಕತ್ತಲೆಯಲ್ಲಿ ಕಳೆಯಬೇಕಾಯಿತು. ಕಂಬಗಳು ಬಿದ್ದಿರುವ ಮಾಹಿತಿ ಬರುತ್ತಿದ್ದಂತೆಯೇ ಆ ಮಾರ್ಗದ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ ಬೆಸ್ಕಾಂ ಸಿಬ್ಬಂದಿ, ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ಮತ್ತೊಂದೆಡೆ ಹಾನಿಗೊಂಡಿರುವ ಪರಿವರ್ತಕಗಳ ದುರಸ್ತಿ ಕೆಲಸವೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮರ, ಕೊಂಬೆ ತೆರವಿಗೆ ಕ್ರಮ
ಮಳೆ ಮತ್ತು ಗಾಳಿ ಅಬ್ಬರದ ಬೆನ್ನಲ್ಲೇ, ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಪರಿವರ್ತಕಗಳು ಇರುವ ಕಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಕೊಂಬೆಗಳ ತೆರವಿಗೆ ಬೆಸ್ಕಾಂ ಮುಂದಾಗಿದೆ. ಮುಖ್ಯ ರಸ್ತೆಗಳು, ಜನವಸತಿ ಪ್ರದೇಶಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಸಾಗಿರುವ ವಿದ್ಯುತ್ ಮಾರ್ಗದ ಕೊಂಬೆಗಳ ಜೊತೆಗೆ ಒಣಗಿದ ಮರಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ತೆರವು ಕಾರ್ಯ ನಡೆದಿದ್ದರೂ, ಮುಂಗಾರು ಸಮೀಪಿಸುತ್ತಿರು ವುದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.
ಭಾರಿ ಗಾಳಿ ಸಹಿತ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳ ಮರು ಅಳವಡಿಕೆ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಿ, ಎಂದಿನಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ
ನಾಗರಾಜ್, ಕಾರ್ಯನಿರ್ವಾಹಕ ಎಂಜಿನಿಯರ್, ಬೆಸ್ಕಾಂ, ರಾಮನಗರ ಉಪ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT