ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಆಗ ಎಚ್‌ಡಿಕೆ, ಈಗ ಡಿಕೆಶಿಗೆ ಪಾಠ

ಘಟನಾಘಟಿ ನಾಯಕರ ರಾಜಕೀಯ ಲೆಕ್ಕಾಚಾರ ತಲೆ ಕೆಳಗಾಗಿಸಿದ ಮತದಾರ
Published 9 ಜೂನ್ 2024, 5:08 IST
Last Updated 9 ಜೂನ್ 2024, 5:08 IST
ಅಕ್ಷರ ಗಾತ್ರ

ರಾಮನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಮನಸ್ಸು ಮಾಡಿದರೆ ರಾಜಕಾರಣದಲ್ಲಿ ಎಂತಹ ಚಮತ್ಕಾರ ಬೇಕಾದರೂ ನಡೆಯುತ್ತದೆ. ಜನರ ಮತಶಕ್ತಿ ಮುಂದೆ ಹಣ ಬಲ, ಜಾತಿ ಬಲ ಹಾಗೂ ಅಧಿಕಾರ ಬಲ ನಡೆಯದು. ನಿಜ, ಅಂತಹದ್ದೇ ಜನಶಕ್ತಿ ರಾಜಕಾರಣಕ್ಕೆ ರಾಮನಗರ ಜಿಲ್ಲೆ ಕಳೆದೊಂದು ವರ್ಷದಲ್ಲಿ ಸಾಕ್ಷಿಯಾಗಿದೆ.

ಒಂದು ವರ್ಷದ ಅವಧಿಯಲ್ಲಿ ನಡೆದ ಎರಡು ಚುನಾವಣೆಗಳು ಜಿಲ್ಲೆಯ ಇಬ್ಬರು ಘಟನಾನುಘಟಿ ರಾಜಕೀಯ ನಾಯಕರಿಗೆ ಮಹಾಪಾಠ ಕಲಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಘಾತ ನೀಡಿದ್ದ ಮತದಾರರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಶಾಕ್ ಕೊಟ್ಟಿದ್ದಾರೆ.

ಇಬ್ಬರೂ ನಾಯಕರು ತಾವು ಪ್ರತಿನಿಧಿಸುವ ಪಕ್ಷಗಳ ರಾಜ್ಯ ಅಧ್ಯಕ್ಷರು. ಪ್ರಬಲ ಒಕ್ಕಲಿಗ ಸಮುದಾಯದವರು. ಸಾಕಷ್ಟು ಹಣ ಬಲವಿರುವವರು. ಇವರ ಪಕ್ಷ ಅಧಿಕಾರದಲ್ಲಿದ್ದರೂ, ಇಲ್ಲದಿದ್ದರೂ ತಮ್ಮ ರಾಜಕೀಯ ಬಲದ ಮೂಲಕ ಅಧಿಕಾರ ಚಲಾಯಿಸಬಲ್ಲವರು. ಎಚ್‌ಡಿಕೆ ನೆಲೆ ರಾಮನಗರವಾದರೆ, ಕನಕಪುರ ಡಿಕೆಶಿ ತವರು.

ನಾಯಕರಿಗೆ ಇಷ್ಟೆಲ್ಲ ರಾಜಕೀಯ ಗುಣಲಕ್ಷಣಗಳಿದ್ದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್‌ಡಿಕೆ ಪುತ್ರನನ್ನು ಮತದಾರರು ಸೋಲಿಸಿದರು. ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಸಹೋದರನನ್ನು ಮನೆಗೆ ಕಳಿಸಿದರು. ಅತಿ ಮಾಡಿದವರಿಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ವಿಶ್ರಾಂತಿ ಕೊಟ್ಟರು.

ವಿರೋಧಿ ಅಲೆ: ‘2018 ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಸ್ಪರ್ಧಿಸಿ ಗೆದ್ದಿದ್ದ ಕುಮಾರಸ್ವಾಮಿ ಅವರು, ತಮ್ಮನ್ನು ಮುಖ್ಯಮಂತ್ರಿ ಹುದ್ದೆಗೇರಿಸಿದ್ದ ರಾಮನಗರ ತ್ಯಜಿಸಿ ಚನ್ನಪಟ್ಟಣ ಉಳಿಸಿಕೊಂಡರು. ಉಪ ಚುನಾವಣೆಯಲ್ಲಿ ಪತ್ನಿ ಅನಿತಾ ಅವರನ್ನು ನಿಲ್ಲಿಸಿ ಗೆಲ್ಲಿಸಿದರು. ಶಾಸಕಿಯಾಗಿದ್ದ ಅವರು ಜನರ ಕೈಗೆ ಸಿಗಲಿಲ್ಲ. ಪಕ್ಷದ ಕಾರ್ಯಕರ್ತರ ನೋವು–ನಲಿವುಗಳಿಗೆ ಸ್ಪಂದಿಸಲಿಲ್ಲ. ಇದು ಆಡಳಿತ ವಿರೋಧಿ ಅಲೆ ಜತೆಗೆ ಎಚ್‌ಡಿಕೆ ವಿರುದ್ಧ ಅಸಮಾಧಾನಕ್ಕೂ ಕಾರಣವಾಗಿತ್ತು’ ಎಂದು ಸ್ಥಳೀಯ ಜೆಡಿಎಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರ ದರ್ಪ: ‘ಅಣ್ಣ ಡಿ.ಕೆ.ಶಿವಕುಮಾರ್ ಬೆನ್ನೆಲುಬಾಗಿ ತೆರೆ ಹಿಂದೆ ರಾಜಕಾರಣ ಮಾಡುತ್ತಿದ್ದ ಡಿ.ಕೆ.ಸುರೇಶ್, 2013ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಚುನಾವಣಾ ರಾಜಕೀಯ ಪ್ರವೇಶಿಸಿ ಮೂರು ಸಲ ಸಂಸತ್ತು ಪ್ರವೇಶಿಸಿದ್ದರು. ರಾಜಕೀಯವಾಗಿ ಪ್ರಬಲವಾಗಿದ್ದ ಸಹೋದರರಿಗೆ ಸ್ವಾಭಾವಿಕವಾಗಿಯೇ ಅಧಿಕಾರ ದರ್ಪವಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ 3 ‘ಕೈ’ವಶವಾಗಿ, ಡಿಕೆಶಿ ಉಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಅಧಿಕಾರದ ಅಮಲು ತಲೆಗೇರಿತ್ತು. ಲೋಕಸಭೆ ಚುನಾವಣೆಯಲ್ಲಿ ಜನ ಅಮಲು ಇಳಿಸಿಕೊಳ್ಳುವಂತಹ ಫಲಿತಾಂಶ ಕೊಟ್ಟರು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಸಹೋದರರ ರಾಜಕೀಯವನ್ನು ಓರೆಗೆ ಹಚ್ಚಿದರು.ಕಳೆದೆರಡು ಚುನಾವಣೆಗಳು ಇಲ್ಲಿನ ಮತದಾರರು ಮನಸ್ಥಿತಿ ಜಗಜ್ಜಾಹೀರುಗೊಳಿಸಿವೆ. ಜಿಲ್ಲೆಯು ಎಚ್‌ಡಿಕೆ ಮತ್ತು ಡಿಕೆಶಿ ಕುಟುಂಬದ ರಾಜಕೀಯ ಕಣವಾಗಿದೆ. ಈ ಕುಟುಂಬಗಳ ರಾಜಕೀಯ ಸಮರದ ಪ್ರಮುಖ ಪಾತ್ರಧಾರಿಗಳಾದ ಮತದಾರರು, ಇಬ್ಬರ ಪ್ರತಿಷ್ಠೆಯನ್ನೂ ಎತ್ತಿ ಹಿಡಿದಿದ್ದಾರೆ. ಅತಿ ಎನಿಸಿದಾಗ ಪೆಟ್ಟು ಕೊಟ್ಟು ಬುದ್ಧಿ ಕಲಿಸಿದ್ದಾರೆ.

ಪುತ್ರನ ಸೋಲಿಸಿ ಪಾಠ

‘ಅನಿತಾ ಕುಮಾರಸ್ವಾಮಿ ಅವರು ರಾಮನಗರ ಶಾಸಕಿಯಾಗಿದ್ದಾಗ ಪಕ್ಷದ ಕಾರ್ಯಕರ್ತರು ಮತ್ತು ಜನರ ನೋವು–ನಲಿವುಗಳಿಗೆ ಸ್ಪಂದಿಸಲಿಲ್ಲ. ಅವರ ಕಾರ್ಯವೈಖರಿಗೆ ಜನ ತೀವ್ರ ಬೇಸತ್ತಿದ್ದರು. ಜನರ ಸಿಟ್ಟು ಆಡಳಿತ ವಿರೋಧಿ ಅಲೆಯಾಗಿ ಬದಲಾಗಿ, ಕುಮಾರಸ್ವಾಮಿ ಅವರ ವಿರುದ್ಧವೂ ಅಸಮಾಧಾನಕ್ಕೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ತಮ್ಮ ಕುಟುಂಬದ ಯಾರೇ ನಿಂತರೂ ಜನ ಗೆಲ್ಲಿಸುತ್ತಾರೆ ಎಂದುಕೊಂಡಿದ್ದ ಎಚ್‌ಡಿಕೆ, 2023ರ ಚುನಾವಣೆಯಲ್ಲಿ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಿದ್ದರು. ಅಂತಿಮವಾಗಿ ಜನ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಎಚ್‌.ಎ. ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿ ಎಚ್‌ಡಿಕೆಗೆ ಪಾಠ ಕಲಿಸಿದ್ದರು’ ಎಂದು ಸ್ಥಳೀಯ ರಾಜಕಾರಣಿಯೊಬ್ಬರು ವಿಶ್ಲೇಷಿಸಿದರು.

ಸಹೋದರನ ಸೋಲಿಸಿ ಆಘಾತ

‘ರಾಜ್ಯ ಸರ್ಕಾರದ ಎರಡನೇ ಶಕ್ತಿಯಾಗಿರುವ ಶಿವಕುಮಾರ್, ಅತ್ತ ಬೆಂಗಳೂರಿನ ಜೊತೆಗೆ ಇತ್ತ ರಾಮನಗರವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡರು. ಸಹೋದರರ ಅಧಿಕಾರ ಕೇಂದ್ರಿಕರಣಕ್ಕೆ ಸ್ವಪಕ್ಷಿಯರಲ್ಲೇ ಅಸಮಾಧಾನದ ಅಲೆ ಏಳತೊಡಗಿತು. ಕನಕಪುರಕ್ಕೆ ರಾಮನಗರದ ವೈದ್ಯಕೀಯ ಕಾಲೇಜು ಕೊಂಡೊಯ್ಯುವ ಪ್ರಯತ್ನ, ನಾವು ಬೆಂಗಳೂರಿನವರು ಎನ್ನುತ್ತಲೇ ರಾಮನಗರ ಜಿಲ್ಲೆ ಬಗ್ಗೆ ತೋರಿದ ಅಸಡ್ಡೆ ಸೇರಿದಂತೆ ಜಿಲ್ಲೆಯಲ್ಲಿ ವರ್ಷದೊಳಗೆ ನಡೆದ ಕೆಲ ಬೆಳವಣಿಗೆಗಳು ಸಹೋದರರ ವಿರುದ್ಧ ಜನಾಕ್ರೋಶ ಮಡುಗಟ್ಟುವಂತೆ ಮಾಡಿದ್ದವು. ಎಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದ ಮತದಾರರು ಲೋಕಸಭೆ ಚುನಾವಣೆಯಲ್ಲಿ ಸುರೇಶ್‌ಗೆ ಸೋಲಿನ ರುಚಿ ತೋರಿಸಿದರು. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಆಘಾತ ನೀಡಿದರು’ ಎಂದು ರಾಜಕಾರಣಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT